ಶಿರಸಿ: ಹಾಲು ಉತ್ಪಾದನೆ ಗಣನೀಯ ಇಳಿಕೆ: ಹೊರಗಿನಿಂದ ತರುವ ಸ್ಥಿತಿ ನಿರ್ಮಾಣ

ಜಿಲ್ಲೆಯಲ್ಲಿ ಎರಡು ತಿಂಗಳಿನಿಂದ ಹಾಲು ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಪರಿಣಾಮ ಹಾಲಿನ ಬೇಡಿಕೆ ಈಡೇರಿಕೆಗೆ ಧಾರವಾಡ ಹಾಲು ಒಕ್ಕೂಟದ ಹನುಮಂತಿ ಪ್ಯಾಕಿಂಗ್‌ ಘಟಕಕ್ಕೆ ನೆರೆಯ ಜಿಲ್ಲೆಗಳಿಂದ ಪ್ರತಿದಿನ 25 ಸಾವಿರ ಲೀ. ಹಾಲು ತರಿಸಿಕೊಳ್ಳುವ ದುಸ್ಥಿತಿ ನಿರ್ಮಾಣವಾಗಿದೆ.

 

Decreased milk production in sirasi at uttarakannada rav

ಮಂಜುನಾಥ ಸಾಯೀಮನೆ

 ಶಿರಸಿ (ಫೆ.12) :  ಜಿಲ್ಲೆಯಲ್ಲಿ ಎರಡು ತಿಂಗಳಿನಿಂದ ಹಾಲು ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಪರಿಣಾಮ ಹಾಲಿನ ಬೇಡಿಕೆ ಈಡೇರಿಕೆಗೆ ಧಾರವಾಡ ಹಾಲು ಒಕ್ಕೂಟದ ಹನುಮಂತಿ ಪ್ಯಾಕಿಂಗ್‌ ಘಟಕಕ್ಕೆ ನೆರೆಯ ಜಿಲ್ಲೆಗಳಿಂದ ಪ್ರತಿದಿನ 25 ಸಾವಿರ ಲೀ. ಹಾಲು ತರಿಸಿಕೊಳ್ಳುವ ದುಸ್ಥಿತಿ ನಿರ್ಮಾಣವಾಗಿದೆ.

ಕೆಎಂಎಫ್‌(KMP Dharwad)ನ ಧಾರವಾಡ ಒಕ್ಕೂಟ ವ್ಯಾಪ್ತಿಯಲ್ಲಿ ಜಿಲ್ಲೆಯ ಕೊಡುಗೆ ಪ್ರಮುಖ. ಜಿಲ್ಲೆಯ ಶಿರಸಿ, ಸಿದ್ದಾಪುರ, ಮುಂಡಗೋಡ, ಯಲ್ಲಾಪುರ ತಾಲೂಕಿನಲ್ಲಿ ಪ್ರತಿದಿನ 40 ಸಾವಿರ ಲೀ. ಹಾಲು ಉತ್ಪಾದನೆ ಆಗುತ್ತದೆ. ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಬೇಕು ಎಂಬ ಬೇಡಿಕೆ ಸಹ ಕೇಳಿಬಂದಿತ್ತು.

ಹಸುಗಳಿಗೆ ಬೊಬ್ಬೆ ರೋಗ, ಹೈನುಗಾರಿಕೆ ನಂಬಿರುವ ಕುಟುಂಬಗಳಿಗೆ ಪೆಟ್ಟು!

ತಾಲೂಕಿನ ಹನುಮಂತಿ(Hanumanti packing unit)ಯ ಬಳಿ ಧಾರವಾಡ ಹಾಲು ಒಕ್ಕೂಟ ಜಿಲ್ಲೆಯಲ್ಲಿ ಸಂಗ್ರಹಿಸಿದ ಹಾಲನ್ನು ಶೀಥಲೀಕರಣಗೊಳಿಸಿ ಟ್ಯಾಂಕರ್‌ ಮೂಲಕ ಧಾರವಾಡಕ್ಕೆ ಕಳಿಸಿಕೊಡುತ್ತಿತ್ತು. ಆದರೆ, ಜಿಲ್ಲೆಯ ಕರಾವಳಿ ಸೇರಿದಂತೆ ನಗರ ಪ್ರದೇಶದಲ್ಲಿ ಹಾಲಿನ ಬೇಡಿಕೆ ಗಣನೀಯವಾಗಿದೆ.

