ಕೋಲಾರ : ಕೊರೋನಾ ನಡುವೆ ಡೆಂಘಿ, ಚಿಕೂನ್ ಗುನ್ಯಾ ಕಂಟಕ
- ಕೊರೋನಾ ಮೂರನೆ ಅಲೆ ಹರಡುತ್ತಿರುವ ಬೆನ್ನಲ್ಲೇ ಕೋಲಾರ ಜಿಲ್ಲೆಯಲ್ಲಿ ಡೆಂಘೀ ಹಾಗೂ ಚಿಕೂನ್ ಗುನ್ಯ
- ದಿನೇ ದಿನೇ ಡೆಂಘೀ ಹಾಗೂ ಚಿಕೂನ್ ಗುನ್ಯ ಪ್ರಕರಣಗಳ ಸಂಖ್ಯೆ ಏರಿಕೆ
ವರದಿ : ರಮೇಶ್ ಕೆ.
ಬಂಗಾರಪೇಟೆ (ಸೆ.20): ಕೊರೋನಾ ಮೂರನೆ ಅಲೆ ಹರಡುತ್ತಿರುವ ಬೆನ್ನಲ್ಲೇ ಕೋಲಾರ ಜಿಲ್ಲೆಯಲ್ಲಿ ಡೆಂಘೀ ಹಾಗೂ ಚಿಕೂನ್ ಗುನ್ಯ ಪ್ರಕರಣಗಳು ಉಲ್ಬಣವಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಜಿಲ್ಲೆಯಲ್ಲಿ ಕೊರೋನಾ ಎರಡನೆ ಅಲೆಯ ಪ್ರಕರಣಗಳ ಸಂಖ್ಯೆ ಸುಧಾರಿಸಿಕೊಂಡಿದ್ದು, ಮೂರನೇ ಅಲೆ ಬರಬಹುದು ಎಂಬ ತಜ್ಙರ ಎಚ್ಚರಿಕೆ ನಡುವೆಯೂ ಜನಜೀವನ ಸಹಜ ಸ್ಥಿತಿಯತ್ತ ಬರುತ್ತಿರುವಾಗಲೇ ಡೆಂಘಿ ಹಾಗೂ ಚಿಕೂನ್ ಗುನ್ಯಾ ಮಾರಕವಾಗಿ ಪರಿಣಿಣಮಿಸಿವೆ. ದಿನೇ ದಿನೇ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.
ಜಿಲ್ಲೆಯಲ್ಲಿ 72 ಡೆಂಘೀ, 113 ಗುನ್ಯಾ ಪ್ರಕರಣ
ಕೋಲಾರ ಜಿಲ್ಲೆಯಲ್ಲಿ ಇದುವರೆಗೂ 72 ಡೆಂಗ್ಯೂ ಹಾಗೂ 113 ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆæಯಾಗಿದ್ದು. ಇದುವರೆಗೆ ಡೆಂಗ್ಯೂ ಜ್ವರದಿಂದ ಯಾರೂ ಮೃತಪಟ್ಟಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಆದರೆ ಜಿಲ್ಲೆಯಲ್ಲಿ ಸಾಕಷ್ಟುಪ್ರಕರಣಗಳು ಕಂಡುಬರುತ್ತಿದ್ದು, ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ. ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಕೊರೋನಾ ನಿಯಂತ್ರಣ ಮತ್ತು ಲಸಿಕೆಯ ಕಡೆ ಸಂಪೂರ್ಣ ಗಮನ ಕೇಂದ್ರೀಕರಿಸಿದ್ದು, ಡೆಂಘೀ ಜ್ವರ ಹರಡುತ್ತಿರುವುದರ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಕೊರೋನಾ 3ನೇ ಅಲೆ ಆತಂಕದ ನಡುವೆ ಸಾಂಕ್ರಾಮಿಕ ರೋಗ
ಜ್ವರ ಕಂಡು ಬಂದ ಕೂಡಲೇ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲಿಗೆ ಹೋದರೆ ಕೊರೋನಾ ಪರೀಕ್ಷೆ ಮಾಡಿಸಿ, ಸೋಂಕು ಇದೆ ಎಂದು ಎಲ್ಲಿ ಹೇಳುತ್ತಾರೋ ಎಂಬ ಭಯದಿಂದ ಸರ್ಕಾರಿ ಆಸ್ಪತ್ರೆಗಳ ಕಡೆ ಮುಖ ಮಾಡುತ್ತಿಲ್ಲ. ಹಾಗಾಗಿ ಖಾಸಗಿ ಆಸ್ಪತ್ರೆ ಹಾಗೂ ಕ್ಲೀನಿಕ್‌ಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದು, ಚಿಕಿತ್ಸೆಗಾಗಿ ಸಾವಿರಾರು ರು.ಗಳನ್ನು ವೆಚ್ಚ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಹೆಚ್ಚಾದ ವೈರಲ್ ಫೀವರ್: ಹವಾಮಾನ ವೈಪರಿತ್ಯ ಹಾಗೂ ಇತರೆ ಕಾರಣಗಳಿಂದ ಬಂಗಾರಪೇಟೆ ತಾಲೂಕಿನಲ್ಲಿ ಡೆಂಘೀ ಜೊತೆಗೆ ಮಕ್ಕಳಿಗೆ ವೈರಲ್ ಫೀವರ್ ಹೆಚ್ಚಾಗಿದ್ದು, ಪಾಲಕರಲ್ಲಿ ಆತಂಕ ಹೆಚ್ಚಾಗಿದೆ. ಖಾಸಗಿ ಆಸ್ಪತ್ರೆ ಹಾಗೂ ಕ್ಲೀನಿಕ್‌ಗಳ ವೈದ್ಯರು ಸಿಬಿಸಿ, ಡೆಂಗ್ಯೂ ಪರೀಕ್ಷೆ ಸೇರಿ ಇತ್ಯಾದಿಗಳಿಗೆ ಚೀಟಿ ಬರೆದು ಕೊಡುತ್ತಿದ್ದು, ಪರೀಕ್ಷೆಗಾಗಿ ಲ್ಯಾಬ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ.
ಡೆಂಘೀ ತಡೆಗೆ ಕ್ರಮ
ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹೆಚ್ಚು ಗಮನ ಹರಿಸಿದ್ದು, ಈಗಾಗಲೇ ಜ್ವರದಿಂದ ಬಳಲುತ್ತಿರುವವರ ರಕ್ತದ ಮಾಧರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ವೈರಲ್ ಫೀವರ್ ಇದ್ದವರಲ್ಲಿ ಪ್ಲೇಟ್‌ಲೆಟ್‌ಗಳು ಕಡಿಮೆಯಾದರೆ ಅದು ಡೆಂಘೀ ಜ್ವರ ಎಂದು ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಡೆಂಘೀ ಪ್ರಕರಣ ಪತ್ತೆಯಾದ ಕಡೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.
ಡಾ.ಕಮಲ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