ಗದಗ: ಮಾಹಿತಿ ನೀಡಲು 10 ಲಕ್ಷ ಶುಲ್ಕ ಕೇಳಿದ ಗಣಿ ಇಲಾಖೆ!

ಗದಗ ಜಿಲ್ಲೆಯಲ್ಲಿ ಮರಳು ಹೊತ್ತೊಯ್ಯುವ ವಾಹನಗಳ ಜಿಪಿಎಸ್‌ ಮಾಹಿತಿ| ಲಾಕ್‌ಡೌನ್‌ ಅವಧಿಯ 45 ದಿನಗಳ ಮಾಹಿತಿ ನೀಡಲು ಈ ದುಬಾರಿ ಶುಲ್ಕ| ಮಾಹಿತಿ ಕೇಳಿದ ವ್ಯಕ್ತಿಗೆ ಶುಲ್ಕ ಭರಿಸಲು ಸೂಚನೆ ನೀಡಿದ ಗಣಿ ಇಲಾಖೆ|

Department of Mines asking for a Fee of 10 lakh rs for Give Information

ಶಿವಕುಮಾರ ಕುಷ್ಟಗಿ

ಗದಗ(ಜೂ.24): ಮರಳು ಸಾಗಾಟ ಮಾಡುವ ವಾಹನಗಳ ಮಾಹಿತಿ ನೀಡಲು 10 ಲಕ್ಷದಷ್ಟು ದುಬಾರಿ ಶುಲ್ಕ ಕೇಳುವ ಮೂಲಕ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾಹಿತಿ ಕೇಳಿದವರನ್ನು ಬೆಚ್ಚಿ ಬೀಳಿಸಿದ ಪ್ರಸಂಗ ಜಿಲ್ಲೆಯಲ್ಲಿ ನಡೆದಿದೆ.
ರೋಣ ಪಟ್ಟಣದ ನಿವಾಸಿ ಬಸನಗೌಡ ಗಿರಡ್ಡಿ ಎನ್ನುವವರು ಗದಗ ಜಿಲ್ಲಾ ಗಣಿ ಮತ್ತು ವಿಜ್ಞಾನ ಇಲಾಖೆಗೆ 2020ರ ಏಪ್ರಿಲ್‌ 1ರಿಂದ ಮೇ 15ರ ವರೆಗೆ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕುಗಳ ಮರಳು ಸ್ಟಾಕ್‌ ಯಾರ್ಡ್‌ಗಳಲ್ಲಿನ ಮರಳು ವಿತರಣೆಯಾದ ವಾಹನಗಳ ಜಿಪಿಎಸ್‌ ಟ್ರ್ಯಾಕ್‌ ರಿಪೋರ್ಟ್‌ ಮಾಹಿತಿ ನೀಡುವಂತೆ ಇಲಾಖೆಗೆ ವಿನಂತಿಸಿದ್ದರು. ಆದರೆ ಇಲಾಖೆ ಅಧಿಕಾರಿಗಳು ಜೂನ್‌ 15, 2020ರಂದು ಮಾಹಿತಿ ಕೇಳಿದ ಗಿರಡ್ಡಿ ಅವರಿಗೆ ಪತ್ರ ಬರೆದು 10,55,660 ರುಪಾಯಿ ಶುಲ್ಕ ಭರಿಸುವಂತೆ ಸೂಚನೆ ನೀಡಿದ್ದಾರೆ.

