ಸರ್ಕಾರದ ಯೋಜನೆ ಫಲಾನುಭವಿಗಳಿಗೆ ತಲುಪಿಸಿ : ಸಾಲ ನೀಡುವಲ್ಲಿ ತಾತ್ಸಾರ ಸಲ್ಲದು: ಸಿಇಒ

ಪರಿಶಿಷ್ಟಜಾತಿ ಪರಿಶಿಷ್ಟವರ್ಗದವರ ಕಲ್ಯಾಣಕ್ಕಾಗಿ ರೂಪಿಸಲ್ಪಟ್ಟಿರುವ ಅನೇಕ ಸರ್ಕಾರಿ ಯೋಜನೆಗಳಡಿಯಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಬ್ಯಾಂಕುಗಳು ಅನಗತ್ಯ ವಿಳಂಬ ಮಾಡದೇ ಶೀಘ್ರವಾಗಿ ಮಂಜೂರಾತಿ ಮಾಡಬೇಕೆಂದು ಬ್ಯಾಂಕ್‌ ಅಧಿಕಾರಿಗಳಿಗೆ ಜಿಪಂ ಸಿಇಒ ಜಿ. ಪ್ರಭು ತಾಕೀತು ಮಾಡಿದರು.

Deliver government schemes to beneficiaries snr

 ತುಮಕೂರು :  ಪರಿಶಿಷ್ಟಜಾತಿ ಪರಿಶಿಷ್ಟವರ್ಗದವರ ಕಲ್ಯಾಣಕ್ಕಾಗಿ ರೂಪಿಸಲ್ಪಟ್ಟಿರುವ ಅನೇಕ ಸರ್ಕಾರಿ ಯೋಜನೆಗಳಡಿಯಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಬ್ಯಾಂಕುಗಳು ಅನಗತ್ಯ ವಿಳಂಬ ಮಾಡದೇ ಶೀಘ್ರವಾಗಿ ಮಂಜೂರಾತಿ ಮಾಡಬೇಕೆಂದು ಬ್ಯಾಂಕ್‌ ಅಧಿಕಾರಿಗಳಿಗೆ ಜಿಪಂ ಸಿಇಒ ಜಿ. ಪ್ರಭು ತಾಕೀತು ಮಾಡಿದರು.

ಜಿಲ್ಲಾಮಟ್ಟದ ಬ್ಯಾಂಕುಗಳ ಮಾಚ್‌ರ್‍ 2023ರ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಹಾಗೂ ಜಿಲ್ಲಾಮಟ್ಟದ ಸಮಾಲೋಚನಾ ಸಭೆಯ ಅಧ್ಯಕ್ಷತೆಯಲ್ಲಿ ಮಾತನಾಡಿದರು.

ವಿವಿಧ ಇಲಾಖೆಗಳಿಂದ ಬ್ಯಾಂಕ್‌ಗಳಿಗೆ ಸಲ್ಲಿಸಿದ ಸಾಲದ ಅರ್ಜಿಗಳ ಪ್ರಗತಿ ಪರಿಶೀಲನೆ ಮಾಡಿ ಸಮಾಜದ ಬಡ ಹಾಗೂ ಅಶಕ್ತ ವರ್ಗದವರಿಗಾಗಿ, ನಿರುದ್ಯೋಗಿಗಳಿಗಾಗಿ ಅನೇಕ ಯೋಜನೆಗಳಲ್ಲಿ ಶೇ.50ರಿಂದ ಶೇ.75ರವರೆಗೆ ಸರ್ಕಾರದಿಂದ ಸಹಾಯಧನದ ಸೌಲಭ್ಯವಿದ್ದು, ಬ್ಯಾಂಕುಗಳ ಹೊಣೆ ಕಡಿಮೆಯಾಗಿದ್ದರೂ ಫಲಾನುಭವಿಗಳಿಗೆ ಸಾಲ ನೀಡುವಲ್ಲಿ ತಾತ್ಸಾರ ಧೋರಣೆ ಏಕೆ ಎಂದು ಪ್ರಶ್ನಿಸಿದರು.

ಈ ನಿಟ್ಟಿನಲ್ಲಿ ಬ್ಯಾಂಕುಗಳು ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಬಾಕಿ ಇರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಿದರು. ಇದೇ ಸಮಯದಲ್ಲಿ ಕಳೆದ ಸಾಲಿನಲ್ಲಿ ಆದ್ಯತಾ ವಲಯಕ್ಕೆ ಗುರಿಮೀರಿದ ನಿರ್ವಹಣೆ ಮಾಡಿ ಹೆಚ್ಚಿನ ಸಾಲ ಸೌಲಭ್ಯ ನೀಡಿದ ಬ್ಯಾಂಕುಗಳನ್ನು ಶ್ಲಾಘಿಸಿದರು.

ದಕ್ಷ ಉಸ್ತುವಾರಿಗಾಗಿ ಬ್ಯಾಂಕುಗಳಿಗೆ ಸಲ್ಲಿಕೆಯಾಗುವ ಸಾಲದ ಅರ್ಜಿಗಳ ಪಟ್ಟಿಯನ್ನು ಜಿಲ್ಲಾ ಪಂಚಾಯತ್‌ ಕಚೇರಿ ಹಾಗೂ ಲೀಡ್‌ ಬ್ಯಾಂಕ್‌ ಕಚೇರಿಗೂ ಸಲ್ಲಿಸಬೇಕೆಂದು ವಿವಿಧ ಇಲಾಖೆಗಳಿಗೆ ಆದೇಶಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಯೋಜನೆಗಳ ಫಲವನ್ನು ಅರ್ಹರಿಗೆ ತಲುಪಿಸುವ ಕೆಲಸವನ್ನು ಸೇವಾ ಮನೋಭಾವದಿಂದ ನಿರ್ವಹಿಸಲು ಕರೆ ನೀಡಿದರು.

ಮುಂದಿನ ಪರಿಶೀಲನಾ ಸಭೆಯೊಳಗಾಗಿ ಬಾಕಿಯಿರುವ ಅರ್ಜಿಗಳನ್ನು ಕಡ್ಡಾಯವಾಗಿ ಇತ್ಯರ್ಥಪಡಿಸುವಂತೆ ಸೂಚಿಸಿದರು. ಅಲ್ಲದೇ ಸಭೆಗೆ ಗೈರು ಹಾಜರಾದ ಬ್ಯಾಂಕುಗಳ ಮುಖ್ಯ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸು ಜಾರಿ ಮಾಡುವಂತೆಯೂ ಆದೇಶಿಸಿದರು.

ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಪ್ರಕಾಶ್‌ ಮಾತನಾಡಿ, ಸಾಮಾಜಿಕ ಸುರಕ್ಷತಾ ಯೋಜನೆಗಳ ಫಲವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಂತೆ ಮನವಿ ಮಾಡಿದ್ದಲ್ಲದೇ ಸಾಲದ ಅರ್ಜಿಗಳನ್ನು ಸ್ವೀಕರಿಸಿದ ಹದಿನೈದು ದಿನದೊಳಗಾಗಿ ವಿಲೇವಾರಿ ಮಾಡುವಂತೆ ಬ್ಯಾಂಕು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕೀರ್ತಿಪ್ರಭಾ ಹಾಗೂ ಆರ್‌ಬಿಐನ ಜಿಲ್ಲಾ ಮಾರ್ಗದರ್ಶಿ ಅಧಿಕಾರಿ ಜೆ.ಎಂ.ಹುನುಗುಂದ್‌ ಮಾತನಾಡಿದರು. ಈ ಸಭೆಗೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾಧಿಕಾರಿಗಳು ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios