ದೇವದುರ್ಗ ತಹಸೀಲ್ದಾರ್ ನ ಅಂಧಾ ಕಾನೂನಿಗೆ ಬೀದಿಗೆ ಬಂದ ಬಡ ಕುಟುಂಬ!
ಒಬ್ಬರಿಗೆ ನ್ಯಾಯ ಕೊಡಿಸಲು ಹೋಗಿ ಮತ್ತೊಂದು ಕುಟುಂಬಕ್ಕೆ ಅನ್ಯಾಯ. ಹಕ್ಕು ಪತ್ರ ಪರಿಶೀಲನೆ ಮಾಡದೇ ಮನೆ ಖಾಲಿ ಮಾಡಿಸಿದ ತಹಸೀಲ್ದಾರ್ ಕೆ.ವೈ.ಬಿದ್ರಿ. ದೇವದುರ್ಗ ಗೇಡ್ -2 ತಹಸೀಲ್ದಾರ್ ಕೆ.ವೈ.ಬಿದ್ರಿಯ ದುರಾಡಳಿತ
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಜೂ.22): ಜಿಲ್ಲೆಯಲ್ಲಿ 2009ರಲ್ಲಿ ಭಾರೀ ಮಳೆಯಾಗಿತ್ತು. ಭಾರೀ ಮಳೆಯ ಜೊತೆಗೆ ಕೃಷ್ಣ ನದಿಯಲ್ಲಿ ಪ್ರವಾಹ ಬಂದಿತ್ತು. ಪ್ರವಾಹದಲ್ಲಿ ಜಿಲ್ಲೆಯ ಲಿಂಗಸೂಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕಿನ ಕೆಲ ಹಳ್ಳಿಗಳು ಮುಳುಗಡೆ ಆಗಿದ್ದವು, ಮನೆಗಳು ಹಾಳಾಗಿರುವ ಕುಟುಂಬಗಳಿಗೆ ತಾಲೂಕಾಡಳಿತ 2009ರಲ್ಲಿ ನಿವೇಶನಗಳನ್ನು ಮುಂಜೂರು ಮಾಡಿದ್ದವು. ಅದರಂತೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವೀರಗೋಟ ಗ್ರಾಮದಲ್ಲಿ ಸಹ 2009ರ ಪ್ರವಾಹದಿಂದ ಹಾನಿಗೆ ಒಳಗಾದ ಮನೆಗಳಿಗೆ ವೀರಗೋಟ ಗ್ರಾಮದ ನವಗ್ರಾಮದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. 2013ರಲ್ಲಿ ಆ ನಿವೇಶನದ ಪಡೆದ ಫಲಾನಭವಿಗಳಿಗೆ ಮನೆಯ ಹಕ್ಕು ಪತ್ರಗಳನ್ನು ಸಹ ತಹಸೀಲ್ದಾರ್ ಮುಖಾಂತರ ನಿರಾಶ್ರಿತರಿಗೆ ವಿತರಣೆ ಮಾಡಿದ್ರು. ಹಕ್ಕು ಪತ್ರ ನೀಡುವ ಮುನ್ನವೇ ನಿರಾಶ್ರಿತರು ಮನೆಗಳಲ್ಲಿ ಹೋಗಿ ವಾಸ ಮಾಡಲು ಶುರು ಮಾಡಿದ್ರು. ಆ ಬಳಿಕ ಮನೆಗಳಿಗೆ ಯಾವುದೇ ನಂಬರ್ ಸಹ ಹಾಕದೇ ಹಕ್ಕು ಪತ್ರಗಳನ್ನು ವಿತರಣೆ ಮಾಡಿದ್ರು. ಹಕ್ಕು ಪತ್ರಗಳು ಪಡೆದ ನಿರಾಶ್ರಿತರು ಸರ್ಕಾರ ನೀಡಿದ ಮನೆಯಲ್ಲಿ ವಾಸವಾಗಿದ್ರು. ಕಳೆದ 12 ವರ್ಷಗಳಿಂದ ಹತ್ತಾರು ಕುಟುಂಬಗಳು ಸರ್ಕಾರದ ಮನೆಗಳಲ್ಲಿ ವಾಸವಾಗಿದ್ದಾರೆ.
ಈಗ ಮನೆ ಖಾಲಿ ಮಾಡಿಸಿದ್ದು ಏಕೆ?