ಗಣಿ ಇಲಾಖೆ ಮಾಹಿತಿ ಕೇಳಿದ ವ್ಯಕ್ತಿಗೆ ಶುಲ್ಕ ಭರಿಸಲು ಸೂಚಿಸಿದೆ. ಆದರೆ ಪತ್ರದಲ್ಲಿ ಇದು ಯಾವುದಕ್ಕಾಗಿ ನಿಗದಿ ಮಾಡಲಾದ ಶುಲ್ಕ, ಎಷ್ಟು ಪುಟಗಳ ಮಾಹಿತಿ ಇದೆ ಅಥವಾ ಸಿಡಿಗಳು, ಹಾರ್ಡ್‌ ಡಿಸ್ಕ್‌ಗಳಾಗಿದ್ದಲ್ಲಿ ಎಷ್ಟು ಪ್ರಮಾಣದಲ್ಲಿ ಮಾಹಿತಿ ನೀಡಲಾಗುತ್ತದೆ ಎನ್ನುವ ಯಾವುದೇ ನಿಖರವಾದ ವಿವರವನ್ನು ಉಲ್ಲೇಖಿಸಿದೇ ಈ ದುಬಾರಿ ಶುಲ್ಕ ಭರಿಸುವಂತೆ ಸೂಚಿಸಿರುವುದು, ಅದಕ್ಕೆ ಹಿರಿಯ ಅಧಿಕಾರಿಗಳು ಸಹಿ ಮಾಡಿರುವುದು ಸಂಶಯಕ್ಕೆ ಕಾರಣವಾಗಿವೆ.

ಶಿರಹಟ್ಟಿ ಪಟ್ಟಣಕ್ಕೂ ವಕ್ಕರಿಸಿದ ಕೊರೋನಾ: ಆತಂಕದಲ್ಲಿ ಜನತೆ

ಸ್ಪಷ್ಟ ಉಲ್ಲಂಘನೆ:

ಮಾಹಿತಿ ಹಕ್ಕು ನಿಯಮ 2005ರ ಅಡಿಯಲ್ಲಿ ಮಾಹಿತಿ ಕೇಳುವ ವ್ಯಕ್ತಿಗೆ ಯಾವ ರೀತಿಯ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆಯೋ ಅದೇ ರೀತಿ ಮಾಹಿತಿ ನೀಡುವ ಅಧಿಕಾರಿಗಳಿಗೂ ಕೂಡಾ ಹಲವಾರು ಮಹತ್ವದ ಸೂಚನೆಗಳಿವೆ. ಸದ್ಯ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿದ ಪತ್ರದಲ್ಲಿ ಸ್ಪಷ್ಟವಾಗಿ ಅವುಗಳನ್ನೆಲ್ಲಾ ಉಲ್ಲಂಘಿಸಲಾಗಿದೆ. 100 ಪುಟಕ್ಕಿಂತಲೂ ಹೆಚ್ಚಿನ ದಾಖಲೆ ಇದ್ದರೆ ಪ್ರತಿ ಸಿಡಿಗೆ 5 ರುಪಾಯಿಯಂತೆ ಶುಲ್ಕವಿಧಿಸಿ ನೀಡಬೇಕು, ಹಾರ್ಡ್‌ ಡಿಸ್ಕ್‌ಗಳ ನಕಲು ಪ್ರತಿ ಕೇಳಿದಲ್ಲಿ ಪ್ರತಿ ಹಾರ್ಡ್‌ಡಿಸ್ಕ್‌ (1ಟಿಬಿ) ಗೆ 10 ಸಾವಿರ ವಿಧಿಸಬೇಕು ಎಂದು ಸೂಚಿಸಿದೆ. ಆದರೆ ಯಾವ ಮಾನದಂಡದ ಮೇಲೆ ಇಲಾಖೆ ಅಧಿಕಾರಿಗಳು 10 ಲಕ್ಷ ಶುಲ್ಕ ನಿಗದಿ ಮಾಡಿದ್ದಾರೆ ಎನ್ನುವುದು ಮಾತ್ರ ಇನ್ನು ನಿಗೂಢವಾಗಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳು ನೀಡಿರುವ ಪತ್ರವನ್ನು ಗಮನಿಸಿದಲ್ಲಿ ಇದು ಮಾಹಿತಿ ಕೊಡದೇ ಪಾರಾಗುವುದು. ನಿಗದಿ ಸಮಯದಲ್ಲಿ ಉತ್ತರ ಕೊಟ್ಟು ಮಾಹಿತಿ ಹಕ್ಕು ಆಯೋಗಕ್ಕೂ ದೂರು ಸಲ್ಲಿಸಲು ಆಗದೇ ಇರುವಂತೆ ಮಾಡುವುದು. ಮುಖ್ಯವಾಗಿ ಇಷ್ಟೊಂದು ಶುಲ್ಕ ಭರಿಸುವಂತೆ ಸೂಚಿಸಿದಲ್ಲಿ ಸಹಜವಾಗಿ ಮಾಹಿತಿ ಪಡೆಯುವ ವ್ಯಕ್ತಿ ಹಿಂದೆ ಸರಿಯುತ್ತಾನೆ ಎನ್ನುವ ದುರಾಲೋಚನೆಯ ಭಾಗವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ನಾನು 10 ವರ್ಷ, 100 ವರ್ಷದ ಮಾಹಿತಿ ಕೇಳಿಲ್ಲ, ಕೇವಲ 45 ದಿನಗಳ ಅವಧಿ (ಅದು ಲಾಕ್‌ಡೌನ್‌ ಸಮಯ)ಯ ಮಾಹಿತಿ ಕೇಳಿದ್ದೇನೆ. ಆದರೆ ಅಧಿಕಾರಿಗಳು ನನಗೆ 10 ಲಕ್ಷ ಶುಲ್ಕ ಭರಿಸುವಂತೆ ಸೂಚಿಸಿದ್ದಾರೆ. ದಯವಿಟ್ಟು ಇದಕ್ಕಾಗಿಯೇ ನನಗೆ ಬ್ಯಾಂಕ್‌ಗಳಿಂದ ಸರ್ಕಾರ ಸಾಲ ಕೊಡಿಸಬೇಕು. ಸಾಲ ಪಡೆದು ಅದನ್ನು ಭರಿಸುತ್ತೇನೆ. ಅಧಿಕಾರಿಗಳ ಪತ್ರ ಹಲವು ಸಂಶಯಕ್ಕೆ ಕಾರಣವಾಗುತ್ತಿದೆ.

