ಅರ್ಚಕರಿಗೆ ಮಾಸಿಕ ಗೌರವಧನ ಹೆಚ್ಚಳಕ್ಕೆ ಆಗ್ರಹ : ಎಂ.ಎಸ್. ವೆಂಕಟಾಚಲಯ್ಯ
ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಲ್ಲಿ ಆರ್ಚಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರಿಗೆ ನೀಡುತ್ತಿರುವ ತಸ್ತೀಕ್ ಹೆಚ್ಚಳ, ಮಾಸಿಕ ಗೌರವಧನ ಹಾಗೂ ಖಜಾನೆ ಮೂಲಕ ಗೌರವಧನ ಪಾವತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಫೆ.7 ರಂದು ಬೆಂಗಳೂರಿನ ಪುರಭವನದಲ್ಲಿ ಅರ್ಚಕರು, ಆಗಮಿಕರು ಮತ್ತು ಉಪಾಧಿವಂತರ ರಾಜ್ಯಮಟ್ಟದ ಸಮಾವೇಶ ಘಂಟನಾದ-2 ಹಮ್ಮಿಕೊಳ್ಳಲಾಗಿದೆ
ತುಮಕೂರು : ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಲ್ಲಿ ಆರ್ಚಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರಿಗೆ ನೀಡುತ್ತಿರುವ ತಸ್ತೀಕ್ ಹೆಚ್ಚಳ, ಮಾಸಿಕ ಗೌರವಧನ ಹಾಗೂ ಖಜಾನೆ ಮೂಲಕ ಗೌರವಧನ ಪಾವತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಫೆ.7 ರಂದು ಬೆಂಗಳೂರಿನ ಪುರಭವನದಲ್ಲಿ ಅರ್ಚಕರು, ಆಗಮಿಕರು ಮತ್ತು ಉಪಾಧಿವಂತರ ರಾಜ್ಯಮಟ್ಟದ ಸಮಾವೇಶ ಘಂಟನಾದ-2 ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ, ಆಗಮಿಕರ ಸಂಘದ ರಾಜ್ಯಾಧ್ಯಕ್ಷ ಎಂ.ಎಸ್. ವೆಂಕಟಾಚಲಯ್ಯ ತಿಳಿಸಿದ್ದಾರೆ.
ನಗರದ ಮಾರುತಿ ನಗರದ ಶ್ರೀವೈಷ್ಣವ ಸಭಾದಲ್ಲಿ ನಡೆದ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಈಗಾಗಲೇ ನಮ್ಮ ಹಲವು ಬೇಡಿಕೆಗಳನ್ನು ಈಡೇರಿಸಿದ, ಇದರ ಭಾಗವಾಗಿ ಸರ್ಕಾರದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಧಾರ್ಮಿಕ ದತ್ತಿ ಇಲಾಖೆ ಮಂತ್ರಿಗಳ ಹಾಗೂ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದರ ಜೊತೆಗೆ, ಹೊಸ ಬೇಡಿಕೆಗಳನ್ನು ಸರ್ಕಾರದ ಮುಂದಿಡುವ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಸುಮಾರು 36 ಸಾವಿರ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳ ಅರ್ಚಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ, ಆಗಮಿಕರ ಸಂಘ ಹಾಗೂ ಅಖಿಲ ಕರ್ನಾಟಕ ಹಿಂದು ದೇವಾಲಯಗಳ ಆಗಮಿಕರ, ಉಪಾಧಿವಂತರ ಒಕ್ಕೂಟದ ಸಹಯೋಗದಲ್ಲಿ ನಡೆಯುತ್ತಿರುವ ಆರ್ಚಕರು, ಆಗಮಿಕರ ಸಮಾವೇಶ ಘಂಟನಾದ -೨ರ ಬಗ್ಗೆ ರಾಜ್ಯದಲ್ಲಿರುವ ಅರ್ಚಕರು, ಆಗಮಿಕರಿಗೆ ತಿಳಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಒಂದು ಪೂರ್ವಭಾವಿ ಸಭೆ ನಡೆಸಿ, ಮಾಧ್ಯಮಗಳ ಮೂಲಕ ಪ್ರಚಾರ ನಡೆಸುತ್ತಿದ್ದು, ತುಮಕೂರಿನಲ್ಲಿ ಸಹ ಪ್ರಚಾರ ಕೈಗೊಳ್ಳಲಾಗಿದೆ. ಫೆ.7ರಂದು ನಡೆಯುವ ರಾಜ್ಯ ಸಮಾವೇಶದಲ್ಲಿ ಹೆಚ್ಚಿನ ಜನರು ಪಾಲ್ಗೊಂಡು ಯಶಸ್ವಿಗೊಳಿ ಸುವಂತೆ ಎಂ.ಎಸ್. ವೆಂಕಟಾಚಲಯ್ಯ ಮನವಿ ಮಾಡಿದರು.
ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ, ಆಗಮಿಕರ ಸಂಘದ ಉಪಾಧ್ಯಕ್ಷ ವಿ. ಕೃಷ್ಣಯ್ಯ ಮಾತನಾಡಿ, ನಮ್ಮ ಸಂಘ ಸ್ಥಾಪನೆಯಾದ ನಂತರ ಸರ್ಕಾರದ ಮುಂದಿಟ್ಟ ಹಲವು ಬೇಡಿಕೆಗಳನ್ನು ಈಡೇರಿಸಿವೆ. ಆರಂಭದಲ್ಲಿ ತಿಂಗಳಿಗೆ 500 ರು. ಇದ್ದ ತಸ್ತೀಕ್ ಇಂದು 5 ಸಾವಿರ ರು.ಗಳಿಗೆ ತಲುಪಿದೆ. ಆದರೆ ಇಂದಿನ ಬೆಲೆ ಹೆಚ್ಚಳದ ಭರದಲ್ಲಿ ಐದು ಸಾವಿರ ರು. ಗಳಿಂದ ಯಾವುದೇ ಪೂಜೆ, ಪುನಸ್ಕಾರಗಳನ್ನು ಮಾಡಲು ಸಾಧ್ಯವಿಲ್ಲ. ಹಾಗಾಗಿ ಕನಿಷ್ಠ ಮಾಸಿಕ 8 ಸಾವಿರ ರು. ಗಳಿಗೆ ತಸ್ತೀಕ್‌ನ್ನು ಹೆಚ್ಚಳ ಮಾಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಇದರ ಜೊತೆಗೆ ಇಡೀ ದಿನ ದೇವಾಲಯ ದಲ್ಲಿಯೇ ಕಳೆಯುವ ನಮಗೆ ಬೇರೆ ಅದಾಯದ ಮೂಲಗಳಿಲ್ಲ. ಹಾಗಾಗಿ ಮಾಸಿಕ 10 ಸಾವಿರ ರು.ಗಳ ಗೌರವಧನ ನೀಡಬೇಕು. ಹಾಗೆಯೇ ಕೆಲ ದೇವಾಲಯಗಳು ಶಿಥಿಲಗೊಂಡಿದ್ದು, ಅವುಗಳ ಜೀರ್ಣೋದ್ಧಾರ ಮಾಡಬೇಕು. ಸ್ವಯಂ ನಿವೃತ್ತಿ ಪಡೆದರೆ ಐದು ಲಕ್ಷ ರು. ಹಿಡಿಗಂಟು ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಘಂಟನಾದ-2 ರಾಜ್ಯ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಧಾರ್ಮಿಕ ದತ್ತಿ ಇಲಾಖೆಯ ಮಂತ್ರಿ ರಾಮಲಿಂಗಾರೆಡ್ಡಿ, ಆರೋಗ್ಯ ಸಚಿವ ದಿನೇಶಗುಂಡೂರಾವ್ ಸೇರಿದಂತೆ ಸರ್ಕಾರದ ಹಲವು ಸಚಿವರು, ಶಾಸಕರು ಸಹ ಪಾಲ್ಗೊಳ್ಳಲಿದ್ದಾರೆ. ತುಮಕೂರು ಜಿಲ್ಲೆಯಲ್ಲಿರುವ 2883 ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳ ಅರ್ಚಕರು, ಆಗಮಿಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದರು.
ಈ ವೇಳೆ ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ, ಆಗಮಿಕರ ಸಂಘ ಖಜಾಂಚಿ ಆರ್. ರಘು, ಸಹಕಾರ್ಯದರ್ಶಿ ಗೋಪಿನಾಥ್, ತುಮಕೂರು ಜಿಲ್ಲಾಧ್ಯಕ್ಷ ನಂದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.