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ವೀರಗೋಟ ಗ್ರಾಮದ ಬಸನಗೌಡ ತಂದೆ ಶಿವನಗೌಡ ಕುಟುಂಬವೂ ಕಳೆದ 12 ವರ್ಷಗಳಿಂದ ಹಕ್ಕು ಪತ್ರ ಪಡೆದು ಸರ್ಕಾರ ನೀಡಿದ ಮನೆಯಲ್ಲಿ ವಾಸವಾಗಿತ್ತು. ಆದ್ರೆ ನೀಡಿರುವ ಹಕ್ಕು ಪತ್ರದ ಪ್ರಕಾರ ಆ ಕುಟುಂಬಕ್ಕೆ ಬೇರೆ ಮನೆ ಮಂಜೂರಾಗಿತ್ತು. ಆ ಮನೆಯಲ್ಲಿ ಬೇರೊಂದು ಕುಟುಂಬ ವಾಸವಾಗಿತ್ತು. ಹೀಗಾಗಿ ಮೊದಲು ಬಂದು ಹಿಡಿದ ಮನೆಯಲ್ಲೇ ಬಸವನಗೌಡನ ಹೆಂಡತಿ, ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ವಾಸವಾಗಿದ್ದಾರೆ. ಆದ್ರೆ ಇತ್ತೀಚಿಗೆ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಬಿಟ್ಟು ಬಸವನಗೌಡ ಮತ್ತು ಪತ್ನಿ ಜಗದೇವಿ ಹಾಗೂ ಮಗನನ್ನು ಕಳೆದುಕೊಂಡ ಬೆಂಗಳೂರಿಗೆ ಗೂಳೆ ಹೋಗಿದ್ರು. ಆ ವೇಳೆ ತಾಲೂಕಾ ಅಡಳಿತದ ಸೂಚನೆ ಮೇರೆಗೆ ಚಿಂಚೋಡಿ ಗ್ರಾಮ ಪಂಚಾಯತ್ ಪಿಡಿಒ ಮನೆ ಖಾಲಿ ಮಾಡಿ ಈ ಮನೆಯೂ ದುರ್ಗಮ್ಮ ಗಂಡ ವಿರೂಪಾಕ್ಷಿ ಅವರಿಗೆ ಸೇರಿದ ಮನೆಯಾಗಿದೆ ಎಂದು ನೋಟೀಸ್ ಜಾರಿ ಮಾಡಿದ್ರು. ಈ ವಿಚಾರ ತಿಳಿದ ಜಗದೇವಿ ಗಂಡ ಮತ್ತು ಮಗನನ್ನು ಬೆಂಗಳೂರಿನಲ್ಲಿ ಬಿಟ್ಟು ದೇವದುರ್ಗ ತಾಲೂಕಿನ ವೀರಗೋಟ ಗ್ರಾಮಕ್ಕೆ ಆಗಮಿಸಿದರು. ಚಿಂಚೋಡಿ ಗ್ರಾಮ ಪಂಚಾಯತ್ ನೀಡಿದ ನೋಟೀಸ್ ಗೆ ಯಾವುದೇ ಉತ್ತರ ನೀಡದೇ ಆ ಕುಟುಂಬವೂ ಅದೇ ಮನೆಯಲ್ಲಿ ವಾಸವಾಗಿತ್ತು. ನಿನ್ನೆ ಅಂದ್ರೆ ಜೂನ್ 21, 2023ರಂದು ಏಕಾಏಕಿ ಕೆಲ ಸಂಘಟನೆಗಳ ಮುಖಂಡರ ಸಮೇತ ಬಂದ ಪೊಲೀಸರು ಮತ್ತು ದೇವದುರ್ಗ ತಹಸೀಲ್ದಾರ್ ಹಿಂದೆ ಮುಂದೆ ಆಲೋಚನೆಯೂ ಮಾಡದೇ ಮನೆಯಲ್ಲಿನ ವಸ್ತುಗಳನ್ನ ಹೊರಗೆ ಹಾಕಿ ಮನೆ ಖಾಲಿ ಮಾಡಿಸಿದ್ರು. 12 ವರ್ಷಗಳ ಕಾಲ ವಾಸವಿದ್ದ ಮನೆ ಏಕಾಏಕಿ ಖಾಲಿ ಮಾಡಿಸಿದಾಗ ದಿಕ್ಕು ಕಾಣದಂತೆ ಆಗಿದ್ದ ಜಗದೇವಿ ಕುಟುಂಬ ಸಮೇತ ಹಕ್ಕು ಪತ್ರ ಹಿಡಿದುಕೊಂಡು ಚಿಂಚೋಡಿ ಗ್ರಾಮ ಪಂಚಾಯತ್ ಮುಂದೆ ವಾಸವಾಗಿದ್ದಾರೆ.
ಹಕ್ಕು ಪತ್ರ ಇದ್ರೂ ಬೀದಿಗೆ ಬಂದ ಬಡ ಕುಟುಂಬ
ಪ್ರವಾಹದಿಂದ ಸಂತ್ರಸ್ತರಾದವರಿಗೆ ಹಕ್ಕು ಪತ್ರ ನೀಡುವ ಮುನ್ನವೇ ದೇವದುರ್ಗ ತಾಲೂಕಾಡಳಿತ ಮನೆಗಳಲ್ಲಿ ವಾಸ ಮಾಡಲು ಮೌಖಿಕ ಆದೇಶ ನೀಡಿತ್ತು. 12 ವರ್ಷಗಳ ಅವಧಿಯಲ್ಲಿ ಮನೆಯಲ್ಲಿ ವಾಸವಿದ್ದವರ ದಾಖಲೆಗಳನ್ನು ತಾಲೂಕಾಡಳಿತ ಪರಿಶೀಲನೆ ಮಾಡಿ ಹಕ್ಕು ಪತ್ರದಲ್ಲಿ ಇದ್ದ ಮನೆಗಳನ್ನು ಹಂಚಿಕೆ ಮಾಡಬೇಕಾಗಿತ್ತು. ಅದು ಯಾವುದೂ ಸಹ ಮಾಡದೇ ಯಾರೋ ದೂರು ನೀಡಿದ್ದರಂತೆ, ಆ ದೂರಿನ ಫಲಾನುಭವಿಗೆ ಮನೆ ಕೊಡಿಸುವ ಭರದಲ್ಲಿ ಮತ್ತೊಂದು ಬಡ ಕುಟುಂಬಕ್ಕೆ ಅನ್ಯಾಯ ಮಾಡುವುದು ಎಷ್ಟು ಸರಿ.. ದೇವದುರ್ಗ ತಹಸೀಲ್ದಾರ್ ಕೆ.ವೈ. ಬಿದ್ರಿ ಅವರು ಉತ್ತರಿಸಬೇಕಾಗಿದೆ. ಪೊಲೀಸ್ ಭದ್ರತೆ ನೀಡಲು ತೆರಳಿದ ಜಾಲಹಳ್ಳಿ ಪಿಎಸ್ಐ ಸುಜತಾ ನಾಯಕ ಮತ್ತು ಚಿಂಚೋಡಿ ಪಿಡಿಒ ಶಿವರಾಜ್ ಸಮ್ಮುಖದಲ್ಲಿ ಮನೆ ಖಾಲಿ ಮಾಡಿಸಲಾಯ್ತು.ಹಾಗಾದರೇ ಆ ಬಡ ಕುಟುಂಬಕ್ಕೆ ನ್ಯಾಯ ಒದಗಿಸುವರು ಯಾರು? ಆ ಕುಟುಂಬಕ್ಕೆ ತಾಲೂಕಾಡಳಿತ ನೀಡಿದ ಮನೆ ಯಾವುದು ಎಂದು ಗುರುತಿಸಿ ಆ ಮನೆ ಖಾಲಿ ಮಾಡಿಸಿ ಈ ಮನೆ ಖಾಲಿ ಮಾಡಿಸಬೇಕಾಗಿತ್ತು. ಅದು ಬಿಟ್ಟು ನೇರವಾಗಿ ಮೂರು ಜನ ಹೆಣ್ಣು ಮಕ್ಕಳು ಇರುವ ಮನೆ ಖಾಲಿ ಮಾಡಿಸಿದ್ದು, ಈ ಪ್ರಕರಣದಲ್ಲಿ ತಹಸೀಲ್ದಾರ್ ಕೆ.ವೈ. ಬಿದ್ರಿಯವರ ದುರಾಡಳಿತ ಎದ್ದು ಕಾಣುತ್ತಿದೆ.
ಚಿಂಚೋಡಿ ಪಿಡಿಒಗೆ ದೇವದುರ್ಗ ತಹಸೀಲ್ದಾರ್ ನೆನಪೋಲೆ ಪತ್ರ!
