ಕೊಪ್ಪ​ಳದ ಜಿಂಕೆ ಬೇಟೆಗೆ ಕೇರ​ಳ​ ನಂಟು..!

ರಾತ್ರೋ​ರಾತ್ರಿ ಜಿಂಕೆ ಚರ್ಮ, ಜಿಂಕೆ ಕೇರ​ಳಕ್ಕೆ ರವಾ​ನೆ| ಕೋವಿಡ್‌ ಸಂಕಷ್ಟದಲ್ಲಿಯೇ ಹೆಚ್ಚಾಯಿತು ಜಿಂಕೆ ಬೇಟೆ| ಸಾಲು ಸಾಲು ಜಿಂಕೆಗಳ ಬಲಿ| ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿಯೇ ಬಯಲಿಗೆ| 

Deer Hunting Expansion to Kerala

ಸೋಮರಡ್ಡಿ ಅಳವಂಡಿ

ಕೊಪ್ಪಳ(ಸೆ.09): ಜಿಲ್ಲೆಯಲ್ಲಿ ಜಿಂಕೆ ಬೇಟೆ ಅವ್ಯಾಹತವಾಗಿ ನಡೆಯುತ್ತಿರುವುದು ಮತ್ತೊಮ್ಮೆ ಬಯಲಾಗಿದ್ದು, ನಂಟು ಕೇರಳ ರಾಜ್ಯದವರೆಗೂ ವಿಸ್ತರಣೆಯಾಗಿರುವ ಅಂಶ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿನ ಜಿಂಕೆಯ ಬೇಟೆ ಕಬಂಧಬಾಹು ರಾಜ್ಯದಲ್ಲಿ ಅಷ್ಟೇ ಅಲ್ಲ, ನಾನಾ ರಾಜ್ಯದವರೆಗೂ ವಿಸ್ತರಣೆಯಾಗಿರುವುದು ಇದರಿಂದಲೇ ಗೊತ್ತಾಗುತ್ತದೆ.

ಸತತ ಒಂದೂವರೆ ವರ್ಷದ ಕಾರ್ಯಾಚರಣೆಯ ಫಲವಾಗಿ ಈಗ ಬರೋಬ್ಬರಿ 20 ಜಿಂಕೆ ಚರ್ಮ ಹಾಗೂ ಒಂದು ಜೀವಂತ ಜಿಂಕೆಯೊಂದಿಗೆ 7 ಬೇಟೆಗಾರರನ್ನು ಬಂಧಿಸಿ, ಮಂಗಳವಾರ ಜೈಲಿಗೆ ಅಟ್ಟಲಾಗಿದೆ. ಸೆ. 22ರ ವರೆಗೂ ಏಳು ಜನರು ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ.

Deer Hunting Expansion to Kerala

ಬಹುದೊಡ್ಡ ಕಾರ್ಯಾಚರಣೆ

ಮಂಗಳೂರು ಮತ್ತು ಬೆಂಗಳೂರು ಅರಣ್ಯ ಇಲಾಖೆಯ ಸ್ಕ್ವಾಡ್‌ ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ನಡೆಸಿದ ಕಾರ್ಯಾಚರಣೆ ಇದಾಗಿದೆ. 2018ರಲ್ಲಿ ಜಿಂಕೆ ಬೇಟೆ ಪ್ರಕರಣವೊಂದಕ್ಕೆ ಕೇಸ್‌ ದಾಖಲಾಗುತ್ತದೆ. ಇದನ್ನ ಅಷ್ಟಕ್ಕೆ ಕೈಬಿಡುವುದಿಲ್ಲ ಅರಣ್ಯ ಇಲಾಖೆಯ ಬೆಂಗಳೂರು ಮತ್ತು ಮಂಗಳೂರು ಸ್ಕ್ವಾಡ್‌. ಇದರಲ್ಲಿ ಬಂಧಿಯಾಗಿದ್ದವನ ಮೊಬೈಲ್‌ ಜಾಡು ಹಿಡಿಯುತ್ತಾರೆ. ಜಿಂಕೆಯ ಬೇಟೆಯ ಲಿಂಕ್‌ ಕೇರಳದಲ್ಲಿ ಇರುವುದು ಪತ್ತೆಯಾಗುತ್ತದೆ. ಕೊಪ್ಪಳದಲ್ಲಿನ ಜಿಂಕೆಯ ಚರ್ಮ ಮತ್ತು ಜಿಂಕೆಗಳು ಕೇರಳಕ್ಕೆ ರಾತ್ರೋರಾತ್ರಿ ರವಾನೆ ಮಾಡಲಾಗುತ್ತಿರುತ್ತದೆ. ಆರೋಪಿಯೋರ್ವನ ಮೊಬೈಲ್‌ ಜಾಡು ಬೆನ್ನು ಹತ್ತಿದಾಗ ಇದರ ಬೇರು ಕೇರಳದಲ್ಲಿರುವುದು ಗೊತ್ತಾಗುತ್ತಿದ್ದಂತೆ ಅಲ್ಲಿಂದ ಇಲ್ಲಿಗೆ ಲಿಂಕ್‌ ಪತ್ತೆ ಮಾಡುವ ಕಾರ್ಯ ನಡೆಯುತ್ತದೆ. ಈ ವೇಳೆಯಲ್ಲಿ ಈಗಾಗಲೇ ಸಿಕ್ಕಿದ್ದ ಜಾಡಿನಲ್ಲಿ ದೊರೆತಿದ್ದ ಮೊಬೈಲ್‌ ನಂಬರಗಳ ಬೆನ್ನುಹತ್ತಿದಾಗ ಜಿಂಕೆ ಬೇಟೆಯಾಡುತ್ತಿರುವ ಖಚಿತ ಮಾಹಿತಿ ದೊರೆಯುತ್ತದೆ.

ಕೊಪ್ಪಳದಲ್ಲಿ ಕೋವಿಡ್‌ ಮರಣ ಮೃದಂಗ: ಬೆಡ್‌ ಸಿಗದೆ ಸಾಲು ಸಾಲು ಸಾವು

ಮಾರುವೇಷದಲ್ಲಿ ಬೆಂಗಳೂರು ಮತ್ತು ಮಂಗಳೂರು ಅರಣ್ಯ ಇಲಾಖೆಯ ಸ್ಕಾ$್ವಡ್‌ ಕಾರ್ಯಾಚರಣೆಗೆ ಇಳಿಯುತ್ತದೆ. ಅವರಲ್ಲಿಯೇ ಕೆಲವರು ಜಿಂಕೆಯ ಚರ್ಮ ಖರೀದಿ ನಡೆಸುತ್ತಾರೆ. ಅಲ್ಲದೆ ನಮಗೆ ಒಂದು ಜಿಂಕೆ ಮರಿಯೂ ಬೇಕು ಎನ್ನುವ ಬೇಡಿಕೆಯನ್ನು ಇಡುತ್ತಾರೆ. ಅದರಲ್ಲಿ ಯಲಬುರ್ಗಾ ತಾಲೂಕಿನ ಹುಣಿಸಿಹಾಳ ಗ್ರಾಮದವರ ಜಿಂಕೆಯ ಚರ್ಮ ಮತ್ತು ಜಿಂಕೆ ಮರಿಯನ್ನು ತೆಗೆದುಕೊಂಡು ತಮ್ಮೂರಿನ ಹತ್ತಿರದ ಕ್ರಾಸ್‌ ಬಳಿ ಮಾರಾಟಕ್ಕೆ ಮುಂದಾಗುತ್ತಾರೆ. ಮೊದಲೇ ನಿಗದಿಯಾಗಿದ್ದರಿಂದ ಅವರು ಬರುತ್ತಾರೆ ಎಂದು ಕಾದು ಕುಳಿತಿರುವಾಗಲೇ ಆರೋಪಿಗಳನ್ನು ಚರ್ಮ ಸಮೇತ ಬಂಧಿಸಲಾಗಿದೆ. ಬಂಧಿತರನ್ನು ಈಗ ಮಂಗಳವಾರ ಜೈಲಿಗೆ ಅಟ್ಟಲಾಗಿದ್ದು, ಸೆ. 22ವರೆಗೂ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಆದೇಶ ಮಾಡಿದೆ.

ಡ್ರಗ್ಸ್‌ ಪಾರ್ಟಿ ನಂಟು

ಜಿಂಕೆ ಬೇಟೆಗೂ ಈಗ ಭಾರಿ ಸದ್ದು ಮಾಡುತ್ತಿರುವ ಡ್ರಗ್ಸ್‌ ನಂಟು ಇರುವ ಶಂಕೆ ವ್ಯಕ್ತಪಡಿಸಲಾಗಿದೆ. ಕೇರಳ ಮೂಲಕ ಜಿಂಕೆ ಚರ್ಮ ಮತ್ತು ಮಾಂಸ ದೊಡ್ಡ ದೊಡ್ಡ ಡ್ರಗ್ಸ್‌ ಪಾರ್ಟಿಗೆ ಹೋಗುತ್ತಿತ್ತು ಎನ್ನಲಾಗಿದೆ. ಸಿನಿಮಾ ನಟ, ನಟಿಯರು ಸೇರಿದಂತೆ ಖ್ಯಾತರು ಭಾಗವಹಿಸಿದ್ದ ಪಾರ್ಟಿಗಳಲ್ಲಿ ಬಳಕೆಯಾಗುತ್ತಿತ್ತು ಎನ್ನುವ ಗುಮಾನಿ ಇದ್ದು, ಇದು ತನಿಖೆಯಾಗಬೇಕು ಎನ್ನುವ ಮಾತು ಕೇಳಿಬರುತ್ತಿವೆ.

ಕೋವಿಡ್‌ ವರದಾನ

ಜಿಂಕೆ ಬೇಟೆಯಾಡುವುದಕ್ಕೆ ಮತ್ತು ಅದನ್ನು ಸಾಗಿಸುವುದಕ್ಕೆ ಕೋವಿಡ್‌ ಸಂಕಷ್ಟವರದಾನವಾಗಿತ್ತು ಎನ್ನಲಾಗಿದೆ. ಸಾಗಿಸುವ ವೇಳೆಯಲ್ಲಿ ಯಾವುದೇ ತಪಾಸಣೆ ನಡೆಯುತ್ತಿರಲಿಲ್ಲವಾದ್ದರಿಂದ ಇದನ್ನೇ ದಾಳ ಮಾಡಿಕೊಡು ಬೇಟೆಯಾಡಿದ್ದಾರೆ ಎನ್ನಲಾಗಿದೆ. ಇನ್ನು ಸ್ಥಳೀಯವಾಗಿ ಇಡೀ ಆಡಳಿತವೂ ಕೋವಿಡ್‌ ಎದುರಿಸುವುದರಲ್ಲಿ ಬ್ಯುಸಿಯಾಗಿದ್ದರಿಂದ ಬೇಟೆಯಾಡುವುದು ನಿರಾತಂಕವಾಗಿ ನಡೆಯುತ್ತಿತ್ತು ಎನ್ನಲಾಗಿದೆ.

ಮೂಲ ಶೋಧ

ಅರಣ್ಯ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇದರ ಮೂಲ ಶೋಧ ಕಾರ್ಯ ನಡೆಸಿದೆ. ಇದರ ಜಾಲ ಎಲ್ಲೆಲ್ಲಿ ಹಬ್ಬಿದೆ ಎನ್ನುವುದನ್ನು ಪತ್ತೆ ಮಾಡುವ ಕಾರ್ಯದಲ್ಲಿ ತೊಡಗಿದೆ. ಅರಣ್ಯ ಇಲಾಖೆಯ ಬೆಂಗಳೂರು ಮತ್ತು ಮಂಗಳೂರು ಸ್ಕ್ವಾಡ್‌ಗೆ ಕಾರ್ಯಾಚರಣೆಯ ವೇಳೆಯಲ್ಲಿ ಮಹತ್ತರ ಸುಳಿವು ಪತ್ತೆಯಾಗಿದ್ದು, ತನಿಖೆಯನ್ನು ನಡೆಸುತ್ತಿದೆ.

ಪ್ರಕರಣವನ್ನು ಭೇದಿ​ಸಿ ಈಗಷ್ಟೇ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ. ಇದರ ಮೂಲ ಎಲ್ಲಿಯದು? ಹೇಗೆ ನಡೆಯುತ್ತಿತ್ತು? ಎನ್ನುವುದನ್ನು ಪತ್ತೆ ಮಾಡಲಾಗುತ್ತಿದೆ ಎಂದು ಡಿಎಫ್‌ಒ ಹರ್ಷಭಾನು ಅವರು ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios