ಬೆಳಗಾವಿ: ಸುವರ್ಣ ಕರ್ನಾಟಕ ಸಂಭ್ರಮದಲ್ಲೇ ಪ್ರತ್ಯೇಕ ಉಕ ರಾಜ್ಯಕ್ಕೆ ಕೂಗು..!
ಇಷ್ಟು ದಿನ ಸೈಲೆಂಟ್ ಆಗಿದ್ದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಕೇಳಿ ಬಂದಿದೆ. ಸ್ವತಃ ಉತ್ತರ ಕರ್ನಾಟಕ ಹೋರಾಟ ಸಮಿತಿ ಪದಾಧಿಕಾರಿಗಳು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬೇಡಿಕೆ ಇಟ್ಟಿದ್ದಾರೆ.
ಬೆಳಗಾವಿ(ಡಿ.01): ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ಐವತ್ತು ವರ್ಷಗಳೇ ಕಳೆದಿವೆ. ಇಡೀ ರಾಜ್ಯವೇ ಈ ವರ್ಷ ಸುವರ್ಣ ಕರ್ನಾಟಕ ಸಂಭ್ರಮದಲ್ಲಿದೆ. ಈ ಸಂಭ್ರಮದ ಮಧ್ಯೆಯೇ ಇದೀಗ ಪ್ರತ್ಯೇಕ ರಾಜ್ಯದ ಕೂಗು ಮತ್ತೇ ಕೇಳಿ ಬಂದಿದೆ. ಇಷ್ಟು ದಿನ ತಣ್ಣಗಾಗಿದ್ದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಎತ್ತಿದವರು ಯಾರು? ಅವರ ಬೇಡಿಕೆ ಏನು ಅಂತಿರಾ? ಈ ಸ್ಟೋರಿ ನೋಡಿ.
ಮತ್ತೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು
ರಾಜ್ಯದ ಹಿರಿಯ ರಾಜಕಾರಣಿ ಉಮೇಶ ಕತ್ತಿ ಜೀವಿತಾವಧಿಯಲ್ಲಿ ಅಭಿವೃದ್ಧಿ ವಿಚಾರದಲ್ಲಿ ಎಲ್ಲ ಸರ್ಕಾರಗಳಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸುತ್ತಲೇ ಇದ್ದರು. ಈ ಭಾಗದ ಅಭಿವೃದ್ಧಿಗೆ ಸರ್ಕಾರಗಳು ಒತ್ತು ನೀಡಬೇಕು. ಆಗ ಮಾತ್ರ ಪ್ರಾದೇಶಿಕ ಅಸಮಾನತೆ ದೂರ ಮಾಡಲು ಸಾಧ್ಯ. ಈ ಭಾಗವನ್ನು ಅಭಿವೃದ್ಧಿ ಮಾಡದಿದ್ದರೆ ಉತ್ತರ ಕರ್ನಾಟಕ ಪ್ರತ್ಯೇಕವಾಗಬೇಕು ಎಂದು ಹಲವು ಸಲ ಮಾಧ್ಯಮಗಳ ಎದುರು ಉಮೇಶ ಕತ್ತಿ ಹೇಳಿಕೆ ನೀಡ್ತಿದ್ದರು.
ಅನ್ನದಾತರಿಗೆ ಸಂತಸದ ಸುದ್ದಿ: ರೈತರ ಜಮೀನು ಬಾಡಿಗೆ ಹೆಚ್ಚಳಕ್ಕೆ ಸಚಿವೆ ಹೆಬ್ಬಾಳಕರ ಸೂಚನೆ
ಉಮೇಶ ಕತ್ತಿ ನಿಧನದ ಬಳಿಕ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ನಿಂತಿತ್ತು. ಅಲ್ಲದೇ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ ಇದೀಗ ಐವತ್ತು ವರ್ಷಗಳೇ ಕಳೆದಿವೆ. ಇಡೀ ರಾಜ್ಯವೇ ಇದೀಗ ಸುವರ್ಣ ಸಂಭ್ರಮದಲ್ಲಿದೆ. ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಮೊದಲ ಚಳಿಗಾಲ ಅಧಿವೇಶನಕ್ಕೆ ಕುಂದಾನಗರಿ ಬೆಳಗಾವಿ ಸಜ್ಜುಗೊಳ್ಳುತ್ತಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಕೇಳಿ ಬಂದಿದೆ. ಸ್ವತಃ ಉತ್ತರ ಕರ್ನಾಟಕ ಹೋರಾಟ ಸಮಿತಿ ಪದಾಧಿಕಾರಿಗಳು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬೇಡಿಕೆ ಇಟ್ಟಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ 4ರಿಂದ ಆರಂಭವಾಗಲಿರುವ ಚಳಿಗಾಲ ಅಧಿವೇಶನದಲ್ಲಿ ಈ ಭಾಗದ ಮಠಾಧೀಶರ ನೇತೃತ್ವದಲ್ಲಿ ಧರಣಿ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗಳಾಗಬೇಕು. ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂಬ ಸದಾಶಯದೊಂದಿಗೆ ದಶಕಗಳ ಹಿಂದೆಯೇ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಲಾಗಿದೆ. ಅಲ್ಲದೇ ಎಲ್ಲ ಸರ್ಕಾರಗಳು ಪ್ರತಿವರ್ಷ ಬೆಳಗಾವಿಯಲ್ಲಿ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಸುತ್ತಲೇ ಬಂದಿವೆ. ಚಳಿಗಾಲ ಅಧಿವೇಶನದಲ್ಲಿ ಮಾತ್ರ ಬಳಸಲಾಗುವ ಸುವರ್ಣಸೌಧ ವರ್ಷಪೂರ್ತಿಯೂ ಕ್ರಿಯಾಶೀಲವಾಗಿರಬೇಕು ಎಂಬುದು ಈ ಭಾಗದ ಹೋರಾಟಗಾರರ ಪ್ರಮುಖ ಬೇಡಿಕೆ. ಇದಕ್ಕಾಗಿ ಈ ಭಾಗದ ಅಭಿವೃದ್ಧಿಗೆ ಪೂರಕವಾಗುವ ರಾಜ್ಯಮಟ್ಟದ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಈ ಭಾಗದ ಹೋರಾಟಗಾರರು ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ. ಆದರೆ ಸರ್ಕಾರ ಮಾತ್ರ ಈ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಈ ಸಲದ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆ ಆಗಬೇಕು. ಅಲ್ಲದೇ ಕಚೇರಿ ಸ್ಥಳಾಂತರ ಬಗ್ಗೆಯೂ ಸುದೀರ್ಘ ಚರ್ಚಿಸಿ ಸರ್ಕಾರ ಸ್ಪಷ್ಟ ನಿಲುವು ತಿಳಿಸಬೇಕು. ಇಲ್ಲವಾದರೆ ಉತ್ತರ ಕರ್ನಾಟಕ ಪ್ರತ್ಯೇಕ ಹೋರಾಟ ನಡೆಸುತ್ತೇವೆ. ಕಚೇರಿ ಸ್ಥಳಾಂತರಕ್ಕೆ ಆಗ್ರಹಿಸಿ ಅಧಿವೇಶನದಲ್ಲಿ ಧರಣಿ ನಡೆಸಲು ಉತ್ತರ ಕರ್ನಾಟಕ ಹೋರಾಟ ಸಮಿತಿ ನಿರ್ಧರಿಸಿದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಭೀಮಪ್ಪ ಗಡಾಡ ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಭಾಗ ಅಭಿವೃದ್ಧಿ ಆಗಬೇಕು ಎಂಬ ಬೇಡಿಕೆ ಸಮಂಜಸ. ಈ ಭಾಗದ ಅಭಿವೃದ್ಧಿಗೆ ಪೂರಕಗುವ ಕಚೇರಿಗಳ ಸ್ಥಳಾಂತರವಾಗಬೇಕು ಎಂದು ಬೇಡಿಕೆ ಇಡುವುದು ತಪ್ಪಲ್ಲ. ಆದರೆ ರಾಜ್ಯವೇ ಸುವರ್ಣ ಸಂಭ್ರಮದಲ್ಲಿರುವಾಗ ಪ್ರತ್ಯೇಕ ರಾಜ್ಯದ ಕೂಗು ಎದ್ದಿರುವುದು ವಿಪರ್ಯಾಸ. ಸರ್ಕಾರ ಹೋರಾಟಗಾರರ ಬೇಡಿಕೆಗೆ ಸ್ಪಂದಿಸಲಿ ಎಂಬುವುದು ಈ ಭಾಗದ ಜನರ ಆಗ್ರಹವಾಗಿದೆ..
ಅಧಿವೇಶನಕ್ಕೆ ಕುಂದಾನಗರಿ ಸಜ್ಜು
ಡಿಸೆಂಬರ್ 4 ರಿಂದ ರಾಜ್ಯದ ಚಳಿಗಾಲ ಅಧಿವೇಶನ ಆರಂಭವಾಗಲಿದೆ. ಅಧಿವೇಶನಕ್ಕೆ ಬೆಳಗಾವಿಯ ಸುವರ್ಣಸೌಧವೂ ಸಿಂಗಾರಗೊಂಡಿದೆ. ಅಧಿವೇಶನ ಯಶಸ್ವಿಗೆ ಇಡೀ ಜಿಲ್ಲಾಡಳಿತವೇ ಕಾರ್ಯಮಗ್ನವಾಗಿದ್ದು, ಅಧಿಕಾರಿಗಳು ಹಗಲಿರಳು ಶ್ರಮಿಸುತ್ತಿದ್ದಾರೆ. ನಾಳೆಯ ಹೊತ್ತಿಗೆ ಇಡೀ ಸರ್ಕಾರಳಗಾವಿಗೆ ಶಿಫ್ಟ್ ಆಗಲಿದ್ದು, ಐದು ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜಿಸಲಾಗಿದೆ.
ಡಿಸೆಂಬರ್ 4 ರಿಂದ ಆರಂಭವಾಗಲಿರುವ ಚಳಿಗಾಲ ಅಧಿವೇಶನಕ್ಕೆ ಉತ್ತರ ಕರ್ನಾಟಕ ಶಕ್ತಿ ಕೇಂದ್ರ ಎಂದು ಕರೆಯಿಸಿಕೊಳ್ಳುವ ಸುವರ್ಣಸೌಧ ಸಜ್ಜುಗೊಂಡಿದೆ. ಎರಡನೇ ಬಾರಿಗೆ ಮುಖ್ಯಮಂತ್ರಿ ಹುದ್ದೆಗೇರಿರುವ ಸಿದ್ದರಾಮಯ್ಯನವರ ಹೊಸ ಸರ್ಕಾರದ ಮೊದಲ ಚಳಿಗಾಲ ಅಧಿವೇಶನ ಇದಾಗಿದೆ. ತೀವ್ರ ಬರದ ಛಾಯೆ ಮಧ್ಯೆಯೇ ಅಧಿವೇಶನ ಯಶಸ್ವಿಗೆ ಇಡೀ ಜಿಲ್ಲೆಯ ಅಧಿಕಾರಿಗಳು ಹಗಲಿರಳು ಎನ್ನದೇ ಶ್ರಮಿಸುತ್ತಿದ್ದಾರೆ. ಮೈಸೂರು ರಾಜ್ಯಕ್ಕೆ ಸುವರ್ಣಸೌಧ ಎಂದು ನಾಮಕರಣ ಮಾಡಿ ಈ ವರ್ಷ ಐವತ್ತು ವರ್ಷ ತುಂಬಿವೆ. ಈ ಕಾರಣಕ್ಕೆ 10 ದಿನಗಳ ಸುವರ್ಣಸೌಧಕ್ಕೆ ದೀಪಾಲಂಕರ ಮಾಡಲಾಗ್ತಿದೆ. ಇನ್ನು ಅಧಿವೇಶನಕ್ಕೆ ಬರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಟಿಯು ಗೆಸ್ಟ್‍ಹೌಸ್‍ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಉಪಮುಖ್ಯಮಂತ್ರಿ ಡಿಕೆಶಿ ಪ್ರವಾಸಿ ಮಂದಿರದಲ್ಲಿ ತಂಗಲಿದ್ದಾರೆ. ಇನ್ನುಳಿದ ಸಚಿವರಿಗೆ ಯುಕೆ-27 ಹಾಗೂ ಮೇರಿಯಟ್ ಹೋಟೆಲ್‍ನಲ್ಲಿ ರೂಂ ಕಾಯ್ದಿರಿಸಲಿಸಲಾಗಿದೆ. ಶಾಸಕರು- ಅಧಿಕಾರಿಗಳು ಇನ್ನುಳಿದ ಹೋಟೆಲ್‍ಗಳಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಇನ್ನು 10 ದಿನಗಳ ಕಾಲ ಈ ಭಾಗದ ವಿಶೇಷ ಭೋಜನದ ವ್ಯವಸ್ಥೆನ್ನು ಜಿಲ್ಲಾಡಳಿತ ಮಾಡಿದೆ. ಸುವರ್ಣಸಂಭ್ರಮ ಹಿನ್ನಲೆಯಲ್ಲಿ ಅಧಿವೇಶನದ ಒಂದು ಸುವರ್ಣಸೌಧದಲ್ಲಿ ಮನರಂಜನೆ ಕಾರ್ಯಕ್ರಮ ನಡೆಸಲು ಸರ್ಕಾರ ನಿರ್ಧರಿಸಿದೆ. ಅಧಿವೇಶನ ಅಂತಿಮ ಸಿದ್ಧತೆ ಕುರಿತು ಜಿಲ್ಲಾಧಿಕಾರಿ ಡಾ. ನಿತೇಶ ಪಾಟೀಲ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತದೆ ಎಂಬ ಕಾರಣಕ್ಕೆ ಭದ್ರತೆ ದೃಷ್ಟಿಯಿಂದ 5 ಸಾವಿರ ಪೊಲೀಸರ ನಿಯೋಜಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಭದ್ರತೆಯ ನೇತೃತ್ವ ವಹಿಸಿಕೊಂಡಿದ್ದಾರೆ. ಸುಮಾರು 2 ಸಾವಿರ ಪೊಲೀಸರ ವಾಸ್ತವ್ಯಕ್ಕೆ ಸುವರ್ಣಸೌಧಕ್ಕೆ ಸಮೀಪ ಇರುವ ಅಲಾರವಾಡ ಗ್ರಾಮದಲ್ಲಿ ಬೃಹತ್ ಟೌನ್‍ಶಿಪ್ ನಿರ್ಮಿಸಲಾಗಿದೆ. ಪಿಸಿಯಿಂದ ಹವಾಲ್ದಾರ್ ದರ್ಜೆಯ ಪೊಲೀಸ್ ಸಿಬ್ಬಂದಿಗೆ ನಾಲ್ಕು ಜರ್ಮನ್ ಟೆಂಟ್ ಹಾಗೂ ಪಿಎಸ್‍ಐ ದರ್ಜೆಯ ಅಧಿಕಾರಿಗಳಿಗೆ ಚಿಕ್ಕದಾದ ಜರ್ಮನ್ ಟೆಂಟ್ ಹಾಕಿ ಟೌನ್‍ಶಿಪ್ ನಿರ್ಮಿಸಲಾಗಿದೆ. ಒಂದು ಜರ್ಮನ್ ಟೆಂಟ್‍ನಲ್ಲಿ 500 ಸಿಬ್ಬಂದಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಪಂಚಮಸಾಲಿಗೆ 2ಎ ಮೀಸಲಾತಿ: ಡಿ.5 ರಂದು ಸರ್ವಪಕ್ಷ ಶಾಸಕರ ಸಭೆ, ಕೂಡಲ ಶ್ರೀ
ಕಾಟ್-ಬೆಡ್, ಫ್ಯಾನ್, ಚಾರ್ಜಿಂಗ್ ಪಾಯಿಂಟ್, ಬಿಸಿ ನೀರು ವ್ಯವಸ್ಥೆ, ಊಟ-ಉಪಹಾರಕ್ಕೆ ಭೋಜನಾಲಯ, ಮನರಂಜನೆಗೆ ಟಿವಿ ರೂಂ, ಸ್ನಾನ ಮಾಡಲು ಬಿಸಿನೀರು ಹಾಗೂ ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಇನ್ನು ಮಚ್ಛೆ, ಆಟೋನಗರ, ಎಪಿಎಂಸಿ ಪೊಲೀಸ್ ತರಬೇತಿ ಶಾಲೆ, ಸಾಂಬ್ರಾ ಎರ್‍ಮನ್ ಶಾಲೆಯಲ್ಲಿ ಇನ್ನುಳಿದ 3 ಸಾವಿರ ಪೊಲೀಸ್ ಸಿಬ್ಬಂದಿಯ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಟೌನ್‍ಶಿಪ್‍ಗೆ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತ ಸಿದ್ದರಾಮಮಪ್ಪ ಅಂತಿಮ ಹಂತದ ಸಿದ್ಧತೆಯನ್ನು ಪರಿಶೀಲಿಸಿದರು. ಬಳಿಕ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆಗೆ ಮಾತನಾಡಿದ ಸಿದ್ದರಾಮಪ್ಪ, ಅಧಿವೇಶನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪೊಲೀಸರ ವಾಸ್ತವ್ಯಕ್ಕೆ ಹೈಟೆಕ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಹೇಳಿದ್ದಾರೆ.
ಬೆಳಗಾವಿ ಅಧಿವೇಶನ ಅಂದ್ರೆ ಸಾಲು ಸಾಲು ಪ್ರತಿಭಟನೆಗಳಿರುತ್ತವೆ. ಪ್ರತಿಭಟನೆಗಳ ಸಂಖ್ಯೆ ಕಡಿಮೆ ಮಾಡಲು ಈ ಸಲ ಸರ್ಕಾರವೇ ಹೊಸ ಪ್ಲ್ಯಾನ್ ಮಾಡಿಕೊಂಡಿದೆ. ಅಧಿಕಾರಿಗಳು ಹಾಗೂ ಆಯಾ ಇಲಾಖೆ ಸಚಿವರೇ ಎಲ್ಲ ಸಂಘಟನೆಗಳ ಜೊತೆಗೆ ಚರ್ಚಿಸಿ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಅಧಿವೇಶನಕ್ಕೆ ಬೆಳಗಾವಿ ಸಜ್ಜುಗೊಂಡಿದ್ದು, ಈ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗೆ ವೇದಿಕೆ ಆಗಲಿ ಎಂಬುವುದೇ ಈ ಭಾಗದ ಜನರ ಆಗ್ರಹವಾಗಿದೆ.