ನಿರಾಶ್ರಿತರಿಗೆ ಕೊಟ್ಟಿರುವ ಮನೆಯಲ್ಲಿ ಅಕ್ರಮವಾಗಿ ವಾಸವಾಗಿದ್ದವರಿಗೆ ಮನೆಗಳು ಖಾಲಿ ಮಾಡಿಸಬೇಕು ಎಂಬುವುದು ನ್ಯಾಯ. ಆದ್ರೆ ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ವೀರಗೋಟ ಗ್ರಾಮದಲ್ಲಿ ಹಕ್ಕು ಪತ್ರ ಇದ್ರೂ ಮನೆ ಖಾಲಿ ಮಾಡಿದ ಘಟನೆಯೊಂದು ನಡೆದಿದೆ. ಹಕ್ಕು ಪತ್ರದಲ್ಲಿ ಇದ್ದ ಮನೆಯನ್ನ ನೀಡದೇ ನೇರವಾಗಿ ಬಂದು ಮನೆ ಖಾಲಿ ಮಾಡಿಸಿದ್ದಾರೆ ಎಂಬ ಆರೋಪ ದೇವದುರ್ಗ ತಾಲೂಕಿನ ತಹಸೀಲ್ದಾರ್ ಕೆ.ವೈ.ಬ್ರಿದಿ ಮೇಲೆ ಕೇಳಿಬರುತ್ತಿದೆ. ಹಕ್ಕುಪತ್ರಗಳ ಪ್ರಕಾರ ಮನೆಗಳ ಹಂಚಿಕೆ ಮಾಡುವುದು ಗ್ರಾಮ ಪಂಚಾಯತ್ ನ ಪಿಡಿಒ ಮತ್ತು ಸಿಬ್ಬಂದಿಯ ಕೆಲಸ. ಆದ್ರೆ ಇಲ್ಲಿ ಮೊದಲು ಯಾವುದೇ ಮನೆಗಳ ಹಂಚಿಕೆ ಮಾಡಿಲ್ಲ. ಹೀಗಾಗಿ ಸಂತ್ರಸ್ತರು ಯಾವ ಮನೆಯಲ್ಲಿ ಬೇಕಾದರೂ ಹೋಗಿ ವಾಸವಾಗಿದ್ದಾರೆ. ಅವರು ವಾಸವಾದ ಬಳಿಕವಾದರೂ ಪಂಚಾಯತ್ ಸಿಬ್ಬಂದಿ ಭೇಟಿ ನೀಡಿ ಮನೆಗಳ ಪರಿಶೀಲನೆ ಮಾಡಬೇಕಾಗಿತ್ತು. ಅದು ಯಾವುದು ಮಾಡದೇ ಈಗ ಅಂದ್ರೆ 18-02-2022ರಂದು ಮನೆ ಖಾಲಿ ಮಾಡಬೇಕೆಂದು ಗ್ರಾಮ ಪಂಚಾಯತ್ ಸಿಬ್ಬಂದಿ ನೋಟೀಸ್ ಜಾರಿ ಮಾಡುತ್ತಾರೆ. ಅಷ್ಟೇ ಅಲ್ಲದೆ ಮನೆಯಲ್ಲಿ ವಾಸವಿದ್ದ ಫಲಾನುಭವಿಗಳು ಹಕ್ಕು ಪತ್ರ ತೋರಿಸಿ ಈ ಮನೆ ನಮಗೆ ಕೊಡಿ ಎಂದು ಮನವಿ ಮಾಡಿದ್ದಾರೆ. ಆದ್ರೆ ಗ್ರಾಮ ಪಂಚಾಯತ್ ಸಿಬ್ಬಂದಿ ಕೇರ್ ಮಾಡದೇ ಮೂರು ನೋಟೀಸ್ ಜಾರಿ ಮಾಡಿದೆ. ಇತ್ತ ಸಂತ್ರಸ್ತರು 12 ವರ್ಷಗಳಿಂದ ವಾಸವಾಗಿದ್ದ ಮನೆ ಬಿಟ್ಟು ಹೋಗಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ದೇವದುರ್ಗ ತಹಸೀಲ್ದಾರ್ ವಿಶೇಷ ಕಾಳಜಿವಹಿಸಿಕೊಂಡು ಚಿಂಚೋಡಿ ಗ್ರಾಮ ಪಂಚಾಯತ್ ಪಿಡಿಒಗೆ ಮನೆ ಖಾಲಿ ಮಾಡಿಸಿ ಎಂದು ನೆನಪೋಲೆ ಪತ್ರ ಬರೆಯುತ್ತಾರೆ.
ದೇವದುರ್ಗ ತಹಸೀಲ್ದಾರ್ ಬರೆದ ಆ ನೆನಪೋಲೆ ಪತ್ರದಲ್ಲಿ ಏನಿದೆ?