ಬಸನಗೌಡ ಗಿರಡ್ಡಿ, ಮಾಹಿತಿ ಕೇಳಿದ ವ್ಯಕ್ತಿ

ಬಸನಗೌಡ ಕೇಳಿದ ಮಾಹಿತಿ ನಮ್ಮ ಬಳಿ ಇರುವುದಿಲ್ಲ, ಮರಳು ತುಂಬಿದ ವಾಹನಗಳ ಜಿಪಿಎಸ್‌ ಟ್ರ್ಯಾಕ್‌ ರಿಪೋರ್ಟ್‌ ನಿರ್ವಹಣೆಯನ್ನು ಟೆಲೆಮ್ಯಾಟಿಕ್ಸ್‌ ಫಾರ್‌ಯು ಸವೀರ್‍ಸಸ್‌ ಪ್ರೈವೇಟ್‌ ಲಿ ಈ ಸಂಸ್ಥೆ ಗುತ್ತಿಗೆ ಪಡೆದಿದೆ. ಆ ಸಂಸ್ಥೆಗೆ ವಾಹನಗಳ ಜಿಪಿಎಸ್‌ ಟ್ರ್ಯಾಕ್‌ ರಿಪೋರ್ಟ್‌ ಮಾಹಿತಿ ಕೇಳಿದಾಗ ಅವರು ಕ್ಲೌಡ್‌ನಲ್ಲಿ ಸೇವ್‌ ಆಗಿರುತ್ತದೆ. ಅದನ್ನು ಮರಳಿ ಪಡೆಯಲು ಇಷ್ಟೊಂದು ಹಣವಾಗುತ್ತದೆ ಎಂದು ನಮಗೆ ಲಿಖಿತವಾಗಿ ತಿಳಿಸಿದ್ದಾರೆ. ಅದರ ಆಧಾರದಲ್ಲಿ ಅವರಿಗೆ ನಾವು 10 ಲಕ್ಷ ಭರಿಸುವಂತೆ ಸೂಚಿಸಿದ್ದೇವೆ, ಇದರಲ್ಲಿ ಇಲಾಖೆಯ ಪಾತ್ರವೇನೂ ಇಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ರಾಜೇಶ. ಡಿ. ಅವರು ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios