ಶಿವಕುಮಾರ ಮುರಡಿಮಠ

ಧಾರ​ವಾ​ಡ(ಡಿ.05): ಆಧು​ನಿಕ ತಂತ್ರ​ಜ್ಞಾ​ನದ ಫಲ​ವಾಗಿ ವೈದ್ಯ​ಕೀಯ ಕ್ಷೇತ್ರದಲ್ಲಿ ಸಾಕಷ್ಟು ಬೆಳ​ವ​ಣಿ​ಗೆ​ಯಾ​ದರೂ ನವ​ಜಾತ ಶಿಶು​ಗಳ ಮರ​ಣ ಪೂರ್ತಿ ನಿಂತಿಲ್ಲ. ಆದರೆ, ಅವುಗಳ ಪ್ರಮಾಣದಲ್ಲಿ ಮಾತ್ರ ಇಳಿ​ಮು​ಖ​ವಾ​ಗಿದ್ದು ಸಂತೋ​ಷದ ಸಂಗತಿ.

ಅನೇಕ ಕಾರ​ಣ​ಗ​ಳಿಂದಾಗಿ ರಾಜ್ಯ​ದ ವಿವಿ​ಧೆಡೆ ನವ​ಜಾತ ಶಿಶು​ಗಳ ಸಾವಿನ ಸಂಖ್ಯೆ ಹೆಚ್ಚಿ​ದ್ದರೂ ಧಾರ​ವಾಡ ಜಿಲ್ಲೆ​ಯಲ್ಲಿ ಮಾತ್ರ ವರ್ಷ​ದಿಂದ ವರ್ಷಕ್ಕೆ ಸಾವಿನ ಸಂಖ್ಯೆ ಇಳಿ​ಮು​ಖ​ವಾ​ಗು​ತ್ತಿದೆ. ಇಲ್ಲಿನ ಸುಧಾರಿತ ವೈದ್ಯಕೀಯ ಚಿಕಿತ್ಸೆಗಳು ಮತ್ತು ನಿತ್ಯವೂ ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ಗರ್ಭಿಣಿಯರ ಮನೆ ಮನೆಗೆ ತೆರಳಿ ನಡೆಸಿದ ಉಪಚಾರದ ಪ್ರತಿಫಲವಾಗಿ ಐದು ವರ್ಷ​ಗಳ ಅವ​ಧಿ​ಯಲ್ಲಿ ಸಾವಿನ ಸಂಖ್ಯೆಯ ಪ್ರಮಾಣ ಅಪಾರ ಪ್ರಮಾ​ಣ​ದಲ್ಲಿ ತಗ್ಗಿರು​ವುದು ಆರೋಗ್ಯ ಇಲಾಖೆ ಅಂಕಿ-ಸಂಖ್ಯೆ​ಗ​ಳಿಂದ ಗೊತ್ತಾ​ಗು​ತ್ತದೆ.

ಮರಣ ತಗ್ಗಲು ಕಾರ​ಣ:

ರಾಷ್ಟ್ರೀಯ ಆರೋಗ್ಯ ಅಭಿ​ಯಾನ ಸೇರಿ​ದಂತೆ ಹಲವು ಉಪ​ಕ್ರ​ಮ​ಗಳ ಹಿನ್ನೆ​ಲೆ​ಯಲ್ಲಿ ಜಿಲ್ಲೆ​ಯಲ್ಲಿ ಕಳೆದ 5 ವರ್ಷಗಳ ಹಿಂದೆ 1036ಕ್ಕಿದ್ದ ಶಿಶುಗಳ ಸಾವಿನ ಸಂಖ್ಯೆ 2019ಕ್ಕೆ 295ಕ್ಕೆ ತಗ್ಗಿದೆ. ಜಿಲ್ಲೆಯಲ್ಲಿ ದಿನದ 24 ಗಂಟೆ ಸೇವೆ ನೀಡುವ 57 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಜಿಲ್ಲಾಸ್ಪತ್ರೆಯಲ್ಲಿ ಮತ್ತು ಹುಬ್ಬಳ್ಳಿಯ ಕಿಮ್ಸ್‌ ನಲ್ಲಿ ತಲಾ ಒಂದರಂತೆ ನವಜಾತ ಶಿಶುವಿನ ತುರ್ತು ಆರೋಗ್ಯ ನಿಯಂತ್ರಣ ಘಟಕ ಕೂಡ ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲಾ ಆಸ್ಪತ್ರೆಯಲ್ಲಿ ಅತ್ಯಾ​ಧು​ನಿಕ ಸೌಲ​ಭ್ಯ​ವು​ಳ್ಳ ರೋಗಗ್ರಸ್ತ ನವಜಾತ ಶಿಶುವಿನ ಚಿಕಿತ್ಸಾ ಘಟಕ ಕೂಡ ಕಾರ್ಯ ನಿರ್ವಹಿಸುತ್ತಿದೆ. ಹೆರಿಗೆಯಾದ ಬಳಿಕ ತಾಯಿ ಮತ್ತು ಮಗುವಿಗೆ ನಂಜು ಆಗುವುದನ್ನು ತಡೆಗಟ್ಟುವ ಉದ್ದೇಶದಿಂದ ಆಸ್ಪತ್ರೆಯಿಂದ ತಾಯಂದಿರನ್ನು ಮನೆಗೆ ಹಿಂತಿರುಗಿಸುವ ‘ನಗು ಮಗು’ ಯೋಜನೆಯಡಿ ಉತ್ತಮ ಸೇವೆ ಒದಗಿಸಲಾಗುತ್ತಿದೆ. ಬೇಡ​ವಾದ ನವ​ಜಾತ ಶಿಶು​ಗ​ಳನ್ನು ಎಲ್ಲೆಂದ​ರಲ್ಲಿ ಎಸೆ​ಯುವ ಬದಲು ಜಿಲ್ಲಾ​ಸ್ಪತ್ರೆ, ಕಿಮ್ಸ್‌​ನಲ್ಲಿ ಮಮತೆ ತೊಟ್ಟಿಲು ಸಹ ಇಡ​ಲಾ​ಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಮತ್ತು ಗರ್ಭಿಣಿಯೊಂದಿಗೆ ಸಂಪರ್ಕ ಸೇತುವೆಯಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲ ಅಂಶಗಳ ಫಲವಾಗಿ ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿ​ಕಾ​ರಿ​ಗಳು ಮಾಹಿತಿ ನೀಡಿದ​ರು.

ಶೇ. 50 ರಷ್ಟು ಹೊರ ಜಿಲ್ಲೆಯ ಹರಿ​ಗೆ:

ಧಾರವಾಡ ಸಾಹಿತ್ಯ, ಸಾಂಸ್ಕೃ​ತೀಕ, ಸಂಗೀತದ ದೃಷ್ಟಿಕೋನದಿಂದ ಶ್ರೀಮಂತವಾಗಿದ್ದ ಜಿಲ್ಲೆ. ಈಗ ವೈದ್ಯಕೀಯ ಕ್ಷೇತ್ರದಲ್ಲಿಯೂ ತನ್ನದೇ ಆದ ಚಾಪು ಮೂಡಿಸುತ್ತಿದೆ ಎನ್ನುಲು ಶಿಶು​ಮ​ರ​ಣದ ಇಳಿ​ಮುಖ ಸಂಗ​ತಿಯ ಕಾರಣ ಎನ್ನ​ಬ​ಹುದು. ಸುಧಾರಿತ ತಂತ್ರಜ್ಞಾನದ ಬಳಕೆಯಿಂದ ಶಿಶು​ಗಳ ಸಾವಿನ ವಾತಾವರಣ ಬದಲಾಗಿದ್ದು ವೈದ್ಯಕೀಯ ಕ್ಷೇತ್ರಗಳಲ್ಲಿ ಸಾಕಷ್ಟು ಸುಧಾರಣೆ ಕಂಡುಕೊಂಡ ಪರಿಣಾಮ ಮಧ್ಯಮ ಮತ್ತು ಶ್ರೀಮಂತ ವರ್ಗದ ಹೊರ ಜಿಲ್ಲೆಯ ಗರ್ಭಿಣಿಯರಿಗೂ ಸಹ ಧಾರವಾಡ ಹೆರಿಗೆಗೆ ಅತಿ ಪ್ರೀತಿಯ ಸ್ಥಳವಾಗಿದೆ. ಅಂದಾಜು ಶೇ. 50 ರಷ್ಟು ಹೊರ ಜಿಲ್ಲೆ​ಗ​ಳಿಂದ ಧಾರ​ವಾ​ಡ ಜಿಲ್ಲೆಗೆ ಹೆರಿ​ಗೆಗೆ ಆಗ​ಮಿ​ಸು​ವುದು ವಿಶೇಷವೇ ಸರಿ.

ಆಶಾ ಕಾರ್ಯಕರ್ತೆಯರ ಉಪಚಾರ:

ಗರ್ಭಾವಸ್ಥೆಯಿಂದ ಪ್ರಾರಂಭವಾಗುವ ಆಶಾ ಕಾರ್ಯಕರ್ತೆಯರ ಕೆಲಸ ಹೆರಿಗೆಯ ನಂತರದಲ್ಲಿ 7 ಬಾರಿ ಭೇಟಿ ನೀಡುವ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯದ ಕಾಳಜಿ ವಹಿಸಲಾಗುತ್ತಿದೆ. ಅಲ್ಲದೇ, ಗರ್ಭಿ​ಣಿ​ಯ​ರಿಗೆ ಸಮತೋಲನ ಹಾಗೂ ಪೌಷ್ಟಿಕ ಆಹಾರವನ್ನು ಅಂಗ​ನ​ವಾ​ಡಿಯ ಮೂಲಕ ನೀಡಲಾಗುತ್ತಿದೆ. ಆಹಾರದೊಂದಿಗೆ ಹೆಚ್ಚುವರಿ ಶಕ್ತಿಯುತ ಆಹಾರ ನೀಡಿಕೆ, ಕಬ್ಬಿಣಾಂಶ, ಫೋಲಿಕ್‌ ಆ್ಯಸಿಡ್‌ ಅಂಶಗಳನ್ನು ಒಳಗೊಂಡ ಮಾತ್ರೆಗಳನ್ನು ನೀಡಲಾಗುತ್ತಿದೆ. ಇದ​ರಿಂದ ಮಕ್ಕಳು ಪೌಷ್ಟಿ​ಕ​ವಾ​ಗಿಯೇ ಜನಿ​ಸು​ತ್ತವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲಾಸ್ಪತ್ರೆ ಸೇರಿ​ದಂತೆ ಎಲ್ಲ ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗರ್ಭಿಣಿಯರ ಹೆರಿಗೆಗೆ ಮೊದಲು ಹಾಗೂ ನಂತರದ ದಿನಗಳಲ್ಲಿ ಉತ್ತಮ ಆರೋಗ್ಯ ಸೇವೆ ನೀಡಲಾಗುತ್ತಿದೆ. ದಿನ ಕಳೆದಂತೆ ಜನರಲ್ಲಿ ಆರೋಗ್ಯ ಕುರಿತ ಜಾಗೃತಿ ಮೂಡಿದ್ದು ಮೊದಲಿನ ಹಾಗೆ ಮನೆಗಳಲ್ಲಿ ಹೆರಿಗೆಗಳು ತೀರಾ ಕಡಿಮೆ. ಇದ​ರಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ನಿಗಾ​ ವ​ಹಿ​ಸ​ಲಾ​ಗು​ತ್ತಿದೆ. ಈ ಕಾರಣದಿಂದ ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ಧಾರ​ವಾಡದ ಆರೋ​ಗ್ಯಾ​ಧಿ​ಕಾರಿ ಡಾ. ಎಸ್‌.ಎಂ. ಹೊನಕೇರಿ ಅವರು ಹೇಳಿದ್ದಾರೆ. 

ಕೂಸು ಅಸು​ನೀ​ಗಲು ಕಾರ​ಣ​ಗ​ಳಿವು:

ಜನನದ ನಂತರದಲ್ಲಿ ಶಿಶುವಿನಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ನ್ಯೂನ್ಯತೆಗಳು ಪ್ರಾಣಾಂತಿಕವೂ ಆಗಬಲ್ಲವು. ಜೊತೆಗೆ ಸಾಂಕ್ರಾ​ಮಿಕ ರೋಗ ಅಪೌ​ಷ್ಟಿ​ಕ​ತೆಯೂ ಪ್ರಮುಖ ಕಾರ​ಣ​ಗ​ಳಲ್ಲಿ ಒಂದು. ಜನನ ಸಂದರ್ಭದಲ್ಲಿ ಕಡಿಮೆ ತೂಕ, ಅವಧಿಪೂರ್ವ ಜನನ, ಉಸಿರಾಟದ ತೊಂದರೆ, ಹೃದಯಕ್ಕೆ ಸಂಬಂಧಿಸಿದ ರೋಗ ಸೇರಿದಂತೆ ಹಲವಾರು ಕಾರಣಗಳಿಂದ ನವಜಾತ ಶಿಶುಗಳು ಅಸುನೀಗು​ತ್ತದೆ. ಆದ್ದ​ರಿಂದ ಈ ಕುರಿತು ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ.

ಕಳೆದ 5 ವರ್ಷ​ಗ​ಳಲ್ಲಿ ಧಾರ​ವಾಡ ಜಿಲ್ಲೆ​ಯಲ್ಲಿ ಮೃತ​ಪಟ್ಟಶಿಶು​ಗಳ ಸಂಖ್ಯೆ

ವರ್ಷ ಧಾರ​ವಾ​ಡ ​ಹೊರ ಜಿಲ್ಲೆ ​ಒಟ್ಟು

2014-15 657 379 1036
2015-16 587 296 833
2016-17 456 226 682
2017-18 423 227 700
2018-19 374 183 557
2019-20 194 101 295 (ಅಕ್ಟೋ​ಬರ ವರೆ​ಗೆ)