ವಿಷಯ: 2009 ರಲ್ಲಿ ಬಿದ್ದ ಭಾರೀ ಮಳೆಯಿಂದ ಕೃಷ್ಣ ನದಿ ಮತ್ತು ಹಳ್ಳಗಳಿಂದ ಉಂಟಾದ ಭಾರೀ ಪ್ರವಾಹದಿಂದ ಹಾನಿಗೊಳಗಾದ ವೀರಗೋಟ ಗ್ರಾಮದ ಜನರ ವಸತಿ ನವ ಗ್ರಾಮದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿದ ಹಕ್ಕು ಪತ್ರ ಇದ್ದರು ಕೊಡ ಬೇರೆಯವರು ಅಕ್ರಮವಾಗಿ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ನಿರಾಶ್ರಿತರಿಗೆ ಹಕ್ಕು ಪತ್ರ ಇಲ್ಲದವರಿಗೆ ಮನೆಗಳು ಬಿಡಿಸುವ ಕುರಿತು
ಈ ಕಾರ್ಯಾಲಯಾದ ಪತ್ರದ ಸಂಖ್ಯೆ ಸಂ/ಎಂ.ಎ.ಜಿ/2022-23 ದಿ:12-06-2023
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ದುರ್ಗಮ್ಮ ಗಂ. ವಿರುಪಾಕ್ಷಪ್ಪ ಮು: ವೀರಗೋಟ ಇವರ ಹೆಸರಿನಲ್ಲಿ ಹಕ್ಕುಪತ್ರ ಇದ್ದರು ಕೂಡಾ ದೌರ್ಜನ್ಯದಿಂದ ನನಗೆ ಹಂಚಿಕೆಯಾದ ಮನೆಯಲ್ಲಿ ವಾಸಮಾಡುವ ಜಗದೇವಿ ಗಂ, ಬಸನಗೌಡ ಇವರು ಅಕ್ರಮವಾಗಿ ನಮ್ಮ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ನಾವು ಈ ವಿಷಯದ ಬಗ್ಗೆ ಹಲವಾರು ಬಾರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿ ಮಾಡಿಕೊಂಡರು. ಇಲ್ಲಿವರೆಗೆ ಅವರು ನಮ್ಮ ಮನೆ ನಮಗೆ ಬಿಡಿಸಿಕೊಟ್ಟಿರುವುದಿಲ್ಲ. ಅವರ ಕಡೆಗೆ ಹೋಗಿ ನಾವು ಮನವಿ ಮಾಡಿದ್ರು. ನಮಗೆ ಸತಾಯಿಸುತ್ತಿದ್ದಾರೆಂದು ದಲಿತ ಸಂಘಟನೆಗಳ ಒಕ್ಕೂಟ ತಾಲೂಕ ಸಮಿತಿ ದೇವದುರ್ಗ ಇವರು ಮನವಿ ಸಲ್ಲಿಸಿದ್ದು , ಕಾರಣ ಉಲ್ಲೇಖಿತ ಪತ್ರದ ಮೂಲಕ ಸದರಿ ವಿಷಯದ ಕುರಿತು ಸೂಕ್ತ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ (1) ದಿನದೊಳಗೆ ಈ ಕಾರ್ಯಾಲಯಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು.
ಆದರೆ ಸದರಿ ವಿಷಯದ ಕುರಿತು ಕ್ರಮ ಕೈಗೊಂಡ ಬಗ್ಗೆ ಈ ಕಾರ್ಯಾಲಯಕ್ಕೆ ಅನುಪಾಲನಾ ವರದಿ ಸಲ್ಲಿಸಿರುವುದಿಲ್ಲ. ನಿಮ್ಮ ಈ ನಡೆ ನಿಮ್ಮ ಕರ್ತವ್ಯದಲ್ಲಿ ನಿಷ್ಕಾಳಜಿಯನ್ನು ಎತ್ತಿ ತೋರಿಸುತ್ತಿದ್ದು, ನಿಮ್ಮ ಮೇಲೆ ಏಕೆ ಶಿಸ್ತು ಕ್ರಮ ಕೈಗೊಳ್ಳಲು ಮಾನ್ಯ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬಾರದೆಂದು ಈ ಪತ್ರ ತಲುಪಿದ 24 ಗಂಟೆಗಳ ಒಳಗಾಗಿ ಲಿಖಿತ ಸಮಜಾಯಿಸಿ ಹೇಳಿಕೆಯನ್ನು ಈ ಕಾರ್ಯಾಲಯಾಕ್ಕೆ ಸಲ್ಲಿಸಲು ಸೂಚಿಸಿದೆ.
ಮನೆ ಖಾಲಿ ಮಾಡಿಸಿದ ಬಳಿಕ ಆಗಿದ್ದೇನು?
ದೇವದುರ್ಗ ತಾಲೂಕಿನಲ್ಲಿ ಇನ್ನೂ ಅಂಧಾ ಕಾನೂನು ಜೀವಂತವಾಗಿದೆ ಎಂಬುವುದಕ್ಕೆ ಈ ಒಂದು ಘಟನೆಯೇ ಸಾಕ್ಷಿಯಾಗಿದೆ. ಯಾರದೋ ಮಾತು ಕೇಳಿ ತಾಲೂಕಿನ ದಂಡಾಧಿಕಾರಿ ಹುದ್ದೆಯಲ್ಲಿ ಇರುವ ದೇವದುರ್ಗ ತಹಸೀಲ್ದಾರ್ ಅವರು ಯಾವ ಕುಟುಂಬಕ್ಕೂ ಅನ್ಯಾಯ ಆಗದಂತೆ ಕ್ರಮ ಜರುಗಿಸಬೇಕಾಗಿತ್ತು.ಆದ್ರೆ ಬಂದ ತಕ್ಷಣವೇ ಹಿಂದೆ - ಮುಂದೆಯೂ ಆಲೋಚನೆ ಮಾಡದೇ ಮನೆ ಖಾಲಿ ಮಾಡಿಸಿವೆಂದು ಚಿಂಚೋಡಿ ಪಿಡಿಒ ಶಿವರಾಜ್ ಗೆ ಆದೇಶ ಮಾಡಿದ್ರು. ಈ ಹಿಂದೆ ಮೂರು ನೋಟೀಸ್ ಸಹ ನೀಡಲಾಗಿತ್ತು. ಹೀಗಾಗಿ ಮನೆಯಲ್ಲಿನ ಎಲ್ಲಾ ವಸ್ತುಗಳು ತೆಗೆದುಕೊಂಡು ಬಂದು ಹೊರಗಡೆ ಬಿಸಾಕಿದ್ರು. ದಿಕ್ಕೂ ಕಾಣದಂತೆ ಆದ ಬಸನಗೌಡ ಇಬ್ಬರು ಹರೆಯದ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದು ಗ್ರಾಮ ಪಂಚಾಯತ್ ಮುಂದೆ ವಾಸ ಮಾಡಲು ಮುಂದಾಗಿದ್ದಾಳೆ.
ಜಗದೇವಿ ಕುಟುಂಬಕ್ಕೆ ಆಗಬೇಕಾಗಿದ್ದು ಏನು?
ಜಗದೇವಿ ಕುಟುಂಬ ವಾಸ ಮಾಡುತ್ತಿದ್ದ ಮನೆ ದುರ್ಗಮ್ಮ ಗಂಡ ವಿರೂಪಾಕ್ಷಿ ಅವರಿಗೆ ನೀಡಲಿ..ಅದ್ರೆ ಜಗದೇವಿ ಕುಟುಂಬಕ್ಕೆ ನೀಡಿದ ಹಕ್ಕುಪತ್ರ ಮನೆ ಜಗದೇವಿ ಕುಟುಂಬಕ್ಕೆ ಮೊದಲು ತಾಲೂಕಾಡಳಿತ ನೀಡಿ ಜಗದೇವಿ ಕುಟುಂಬವನ್ನು ಖಾಲಿ ಮಾಡಿಸಬೇಕಾಗಿತ್ತು. ಆದ್ರೆ ಅಧಿಕಾರದ ದರ್ಪ ಬಡ ಮಹಿಳೆಯರ ಮೇಲೆ ದೇವದುರ್ಗ ತಹಸೀಲ್ದಾರ್ ಕೆ.ವೈ. ಬಿದ್ರಿ ಪ್ರದರ್ಶನ ಮಾಡಿದ್ದು ಈಗ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಇತ್ತ ಗಮನಹರಿಸಿ ಗ್ರಾಮ ಪಂಚಾಯತ್ ನಲ್ಲಿ ವಾಸವಾದ ಬಡ ಹೆಣ್ಣು ಮಕ್ಕಳ ಕುಟುಂಬಕ್ಕೆ ರಕ್ಷಣೆ ನೀಡುವುದರ ಜೊತೆಗೆ ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕಾಗಿದೆ.