ಸಿರವಾರ(ಅ.5): ಕೇಂದ್ರ ತಂಡದಿಂದ ಕೈಗೊಂಡಿದ್ದ ಸಮೀಕ್ಷೆ ವರದಿಗೂ ಮತ್ತು ರಾಜ್ಯದ ಅಧಿಕಾರಿಗಳು ನೀಡಿರುವ ವರದಿಯಲ್ಲಿರುವ ಅಂಕಿ ಅಂಶಗಳು ತಾಳೆಯಾಗದ ಹಿನ್ನೆಲೆಯಲ್ಲಿ ನೆರೆ ಪರಿಹಾರ ನೀಡುವಲ್ಲಿ ವಿಳಂಬವಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬೆಳಗಾವಿ, ಬಾಗಲಕೋಟೆ ಭಾಗದಲ್ಲಿ ಮಳೆ, ನದಿ ಪ್ರವಾಹದಿಂದಿ ಹಾನಿಯಾದರೆ. ನನ್ನ ಕ್ಷೇತ್ರವಾದ ರಾಯಚೂರು-ಯಾದಗಿರಿ ಜಿಲ್ಲೆಗಳಲ್ಲಿ ನದಿ ಪ್ರವಾಹದಿಂದ ಮಾತ್ರ ಹಾನಿಯಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ತಂಡ ಭೇಟಿ ನೀಡಿ ಸರ್ಕಾರಿ ಹಾಗೂ ಖಾಸಗಿ ಆಸ್ತಿಪಾಸ್ತಿಗಳ ಹಾನಿ ಬಗ್ಗೆ ವರದಿಯನ್ನು ಪ್ರಧಾನ ಮಂತ್ರಿ ಹಾಗೂ ಕೇಂದ್ರ ಹಣಕಾಸು ಇಲಾಖೆಗೆ ಕಳಿಸಿತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜ್ಯದಿಂದಲೂ ಸಹ ವರದಿಯನ್ನು ನೀಡಲಾಗಿದೆ. ಈ ಎರಡು ವರದಿಗಳಲ್ಲಿರುವ ಅಂಕಿ ಅಂಶಗಳು ತಾಳೆಯಾಗುತ್ತಿಲ್ಲ, ಅಧಿಕಾರಿಗಳು ಇಂತಹ ಸಂದರ್ಭವನ್ನು ಉಪಯೋಗಿಸಿಕೊಂಡು ಅನುದಾನವನ್ನು ಲೂಟಿ ಮಾಡಲು ಸುಳ್ಳು ವರದಿಯನ್ನು ನೀಡಿದೆ. ಇದರಿಂದಾಗಿ ಕೇಂದ್ರದಿಂದ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗಿದೆ ಎಂದರು.

ಅಲ್ಪ ಮಟ್ಟಿಗೆ ಪರಿಹಾರವನ್ನು ಈಗಾಗಲೇ ಸಂತ್ರಸ್ತರಿಗೆ ನೀಡಲಾಗಿದೆ. ಪ್ರವಾಹಕ್ಕೆ ಪದೇ ಪದೇ ಹಾನಿಯಾಗುವ ಹಳ್ಳಿ, ಗ್ರಾಮಗಳನ್ನು ಶಾಶ್ವತ ಸ್ಥಳಾಂತರ ಮಾಡಿ ಮೂಲ ಸೌಲಭ್ಯಗಳನ್ನು ಒದಗಿಸಿ ಕೊಡಲು ಸಮಯ ಬೇಕಾಗುತ್ತದೆ. ವಿಶೇಷ ಅನುದಾನವನ್ನು ಬಿಜೆಪಿ ಸಂಸದರೆ ತರುತ್ತೆವೆ. ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಬರುವುದು ಬೇಕಾಗಿಲ್ಲ ಎಂದು ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿದರು.

ಸಚಿವ ಬಿ.ಶ್ರೀರಾಮುಲು ಅವರು ಹಿಂದೆಯೂ ಸಹ ಜಿಲ್ಲೆಯ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲೆಯ ಬಗ್ಗೆ ಮಾಹಿತಿ ಇದೆ. ಸರ್ಕಾರ ಮಟ್ಟದಲ್ಲಿ ಜಿಲ್ಲೆಗೆ ಏನು ಅನುದಾನ, ಕೆಲಸ ಕಾರ್ಯಗಳು ಮಾಡುತ್ತಿದ್ದಾರೆ. ಉಸ್ತುವಾರಿ ನೀಡುವ ಮುಂಚೆಯೆ ಜಿಲ್ಲೆಯಲ್ಲಿ ಪ್ರವಾಸ ಮಾಡಿ ನಷ್ಟದ ಬಗೆ ವರದಿ ಪಡೆದುಕೊಂಡಿದ್ದಾರೆ ಎಂದರು.

ಅನುದಾನ ತರುವಲ್ಲಿ ವಿಳಂಬದ ಕುರಿತು ಕೇಳಿದರೆ ದೇಶ ದ್ರೋಹಿಗಳು ಎಂದು ಕೆಲ ಸಂಸದರು ಮಾಡಿರುವ ಆರೋಪಕ್ಕೆ ಯಾರು ಆ ಮಾತು ಹೇಳಿದ್ದಾರೆ ಅವರಲ್ಲಿ ಪ್ರಶ್ನೆ ಮಾಡಬೇಕು.ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 3-4 ನೂತನ ತಾಲೂಕಗಳು ಇವೆ. ಅಧಿಕಾರಿಗಳ, ಕಚೇರಿಗಳ ಕೊರತೆ ಇರುವುದು ಗಮನಕ್ಕೆ ಇದೆ ಅದಕ್ಕೂ ಸೂಕ್ತ ಕ್ರಮಕೈಗೊಳಲಾಗುವುದು ಎಂದು ಹೇಳಿದರು.