ಕೋಗಿಲು ಬಡಾವಣೆ ಅಕ್ರಮವಾಸಿಗಳ ಮನೆಗಳ ತೆರವು ಸಂಬಂಧ ಘಟನಾವಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸುವಂತೆ ರಾಜ್ಯ ಬಿಜೆಪಿ ಸತ್ಯ ಶೋಧನಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್ ಆಗ್ರಹಿಸಿದ್ದಾರೆ.

ಬೆಂಗಳೂರು : ಕೋಗಿಲು ಬಡಾವಣೆ ಅಕ್ರಮವಾಸಿಗಳ ಮನೆಗಳ ತೆರವು ಸಂಬಂಧ ಘಟನಾವಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸುವಂತೆ ರಾಜ್ಯ ಬಿಜೆಪಿ ಸತ್ಯ ಶೋಧನಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್ ಆಗ್ರಹಿಸಿದ್ದಾರೆ.

ಸೋಮವಾರ ಬಿಜೆಪಿ ರಾಜ್ಯ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸತ್ಯ ಶೋಧನಾ ಸಮಿತಿ ವರದಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದ ಸಿಎಂ ಪಿಣರಾಯಿ, ಕೆ.ಸಿ.ವೇಣುಗೋಪಾಲ್ ಸಾಕಷ್ಟು ಕೂಗಾಡಿದರಲ್ಲವೇ? ತೆರವಾದವರ ಈ ಪಟ್ಟಿಯಲ್ಲಿ ಒಬ್ಬರೇ ಒಬ್ಬರು ಕೇರಳದವರಿಲ್ಲ. ಕೇರಳದ ಮತಕ್ಕಾಗಿ ಇಷ್ಟೆಲ್ಲ ರಾದ್ಧಾಂತ ಮಾಡಿದ್ದಾರೆ ಎಂದು ಕಿಡಿಕಾರಿದರು.

ಕೇರಳದವರು ಇರಲಿ ಬಿಡಲಿ, ಅಲ್ಲಿನ ರಾಜಕಾರಣಕ್ಕಾಗಿ ನಮ್ಮ ರಾಜ್ಯವನ್ನು ಬಲಿ ಪಡೆಯುವ ಕೆಲಸ ಮಾಡಿದ್ದಾರೆ. ಒಬ್ಬರೇ ಒಬ್ಬರು ಕೇರಳದವರಿಲ್ಲ. ಒಬ್ಬರೇ ಒಬ್ಬರು ಕ್ರಿಶ್ಚಿಯನ್ ಇದ್ದಾರೆ. ನಮಗೆ ಸಿಕ್ಕಿದ ಪಟ್ಟಿಯಲ್ಲಿ ಬಹುತೇಕ ಎಲ್ಲರೂ ಮುಸ್ಲಿಮರೇ ಇದ್ದಾರೆ. ಬೆಂಗಳೂರಿನಲ್ಲಿ ಸರ್ಕಾರಿ ಜಾಗದಲ್ಲಿ ಹೊಸದಾಗಿ ಗುಡಿಸಲು ಹಾಕಿಕೊಂಡವರನ್ನು ಸರ್ಕಾರ ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ನಗರದಲ್ಲಿರುವ 100 ಚಿಂದಿ ಆಯುವವರ ಪೈಕಿ ಶೇ.95 ಜನರು ರೋಹಿಂಗ್ಯಾಗಳೇ ಇದ್ದಾರೆ. ಅವರ ಬಳಿ ಕೆಲವು ಕಾರ್ಡ್‍ಗಳಿವೆ. ನಾವು ಹೋಗಿ ಕೇಳಿದಾಗ ಕೊಟ್ಟಿಲ್ಲ. ವಲಸಿಗರ ಕಾರ್ಡ್ ಅವರ ಬಳಿ ಇದೆ. ಹಣ ಕೊಟ್ಟು ಗಡಿ ದಾಟಿ ಬಂದುದಾಗಿ ಹೇಳುತ್ತಾರೆ. ಪಶ್ಚಿಮ ಬಂಗಾಳದ ಮೂಲಕ ಬರಲು ವ್ಯವಸ್ಥೆ ಕಲ್ಪಿಸುವ ತಂಡವೇ ಇದೆ ಎಂದು ಅವರೇ ಹೇಳಿದ್ದಾಗಿ ಶಾಸಕ ವಿಶ್ವನಾಥ್‌ ಹೇಳಿದರು.

ನಗರದಲ್ಲಿ 2 ಲಕ್ಷ ರೋಹಿಂಗ್ಯಾಗಳು:

ಅವರ ಭಾಷೆ ಹಿಂದಿಯೂ ಅಲ್ಲ, ಉರ್ದುವೂ ಅಲ್ಲ. ಅದು ನಮಗೆ ಅರ್ಥವೂ ಆಗುವುದಿಲ್ಲ. ಬಾಂಗ್ಲಾ ಮತ್ತು ರೋಹಿಂಗ್ಯಾ ಭಾಷೆ ಕೇಳಿದೊಡನೆ ಗೊತ್ತಾಗುತ್ತದೆ. ಮೊನ್ನೆ ಟಿ.ವಿ ಚಾನೆಲ್ ಒಂದರಲ್ಲಿ ಮಹಿಳೆಯೊಬ್ಬರು ಜೈ ಬಾಂಗ್ಲಾ ಹೇಳಿದ್ದನ್ನು ಕೇಳಿದ್ದೇವೆ. ಅವರು ಇಲ್ಲಿ ರಾಜಾರೋಷವಾಗಿ ಇದ್ದಾರೆ. ನಗರದಲ್ಲಿ ಎರಡು ಲಕ್ಷಕ್ಕೂ ಅಧಿಕ ರೋಹಿಂಗ್ಯಾಗಳು ಮತ್ತು ಬಾಂಗ್ಲಾದವರು ಇದ್ದಾರೆ ಎಂದು ನಮಗೆ ವರದಿಗಳು ಬಂದಿವೆ. ಈ ಬಗ್ಗೆ ಪರಿಶೀಲಿಸಿ ಅಂತವರನ್ನು ಬಂಧಿಸಬೇಕು. ಅವರ ದೇಶಕ್ಕೆ ಕಳುಹಿಸುವುದು ಅಥವಾ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಾನವೀಯತೆಯ ಕ್ರಮ ಬೇಡ:

ರಾಜಕಾಲುವೆ ಮೇಲಿನ ಮನೆಗಳನ್ನೂ ಒಡೆಯಲಾಗಿದೆ. ಕಾಚರಕನಹಳ್ಳಿಯಲ್ಲಿ ಕೆರೆಯಲ್ಲಿ ಮನೆ ಕಟ್ಟಿದರೆಂದು ಗುಡಿಸಲಿಗೆ ಬೆಂಕಿ ಹಾಕಿದ್ದರು. ಅವರಿಗೂ ನಾವು ಪರಿಹಾರ ಕೊಟ್ಟಿಲ್ಲ. ನಗರದಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಮನೆಗಾಗಿ ಅರ್ಜಿ ಹಾಕಿ ಕಾಯುತ್ತಿದ್ದಾರೆ. ಈ ರೀತಿ ಅಕ್ರಮವಾಗಿ ಮನೆ, ಸಹಾಯಧನ ನೀಡಬಾರದು ಎಂದು ವರದಿಯಲ್ಲಿ ತಿಳಿಸಿದ್ದೇವೆ. ನಿಯಮ ಪ್ರಕಾರ ಮಾಡಬೇಕೇ ಹೊರತು ಮಾನವೀಯತೆ ದೃಷ್ಟಿಯಿಂದ ಕ್ರಮ ಬೇಡ ಎಂದು ಆಗ್ರಹಿಸಿದರು.

ಎನ್‌ಐಎ ತನಿಖೆಗೆ ಆಗ್ರಹ:

ಕಲಬುರಗಿ ಮತ್ತಿತರ ಕಡೆಗಳಿಂದ ಬಂದು ಅಕ್ರಮವಾಗಿ ಗುಡಿಸಲು ಹಾಕಿಕೊಂಡು ತೆರವಾದವರಿಗೆ ಪರಿಹಾರ ಕೊಡದೇ, ಹೊರದೇಶದವರಿಗೆ ಈ ರೀತಿ ಕುಮ್ಮಕ್ಕು ಕೊಡುವುದನ್ನು ಬಿಜೆಪಿ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಅವರೆಲ್ಲರನ್ನು ನಮ್ಮ ಸಮರ್ಥ ಪೊಲೀಸ್ ಇಲಾಖೆ ಪರಿಶೀಲನೆ ಮಾಡಬೇಕು. ತರಾತುರಿಯಲ್ಲಿ ಹೊರದೇಶದವರಿಗೆ ಮನೆ ಕೊಡಲು ಹೊರಟಿದೆ. ವಿದೇಶದವರು ಇರುವ ಕಾರಣ ಎನ್‍ಐಎ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.