ಬಲಾಢ್ಯರಿಂದಲೇ ಮಾನವ ಹಕ್ಕುಗಳ ಹರಣ: ಎಂ.ಸಿ. ಲಲಿತಾ

ಬಲಾಢ್ಯರು, ಎಲ್ಲ ರೀತಿಯ ಅನುಕೂಲಸ್ಥರಿಂದಲೇ ಮಾನವ ಹಕ್ಕುಗಳ ಹರಣ ಹೆಚ್ಚು ಹೆಚ್ಚು ನಡೆಯುತ್ತಾ ಬಂದಿದೆ ಎಂದು ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಎಂ.ಸಿ. ಲಲಿತಾ ತಿಳಿಸಿದರು.

Denial of human rights by the powerful: M.C. Lalita snr

  ತುಮಕೂರು :  ಬಲಾಢ್ಯರು, ಎಲ್ಲ ರೀತಿಯ ಅನುಕೂಲಸ್ಥರಿಂದಲೇ ಮಾನವ ಹಕ್ಕುಗಳ ಹರಣ ಹೆಚ್ಚು ಹೆಚ್ಚು ನಡೆಯುತ್ತಾ ಬಂದಿದೆ ಎಂದು ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಎಂ.ಸಿ. ಲಲಿತಾ ತಿಳಿಸಿದರು.

ವರದಕ್ಷಿಣೆ ವಿರೋಧಿ ವೇದಿಕೆ, ತುಮಕೂರು ನಗರ ಸಾಂತ್ವನ ಕೇಂದ್ರ, ಜೆ.ಪಿ.ಪ್ರೌಢಶಾಲೆ ಸಹಯೋಗದಲ್ಲಿ ನಗರದ ಶಾರದಾದೇವಿ ನಗರದಲ್ಲಿರುವ ಜೆ.ಪಿ. ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ, ಹೆಣ್ಣು ಮಕ್ಕಳ ರಕ್ಷಣೆ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ಥಿತಿವಂತರಿಂದಲೇ ಮಾನವ ಹಕ್ಕುಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ದುರ್ಬಲರು, ಅಶಕ್ತರ ರಕ್ಷಣೆಗಾಗಿಯೇ ಕಾನೂನುಗಳು ರಚನೆಯಾಗಿವೆ. ಮಾನವ ಹಕ್ಕುಗಳ ಮೇಲೆ ದೌರ್ಜನ್ಯಗಳು ಉಂಟಾದಾಗ ಈ ಹಕ್ಕುಗಳ ರಕ್ಷಣೆ ಪಡೆಯಲು ಮುಂದಾಗಬೇಕು ಎಂದರು.

ಲೇಖಕಿ ಬಾ.ಹ. ರಮಾಕುಮಾರಿ ಮಾತನಾಡಿ, ಮಗು ಹುಟ್ಟಿದಾಗಿನಿಂದಲೇ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ. ಹೆಣ್ಣು ಮಗು ಹುಟ್ಟಿದರೆ ಭ್ರೂಣಹತ್ಯೆ ಮಾಡುವ ನೀಚ ಪದ್ಧತಿ ಇನ್ನೂ ನಮ್ಮ ಸಮಾಜದಲ್ಲಿ ಇರುವುದು ದುರಂತ. ಈ ಕಾರಣಕ್ಕಾಗಿಯೇ ಕಾನೂನುಗಳನ್ನು ಬಲಿಷ್ಠವಾಗಿಸಲಾಗಿದೆ ಎಂದರು.

ಕೇವಲ ಬದುಕುವುದು ಒಂದು ಹಕ್ಕಲ್ಲ. ಘನತೆ, ಗೌರವದಿಂದ ಬದುಕುವ ವಾತಾವರಣವನ್ನು ನಾವು ನಿರ್ಮಿಸಬೇಕು. ತಾರತಮ್ಯ ರಹಿತ ಸಮಾಜ ನಿರ್ಮಾಣವಾಗಬೇಕು. ಆದರೆ ನಮ್ಮ ಸಮಾಜದಲ್ಲಿ ಸಾಮಾಜಿಕ ಅಸಮಾನತೆ ಇಂದಿಗೂ ಮುಂದುವರೆದಿದೆ. ಇದನ್ನು ನಿವಾರಣೆ ಮಾಡುವ ಸಲುವಾಗಿಯೇ ಮಕ್ಕಳಿಗೆ ಮತ್ತು ಹದಿಹರೆಯದ ಹೆಣ್ಣು ಮಕ್ಕಳಿಗೆ ಕೆಲವು ಯೋಜನೆಗಳನ್ನು ರೂಪಿಸಲಾಗಿದೆ. ಪೌಷ್ಠಿಕ ಆಹಾರ, ಮಧ್ಯಾಹ್ನದ ಬಿಸಿಯೂಟ ಇಂತಹ ಯೋಜನೆಗಳಿಂದ ಬಂದಿರುವುದು ಮಾನವ ಹಕ್ಕುಗಳ ಪರಿಕಲ್ಪನೆಯಿಂದ ಎಂಬುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು ಎಂದರು.

ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ. ರಾಜಕುಮಾರ ಮಾತನಾಡಿ, ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಸಾಕಷ್ಟಿದ್ದು, ಇಂತಹ ಅಸಮಾನತೆಯೇ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತಿದೆ. ಆದರೆ ಶಾಲಾ ಕಾಲೇಜುಗಳಲ್ಲಿ ಇವೆಲ್ಲವನ್ನೂ ಮೀರಿದ ತಾರತಮ್ಯ ರಹಿತ ವಾತಾವರಣ ನಿರ್ಮಾಣವಾಗಲು ಕಾರಣವಾಗಿರುವುದು ನಮ್ಮ ಸಂವಿಧಾನ, ಮಾನವ ಹಕ್ಕುಗಳ ಪರಿಕಲ್ಪನೆಯಿಂದ ಎಂದರು.

ಇತ್ತೀಚಿನ ದಿನಗಳಲ್ಲಿ ಪೋಕ್ಸೋ ಪ್ರಕರಣಗಳು, ಬಾಲ್ಯ ವಿವಾಹದ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಸಾಮಾಜಿಕ ಜಾಲತಾಣಗಳು, ಮೊಬೈಲ್‌ಗಳು ಪ್ರೇರಣೆ ನೀಡುತ್ತಿದ್ದು, ಕಲಿಯುವ ಹಂತದಲ್ಲಿ ಬದುಕನ್ನು ಛಿದ್ರ ಮಾಡಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮುಖ್ಯ ಶಿಕ್ಷಕ ಡಿ.ಜಿ. ಅನಂತಮೂರ್ತಿ ಮಾತನಾಡಿ, ಬಡವರು ಮತ್ತು ದುರ್ಬಲರ ಬಗ್ಗೆ ಇರುವ ಸಾಮಾಜಿಕ ಅಸಮಾನತೆಗಳು ನಿವಾರಣೆಯಾಗಬೇಕು. ಜಾತಿ ಮತ್ತು ಧರ್ಮ ಕುರಿತ ಚರ್ಚೆಗಳು ಹೆಚ್ಚು ವಿಜೃಂಭಣೆ ಪಡೆಯುತ್ತವೆ. ಇಂತಹ ಕ್ಷುಲ್ಲಕ ವಿಷಯಗಳಿಗೆ ಗಮನ ಹರಿಸದೆ ಎಲ್ಲರ ಹಕ್ಕುಗಳನ್ನು ಗೌರವಿಸುವ ಕಡೆಗೆ ಎಲ್ಲರೂ ಗಮನ ಹರಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ವೇದಿಕೆ ಪದಾಧಿಕಾರಿಗಳಾದ ರಾಜೇಶ್ವರಿ ಚಂದ್ರಶೇಖರ್, ಗಂಗಲಕ್ಷ್ಮಿ ಮುಂತಾದವರಿದ್ದರು. ಸಾಂತ್ವನ ಕೇಂದ್ರದ ಪಾರ್ವತಮ್ಮ ಸಂಗಡಿಗರು ಮಾನವ ಗೀತೆಗಳನ್ನು ಹಾಡಿದರು. ಲೇಖಕ ಅಬ್ಬಿನಹೊಳೆ ಸುರೇಶ್ ಸ್ವಾಗತಿಸಿದರು. ಶಿಕ್ಷಕ ನಾಗೇಂದ್ರಪ್ಪ ಕಾರ್ಯಕ್ರಮ ನಿರೂಪಿಸಿ, ಕುಮಾರ ನಾಯಕ್ ವಂದಿಸಿದರು.

Latest Videos
Follow Us:
Download App:
  • android
  • ios