Asianet Suvarna News Asianet Suvarna News

ರಸ್ತೆಗಾಗಿ ಫಸಲಿಗೆ ಬಂದ ಕಾಫಿ ಗಿಡಗಳ ನಾಶ

ರಸ್ತೆಗಾಗಿ ಫಸಲಿಗೆ ಬಂದ ಕಾಫಿ ಗಿಡಗಳನ್ನು ಕಿತ್ತುಹಾಕಿದ್ದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Destruction of coffee plants harvested for roads snr
Author
First Published Nov 26, 2023, 10:06 AM IST

  ಬೇಲೂರು :  ರಸ್ತೆಗಾಗಿ ಫಸಲಿಗೆ ಬಂದ ಕಾಫಿ ಗಿಡಗಳನ್ನು ಕಿತ್ತುಹಾಕಿದ್ದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ತೊಳಲು ಗ್ರಾಮಪಂಚಾಯತಿ ವ್ಯಾಪ್ತಿಯ ಸರ್ವೆ ನಂಬರ್ 25 ಮತ್ತಿಹಳ್ಳಿ ಗ್ರಾಮ ಹಾಗೂ ಸರ್ವೆ ನಂ. 142  ಹಿರೇಗದ್ದೆ ಗ್ರಾಮದಲ್ಲಿ ತೋಟಕ್ಕೆ ಹೋಗಲು ಸಿದ್ದರಾಜು ಎಂಬುವವರು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ ರಸ್ತೆ ಬಿಡಿಸಿಕೊಳ್ಳಲು ಮನವಿ ಸಲ್ಲಿಸಿದ್ದರು. ಅದರಂತೆ ಆರ್ ಐ ಹಾಗೂ ವಿ ಎ ಸಮ್ಮುಖದಲ್ಲಿ ರಸ್ತೆ ಮಾಡಲು ಸರ್ವೆ ಮಾಡಲಾಯಿತು. ಅದರಂತೆ ಶನಿವಾರ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಏಕಾಎಕಿ ಜೆಸಿಬಿ ಮೂಲಕ ಫಸಲಿಗೆ ಬಂದಂತ ಸುಮಾರು ೫೦ಕ್ಕೂ ಹೆಚ್ಚು ಕಾಫಿ ಹಾಗೂ ಮೆಣಸು ಮತ್ತು ಹಲಸು ಸೇರಿದಂತೆ ಇತರ ಮರಗಳನ್ನು ಕಿತ್ತುಹಾಕಿದ್ದಾರೆ ಎಂದು ಸಾರ್ವಜನಿಕರು ಹಾಗೂ ತೋಟದ ಮಾಲೀಕರು ಆರೋಪಿಸಿದರು.

ಈ ಸಂದರ್ಭದಲ್ಲಿ ತೋಟದ ಮಾಲೀಕರಾದ ಯಶವಂತ್ ಹಾಗೂ ಅಲೆಕ್ಸ್ ಮಾತನಾಡಿ, ಈಗಾಗಲೇ ನಾವು ಮತ್ತಿಹಳ್ಳಿ ಗ್ರಾಮದಲ್ಲಿ ಸುಮಾರು ೩೦ ವರ್ಷ ಹಿಂದಿನಿಂದಲೂ ತೋಟವನ್ನು ಮಾಡಿಕೊಂಡು ಬಂದಿದ್ದೇವೆ. ಈ ಭಾಗದ ಎಲ್ಲರೂ ಸಹ ತೋಟದ ಪಕ್ಕದ ಜಾಗದಲ್ಲಿ ಕೆಳಭಾಗದಲ್ಲಿರುವ ತೋಟಕ್ಕೆ ಕಾಲುದಾರಿಯಲ್ಲಿ ಓಡಾಡುತ್ತಿದ್ದೇವೆ. ಈಗಾಗಲೇ ಹಿರಿಗದ್ದೆಯ ಸಿದ್ದರಾಜು ಎಂಬುವವರು ನಮ್ಮ ಗ್ರಾಮದವರಲ್ಲ. ಆದರೂ ಸಹ ಸಾಗುವಳಿ ಚೀಟಿ ಪಡೆದು ಇಲ್ಲಿ ಜಮೀನನ್ನು ಪಡೆದಿದ್ದಾರೆ. ಆದರೆ ಏಕಾಏಕಿ ತಿರುಗಾಡಲು ರಸ್ತೆ ಇಲ್ಲ ಎಂದು ನಮಗೆ ತೊಂದರೆ ಕೊಡುತ್ತಿದ್ದಾರೆ. ಇವರ ಮೇಲೆ ಎ ಸಿ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಹ ಸಲ್ಲಿಸಿದ್ದೇವೆ. ಆದರೆ ಎರಡು ದಿನಗಳ ಹಿಂದೆ ನಮಗೆ ರಸ್ತೆ ಬಿಡಿಸಲು ಕಂದಾಯ ಇಲಾಖೆಯಿಂದ ಅನುಮತಿ ಪಡೆದಿದ್ದೇವೆ ಎಂದು ಹೇಳಿ ಫಸಲಿಗೆ ಬಂದಂತ ಕಾಫಿ, ಮೆಣಸು, ಇನ್ನಿತರ ಬೆಳೆಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಿದ್ದಾರೆ. ಇದರ ಬಗ್ಗೆ ನಾವು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸುತ್ತೇವೆ. ಕಂದಾಯ ಇಲಾಖೆಯಲ್ಲಿ ಸರಿಯಾದ ರೀತಿಯಲ್ಲಿ ಸರ್ವೆ ನಡೆಸಿ ನಮಗೆ ಸೂಕ್ತ ದಾಖಲಾತಿಯನ್ನು ಒದಗಿಸಿ ಈ ರಸ್ತೆ ನಮ್ಮ ಜಾಗದಲ್ಲಿ ಹಾದು ಹೋಗಲಿದೆ ಎಂದರೆ ನಾವೇ ತೆರವುಗೊಳಿಸುತ್ತೇವೆ. ಆದರೆ ಯಾವ ಅಧಿಕಾರಿಗಳು ಇಲ್ಲದೆ ದಾಖಲಾತಿ ಇಲ್ಲದೆ ತೋಟಕ್ಕೆ ಜೆಸಿಬಿ ಮೂಲಕ ತೋಟವನ್ನು ನಾಶಪಡಿಸಿದ್ದಾರೆ. ಇಷ್ಟೆಲ್ಲಾ ಘಟನೆಗಳು ನಡೆದರೂ ನಮಗೆ ಅಧಿಕಾರಿಗಳು ಸೂಕ್ತ ನ್ಯಾಯ ದೊರಕಿಸಿ ಕೊಟ್ಟಿಲ್ಲ. ನಾವೆಲ್ಲರೂ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಿ ಅಧಿಕಾರಿಗಳ ವಿರುದ್ಧ ಹಾಗೂ ಏಕಾಏಕಿ ತೋಟಕ್ಕೆ ನುಗ್ಗಿ ನಮ್ಮ ಕಾಫಿಗಿಡಗಳನ್ನು ನಾಶ ಮಾಡಿದವರ ವಿರುದ್ಧ ದೂರು ಸಲ್ಲಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಜಾನ್ ವಿನೇಜಸಿಯಸ್, ಸೌಗಂಧ್‌ ಸೇರಿದಂತೆ ಇತರರು ಹಾಜರಿದ್ದರು.

 ಎರಡು ದಿನಗಳ ಹಿಂದೆ ನಮಗೆ ರಸ್ತೆ ಬಿಡಿಸಲು ಕಂದಾಯ ಇಲಾಖೆಯಿಂದ ಅನುಮತಿ ಪಡೆದಿದ್ದೇವೆ ಎಂದು ಹೇಳಿ ಫಸಲಿಗೆ ಬಂದಂತ ಕಾಫಿ, ಮೆಣಸು, ಇನ್ನಿತರ ಬೆಳೆಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಿದ್ದಾರೆ. ಇದರ ಬಗ್ಗೆ ನಾವು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸುತ್ತೇವೆ.

-ಯಶವಂತ್, ತೋಟದ ಮಾಲೀಕರು

Follow Us:
Download App:
  • android
  • ios