ಬೆಂಗಳೂರು [ಜು.11]:  ಕರ್ನಾಟಕ ಹೈಕೋರ್ಟ್‌ನಲ್ಲಿ ‘ಬೆರಳಚ್ಚುಗಾರ’ ಉದ್ಯೋಗ ಗಿಟ್ಟಿಸಲು ಪ್ರಧಾನ ಮಂತ್ರಿ ಶಿಫಾರಸ್ಸಿನ ನಕಲಿ ಪತ್ರ ನೀಡಿ ಬಂಧನಕ್ಕೆ ಒಳಗಾಗಿ ಜೈಲು ಪಾಲಾಗಿದ್ದ ವ್ಯಕ್ತಿಗೆ ಇದೀಗ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿ ಬಂಧಮುಕ್ತಗೊಳಿಸಿದೆ.

ಪ್ರಕರಣ ಸಂಬಂಧ ಜಾಮೀನು ಕೋರಿ ಬೆಳಗಾವಿ ಖಾನಾಪುರದ ನಿವಾಸಿ ಸಂಜಯ್‌ ಕುಮಾರ್‌ ಎ.ಹುಡೇದ್‌ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಸ್‌.ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿದಾರನಿಗೆ ಷರತ್ತುಬದ್ಧ ಜಾಮೀನು ನೀಡಿ ಜೈಲಿನಿಂದ ಬಿಡುಗಡೆ ಮಾಡಲು ಆದೇಶಿಸಿದೆ.

ಪ್ರಕರಣ ಸಂಬಂಧ ಆರೋಪಿ ಸಂಜಯ್‌ ಕುಮಾರ್‌ ಸಂಬಂಧಪಟ್ಟನ್ಯಾಯಾಲಯಕ್ಕೆ ಒಂದು ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ಒದಗಿಸಬೇಕು. ಪ್ರಕರಣದ ತ್ವರಿತ ಇತ್ಯರ್ಥಕ್ಕಾಗಿ ಆರೋಪಿಯು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸಬೇಕು. ಪ್ರಕರಣದ ಸಾಕ್ಷ್ಯಾಧಾರಗಳನ್ನು ತಿರುಚಲು ಯತ್ನಿಸಬಾರದು. ಒಂದೊಮ್ಮೆ ವಿಳಾಸ ಬದಲಿಸಿದ ಸಂದರ್ಭದಲ್ಲಿ ಆ ಕುರಿತು ಠಾಣಾಧಿಕಾರಿಗೆ ಮಾಹಿತಿ ನೀಡಬೇಕು. ಇದೇ ಮಾದರಿಯ ಇತರೆ ಪ್ರಕರಣಗಳಲ್ಲಿ ಪಾಲ್ಗೊಳ್ಳಬಾರದು ಎಂದು ಹೈಕೋರ್ಟ್‌ ಜಾಮೀನು ಮಂಜೂರಾತಿಗೆ ಷರತ್ತು ವಿಧಿಸಿದೆ.

ಪ್ರಕರಣ ಸಂಬಂಧ ಪೊಲೀಸರು ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿಸಲ್ಲಿಸಿರುವುದರಿಂದ ಬದಲಾದ ಸನ್ನಿವೇಶ ಪರಿಗಣಿಸಿ ಜಾಮೀನು ನೀಡಲು ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿದಾರ ಕೋರಿದ್ದ. ಆದರೆ, ದೋಷಾರೋಪ ಪಟ್ಟಿಸಲ್ಲಿಕೆಯಿಂದ ಸನ್ನಿವೇಶ ಬದಲಾವಣೆಯಾಗದು ಹಾಗೂ ಜಾಮೀನು ಪಡೆಯಲು ತಾನು ಅರ್ಹನಾಗಿದ್ದೇನೆ ಎಂದು ಅರ್ಜಿದಾರ ಕ್ಲೇಮು ಮಾಡಲಾಗದು ಎಂದು ತಿಳಿಸಿದ್ದ ಸೆಷನ್ಸ್‌ ನ್ಯಾಯಾಲಯವು ಸಂಜಯ್‌ನ ಜಾಮೀನು ಅರ್ಜಿ ತಿರಸ್ಕರಿಸಿದೆ. ಆದರೆ, ಇಡೀ ಪ್ರಕರಣ ದಾಖಲೆಗಳ ಸಾಕ್ಷ್ಯವನ್ನಾಧರಿಸಿದ್ದು, ಅರ್ಜಿದಾರ ಸಾಕ್ಷ್ಯವನ್ನು ತಿರುಚುವ ಪ್ರಶ್ನೆ ಉದ್ಭವಿಸುವುದಿಲ್ಲ. ಮೇಲಾಗಿ ಅರ್ಜಿದಾರ ಸಲ್ಲಿಸಿದ ದಾಖಲೆಗಳು ನಕಲಿಯೇ ಅಥವಾ ಅಸಲಿಯೇ ಎಂಬುದು ವಿಚಾರಣಾ ನ್ಯಾಯಾಲಯದ ವಿಚಾರಣೆಯಿಂದ ದೃಢಪಡಬೇಕಿದೆ ಎಂದು ಅಭಿಪ್ರಾಯಪಟ್ಟಹೈಕೋರ್ಟ್‌ ಜಾಮೀನು ನೀಡಿದೆ.

 ಉದ್ಯೋಗಕ್ಕೆ ನೇಮಿಸಬೇಕು!

ಬೆರಳಚ್ಚುಗಾರ ಉದ್ಯೋಗ ನೇಮಕಾತಿಗೆ 2018ರಲ್ಲಿ ಹೈಕೋರ್ಟ್‌ ಅರ್ಜಿ ಆಹ್ವಾನಿಸಿತ್ತು. ಬೆಳಗಾವಿ ಜಿಲ್ಲೆಯ ಖಾನಾಪುರದ ಮಾರುತಿಗಲ್ಲಿಯ ನಿವಾಸಿ ಸಂಜಯ್‌ ಕುಮಾರ್‌ ಎ.ಹುಡೇದ್‌ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ, ಪ್ರಧಾನ ಮಂತ್ರಿ ಶಿಫಾರಸು ಪತ್ರವನ್ನು ಲಗತ್ತಿಸಿದ್ದ. ‘ಸಂಜಯ್‌ ಅವರನ್ನು ಬೆರಳಚ್ಚುಗಾರ ಉದ್ಯೋಗಕ್ಕೆ ನೇಮಿಸಬೇಕು’ ಎಂದು ಪತ್ರದಲ್ಲಿ ಶಿಫಾರಸು ಮಾಡಲಾಗಿತ್ತು.

ಆದರೆ, ಈ ಪತ್ರದ ಕುರಿತು ಅನುಮಾನ ವ್ಯಕ್ತಪಡಿಸಿದ ಹೈಕೋರ್ಟ್‌, ವಿಚಕ್ಷಣಾ ದಳದಿಂದ ತನಿಖೆ ನಡೆಸಿತ್ತು. ನಂತರ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿತ್ತು. ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದರು. ಸಂಜಯ್‌ ಸಲ್ಲಿಸಿದ ಪ್ರಧಾನಮಂತ್ರಿ ಶಿಫಾರಸು ಪತ್ರವನ್ನು ಫೋರ್ಜರಿ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿತ್ತು. ಹೀಗಾಗಿ ಪೊಲೀಸರು ಸಂಜಯ್‌ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಿದ್ದರು.

ಇದರಿಂದ ಜಾಮೀನು ನೀಡುವಂತೆ ಕೋರಿ ಸಂಜಯ್‌ ನಗರದ 68ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಆ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದರಿಂದ ಹೈಕೋರ್ಟ್‌ ಮೊರೆ ಹೋಗಿದ್ದ. ಅರ್ಜಿದಾರ ಎಸಗಿದ ಅಪರಾಧ ಕೃತ್ಯವು ಗಂಭೀರ ಸ್ವರೂಪದ್ದಾಗಿದ್ದು, ಜಾಮೀನು ನೀಡಬಾರದು ಎಂದು ವಿಚಾರಣೆ ವೇಳೆ ಪೊಲೀಸರ ಪರ ಸರ್ಕಾರಿ ಅಭಿಯೋಜಕರು ಆಕ್ಷೇಪಿಸಿದ್ದರು.

ವರದಿ : ವೆಂಕಟೇಶ್‌ ಕಲಿಪಿ