ಉಡುಪಿ(ಡಿ.24): ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿರುವ ಪೇಜಾವರ ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಅವರ ಚಿಕಿತ್ಸೆಗೆ ಬೆಂಗಳೂರಿನ ಇಬ್ಬರು ತಜ್ಞ ವೈದ್ಯರು ಮಣಿಪಾಲಕ್ಕೆ ಆಗಮಿಸಿದ್ದಾರೆ, ಜೊತೆಗೆ ದೆಹಲಿಯ ಏಮ್ಸ್‌ ಆಸ್ಪತ್ರೆಯ ಸಹಾಯವನ್ನೂ ಪಡೆಯಲಾಗಿದೆ.

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಮಣಿಪಾಲ ಆಸ್ಪತ್ರೆಗೆ ಕರೆ ಮಾಡಿ, ಶ್ರೀಗಳಿಗೆ ಗರಿಷ್ಠ ವೈದ್ಯಕೀಯ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ. ಚಿಕಿತ್ಸೆಗೆ ಬೇಕಾದ ಎಲ್ಲಾ ರೀತಿಯ ನೆರವು ನೀಡುವುದಕ್ಕೆ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದಾರೆ.

ಪೇಜಾವರ ಶ್ರೀ: 3 ದಿನಗಳಿಂದ ಪ್ರಜ್ಞೆ ಬಂದಿಲ್ಲ, ಕೃತಕ ಉಸಿರಾಟ ಮುಂದುವರಿಕೆ

ಶುಕ್ರವಾರ ಮುಂಜಾನೆ ತೀವ್ರ ನ್ಯುಮೋನಿಯಾ ಸೋಂಕಿನಿಂದಾಗಿ ಪ್ರಜ್ಞಾಹೀನರಾಗಿ ಆಸ್ಪತ್ರೆಗೆ ದಾಖಲಾಗಿರುವ ಶ್ರೀಗಳಿಗೆ ಸೋಮವಾರವೂ ಪ್ರಜ್ಞೆ ಬಂದಿಲ್ಲ, ಆದರೆ ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದಾರೆ.

ನ್ಯುಮೋನಿಯಾದ ಕಾರಣಕ್ಕೆ ಶ್ವಾಸಕೋಶದಲ್ಲಿ ಕಫ ತುಂಬಿದ್ದು, ಭಾನುವಾರ ರಾತ್ರಿ ಎಕ್ಸ್‌ರೇ ಮತ್ತು ಸ್ಕಾ್ಯನಿಂಗ್‌ ಮಾಡಲಾಗಿದ್ದು, ಬೆಂಗಳೂರಿನ ಇಬ್ಬರು ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

 

ಸೋಮವಾರ ರಾತ್ರಿ ಎಂಆರ್‌ಐ ಸ್ಕಾ್ಯನಿಂಗ್‌ ನಡೆಸಿ, ದೆಹಲಿಯ ಏಮ್ಸ್‌ ವೈದ್ಯರೊಂದಿಗೆ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಸಮಾಲೋಚನೆ ನಡೆಸಿ, ಮುಂದಿನ ಚಿಕಿತ್ಸೆಯ ಕ್ರಮದ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೋಗ್ಯ ಸುಧಾರಣೆ:

ವಿಶ್ವೇಶ ತೀರ್ಥರು ಇದುವರೆಗಿನ ಚಿಕಿತ್ಸೆಗೆ ಸ್ಪಂದಿಸಿದ್ದಾರೆ, ಆರೋಗ್ಯ ಸುಧಾರಿಸಿದೆ. ತಜ್ಞ ವೈದ್ಯರು ಬಂದಿರುವುದರಿಂದ, ಮಂಗಳವಾರ ಚಿಕಿತ್ಸೆಯ ಕ್ರಮ ಬದಲಾಗುವ ಸಾಧ್ಯತೆ ಇದೆ ಎಂದು ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಪೇಜಾವರ ಶ್ರೀಗಳ ಆಪ್ತ ಶಿಷ್ಯೆ ಸಾಧ್ವಿ ಉಮಾಭಾರತಿ ಸೋಮವಾರ ಸಂಜೆ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು ಮತ್ತು ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಉಡುಪಿ: 'ಶ್ರೀಗಳಿಗೆ ವೆಂಟಿಲೇಟರ್‌ನಲ್ಲೇ ಉಸಿರಾಟ ಮುಂದುವರಿಕೆ'..!

ಪೇಜಾವರ ಶ್ರೀಗಳು ನನಗೆ ತಂದೆ ಇದ್ದಂತೆ ಎಂದ ಅವರು, ಅವರಿಗೆ ಇಲ್ಲಿ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ದೇಶದ ಎಲ್ಲರೂ ಶ್ರೀಗಳ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದ್ದಾರೆ.