ಧಾರವಾಡ(Dharwad)ದಲ್ಲಿ ಪ್ಯಾಕಿಂಗ್‌ ಆದ ಹಾಲನ್ನು ಪುನಃ ಜಿಲ್ಲೆಗೆ ತಂದು ಮಾರಾಟ ಮಾಡಲಾಗುತ್ತಿತ್ತು. ಪ್ರತಿದಿನ 40,000 ಲೀ. ಹಾಲು ಮಾರಾಟ ಆಗುತ್ತಿತ್ತು. ಪ್ರತಿದಿನವೂ ಹನುಮಂತಿಯಲ್ಲಿ ಸಂಸ್ಕರಿಸಿ ಶೀಥಲೀಕರಣಗೊಳಿಸಿದ ಹಾಲನ್ನು ಧಾರವಾಡಕ್ಕೆ ಸಾಗಿಸುವುದು, ಅಲ್ಲಿ ಪ್ಯಾಕಿಂಗ್‌ ಆದ ಹಾಲನ್ನು ವಾಪಸ್‌ ತರುವ ಸಾಗಾಟ ವೆಚ್ಚ ಅಧಿಕವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಹನುಮಂತಿಯಲ್ಲೇ ಪಿಪಿಪಿ (ಪಬ್ಲಿಕ್‌ ಪ್ರೈವೇಟ್‌ ಪಾರ್ಚ್‌ನರ್‌ಶಿಪ್‌) ಯೋಜನೆಯಲ್ಲಿ ಪ್ಯಾಕಿಂಗ್‌ ಘಟಕ ಸ್ಥಾಪಿಸಲಾಗಿದೆ. ಸ್ಥಳೀಯವಾಗಿ ಪ್ಯಾಕಿಂಗ್‌ ಆರಂಭವಾದ ಬಳಿಕ ಜಿಲ್ಲೆಯಲ್ಲಿ ಹಾಲಿನ ಮಾರಾಟ ಸಹ ಏರಿಕೆಯಾಗಿ ಪ್ರತಿದಿನ 55ರಿಂದ 60 ಸಾವಿರ ಲೀ.ಗೆ ಏರಿದೆ. ಆದರೆ, ಹಾಲಿನ ಉತ್ಪಾದನೆ ಪ್ರತಿದಿನ 33 ಸಾವಿರ ಲೀ.ಗೆ ಕುಸಿದಿದೆ. ಹನುಮಂತಿ ಹಾಲು ಪ್ಯಾಕಿಂಗ್‌ ಘಟಕಕ್ಕೆ ಪ್ರತಿದಿನ 25ರಿಂದ 30,000 ಲೀ. ಹಾಲು ಕೊರತೆ ಆಗುತ್ತಿದ್ದು, ಧಾರವಾಡದಿಂದ ತರಿಸಿಕೊಳ್ಳಲಾಗುತ್ತಿದೆ.

ಹಾಲು ಕೊರತೆಗೆ ಕಾರಣವೇನು ?

ಪ್ರತಿವರ್ಷ ಜನವರಿ, ಫೆಬ್ರವರಿಯಲ್ಲಿ ಹವಾಮಾನದ ಕಾರಣ ಹಾಲಿನ ಉತ್ಪಾದನೆ ಕ್ಷೀಣಿಸುತ್ತದೆ. ಆದರೆ, ಈ ವರ್ಷದ ಲಂಪಿಸ್ಕಿನ್‌ ರೋಗ ಹಾಲು ಉತ್ಪಾದನೆ ಮೇಲೆ ಗಣನೀಯ ಪರಿಣಾಮ ಬೀರಿದೆ. ಹಾಲಿನ ಕೊರತೆಯು ಖಾಸಗಿಯವರು ಮತ್ತು ನಗರಕ್ಕೆ ನೇರ ಪೂರೈಕೆದಾರರಿಗೂ ಬಾಧಿಸಿದೆ. ಇದರಿಂದಾಗಿ ಅವರು ಧಾರವಾಡ ಒಕ್ಕೂಟಕ್ಕೆ ರೈತರು ನೀಡುತ್ತಿದ್ದ ಹಾಲನ್ನು ಜಾಸ್ತಿ ದರ ನೀಡಿ ಖರೀದಿಸುತ್ತಿದ್ದಾರೆ. ಇದರ ಪರಿಣಾಮ ಒಕ್ಕೂಟದ ಮೇಲೆ ಬೀರಿದೆ.

 

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಖುಷಿ ಹೆಚ್ಚಿಸಿದ ಸಾಧನೆ ಇದು; ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ನಂ.1

ಲಂಪಿಸ್ಕಿನ್‌ ರೋಗ ನಿಯಂತ್ರಣಕ್ಕೆ ಬರುತ್ತಿರುವುದರಿಂದ ಏಪ್ರಿಲ್‌ ವೇಳೆ 7-8 ಸಾವಿರ ಲೀ. ಉತ್ಪಾದನೆ ಜಾಸ್ತಿ ಆಗಬಹುದು. ಆದರೆ, ಅದು ಸಾಕಾಗದ ಹಿನ್ನೆಲೆ ಕೆಡಿಸಿಸಿ ಬ್ಯಾಂಕ್‌ನಿಂದ ಕಡಿಮೆ ಬಡ್ಡಿದರ ಸಾಲ ಒದಗಿಸಿ ಹೈನುಗಾರಿಕೆ ಉತ್ತೇಜಿಸಬೇಕಿದೆ. ಈ ಕುರಿತಂತೆ ಫೆ.16ಕ್ಕೆ ಹಾಲು ಉತ್ಪಾದಕ ಸಂಘಗಳ ಸಭೆ ಕರೆಯಲಾಗಿದೆ.

-ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ

ಸಂಘಗಳಿಗೆ ಪತ್ರ

ಹಾಲು ಉತ್ಪಾದನೆ ಕಡಿಮೆ ಆಗಿರುವ ಹಿನ್ನೆಲೆ ಜಿಲ್ಲೆಯ ಎಲ್ಲ ಹಾಲು ಉತ್ಪಾದಕ ಸಂಘಗಳಿಗೆ ಧಾರವಾಡ ಒಕ್ಕೂಟ ಪತ್ರ ಬರೆದಿದೆ. ಸ್ಥಳೀಯ ಬಳಕೆದಾರರು, ಮದುವೆ ಕಾರ್ಯಕ್ರಮ ಹೊರತಾಗಿ ಕೆಲ ಸಂಘಗಳು ಖಾಸಗಿ ವರ್ತಕರಿಗೂ ಹಾಲು ಮಾರುತ್ತಿರುವುದು ಗಮನಕ್ಕೆ ಬಂದಿದೆ. ಹೀಗೆ ಮಾರಾಟ ಮಾಡಿದಲ್ಲಿ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ಆಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Latest Videos
Follow Us:
Download App:
  • android
  • ios