ಯಾದಗಿರಿ: ಬಸವಸಾಗರಕ್ಕೆ ದೆಹಲಿ ವಕೀಲರ ತಂಡ ಭೇಟಿ
ಬಸವಸಾಗರ ಜಲಾಶಯಕ್ಕೆ ಆಗಮಿಸಿದ ವಕೀಲರ ತಂಡದ ಸದಸ್ಯರು ಜಲಾಶಯವನ್ನು ವೀಕ್ಷಣೆ ಮಾಡಿದ ನಂತರ ನಿಮಗಮದ ಮುಖ್ಯ ಅಭಿಯಂತರ ಮಂಜುನಾಥ ಅವರು ತಂಡದ ಸದಸ್ಯರಿಗೆ ಸಂರ್ಪೂಣವಾದ ಮಾಹಿತಿಯನ್ನು ನೀಡಿದರು.
ಹುಣಸಗಿ(ಡಿ.25): ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ದೆಹಲಿಯ ವಕೀಲರ ತಂಡ ಭೇಟಿ ನೀಡಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆ ಹಂತದ ಕೊಪ್ಪಳ ಏತ ನೀರಾವರಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲಾಯಿತು. ಶನಿವಾರ ಮಧ್ಯಾಹ್ನ ಬಸವಸಾಗರ ಜಲಾಶಯಕ್ಕೆ ಆಗಮಿಸಿದ ವಕೀಲರ ತಂಡದ ಸದಸ್ಯರು ಜಲಾಶಯವನ್ನು ವೀಕ್ಷಣೆ ಮಾಡಿದ ನಂತರ ನಿಮಗಮದ ಮುಖ್ಯ ಅಭಿಯಂತರ ಮಂಜುನಾಥ ಅವರು ತಂಡದ ಸದಸ್ಯರಿಗೆ ಸಂರ್ಪೂಣವಾದ ಮಾಹಿತಿಯನ್ನು ನೀಡಿದರು.
ಕಾನೂನು ತಂಡದ ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಮಾತನಾಡಿ, ನಾರಾಯಣಪುರ ಬಸವಸಾಗರ ಜಲಾಶಯದ ಸಾವಿರಾರು ಹೆಕ್ಟೇರ್ ಜಮೀನುಗಳಿಗೆ ನೀರು ಒದಗಿಸುವ ಮೂಲಕ ರೈತರ ಜೀವನಾಡಿಯಾಗಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಎಲ್ಲಾ ರೈತರ ಜಮೀನುಗಳಿಗೆ ಸಮಾನ ಪ್ರಮಾಣದಲ್ಲಿ ನೀರು ಹರಿಸುವ ಹಿನ್ನೆಲೆ ದೇಶದಲ್ಲಿ ಮೊದಲ ಬಾರಿಗೆ ಕೃಷ್ಣಾ ಕಾಡಾ ವ್ಯಾಪ್ತಿ ಸ್ಕಾಡಾ ತಂತ್ರಜ್ಞಾನ ಅಳವಡಿಸಲಾಗಿದೆ ಎಂದರು.
ಕೆಳ ಭಾಗದ ರೈತರ ಜಮೀನುಗಳಿಗೆ ನೀರು ತಲುಪುವುದಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದು, ಎಲ್ಲಾ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪಿಸುವ ನಿಟ್ಟಿನಲ್ಲಿ ಸ್ಕಾಡಾ ತಂತ್ರಜ್ಞಾನ ಅಳವಡಿಸಲಾಗಿದೆ. ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿಯ ಕಂಟ್ರೋಲ್ ರೂಂನಲ್ಲಿ ಅಳವಡಿಸಲಾಗಿರುವ ಮೇಲ್ವಿಚಾರಣಾ ನಿಯಂತ್ರಣ ಮತ್ತು ಡೇಟಾ ಸ್ವಾಧೀನ ತಂತ್ರಜ್ಞಾನದಿಂದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅನಗತ್ಯ ನೀರು ಪೋಲಾಗದಂತೆ ಮತ್ತು ಎಲ್ಲರಿಗೂ ಸಮಾನವಾಗಿ ನೀರು ತಲುಪಿಸುವಲ್ಲಿ ಈ ನೂತನ ತಂತ್ರಜ್ಞಾನ ಸಹಕರಿಸಲಿದೆ ಎಂದರು.
ಯಾದಗಿರಿ: ಜವರಾಯನ ಅಟ್ಟಹಾಸಕ್ಕೆ ರಾಜ್ಯಮಟ್ಟದ ಇಬ್ಬರು ಖೋಖೋ ಕ್ರೀಡಾಪಟುಗಳು ಸಾವು
ಕಾಲುವೆ ಜಾಲಗಳಿಗೆ ಸ್ಕಾಡಾ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ನೀರನ್ನು ಬೀಡಲಾಗುತ್ತಿರುವ ಪದ್ಧತಿ ದೇಶದಲ್ಲಿಯೇ ಮಾದರಿಯಾಗಿದೆ. ಕೇಂದ್ರ ಸರ್ಕಾರದ ಜಲಸಂಪನ್ಮೂಲ ಸಚಿವರು ಕೂಡ ಈ ಒಂದು ತಂತ್ರಜ್ಞಾನವನ್ನು ಮನಸಾರೆ ಹೋಗಳಿದ್ದಾರೆ ಎಂದರು.
ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದ ಶ್ಯಾಮ ದಿವಾನ, ಮೋಹನ ಕಾತರಕಿ, ವಿ.ಎನ್. ರಘುಪತಿ, ಹೈಕೋರ್ಚ್ ವಕೀಲರಾದ ಪಿ.ಎನ್. ರಾಜೇಶ್ವರ, ಅಶ್ವಿನ ಚಿಕ್ಕಮಠ, ಜಲಸಂಪನ್ಮೂಲ ಇಲಾಖೆಯ ಮುಖ್ಯ ಅಭಿಯಂತರ ಎನ್. ಶ್ರೀನಿವಾಸ, ಸರಕಾರದ ಕಾರ್ಯದರ್ಶಿ ಜಲ ಸಂಪನ್ಮೂಲ ಇಲಾಖೆಯ ಕೃಷ್ಣಮೂರ್ತಿ ಕುಲಕರ್ಣಿ, ಮುಖ್ಯ ಇಂಜಿನಿಯರ್ ಆಲಮಟ್ಟಿಯ ಸುರೇಶ ಹೆಚ್., ಮುಖ್ಯ ಇಂಜಿನಿಯರ್ ಭೀ.ಗುಡಿಯ ಪ್ರೇಮಸಿಂಗ, ಮುಖ್ಯ ಇಂಜಿನಿಯರ್ ರಾಂಪೂರ ರವಿಶಂಕರ್ ಹೆಚ್., ಪ್ರಧಾನ ತಾಂತ್ರಿಕ ಸಲಹೆಗಾರ ಶ್ರೀರಾಮಯ್ಯ ಇತರರಿದ್ದರು.