ಬೆಂಗಳೂರು(ನ.08): ಹೊರರಾಜ್ಯ ಹಾಗೂ ವಿದೇಶಗಳಿಂದ ಪೂರೈಕೆ ಆರಂಭವಾದ ಬೆನ್ನಲ್ಲೇ ಶತಕ ದಾಟಿದ್ದ ಈರುಳ್ಳಿ ದರ, ಸಗಟು ಮಾರುಕಟ್ಟೆಯಲ್ಲಿ ಇಳಿದಿದೆ. ಗುಣಮಟ್ಟದ ಈರುಳ್ಳಿ ಕೆ.ಜಿ. 60-70 ರು. ಇದ್ದದ್ದು, ಇದೀಗ 40-50 ರು.ಗೆ ಖರೀದಿಯಾಗುತ್ತಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಲವು ವ್ಯಾಪಾರಿಗಳು ಕೆ.ಜಿ. 60ರಿಂದ 80 ರು.ವರೆಗೆ ಮಾರಾಟ ಮಾಡುತ್ತಿದ್ದಾರೆ.

ಕೆಲವು ದಿನಗಳಿಂದ ಈರುಳ್ಳಿ ಬೆಲೆಯಲ್ಲಿ ಏರಿಳಿತವಾಗುತ್ತಾ ಬಂದಿದೆ. ಪ್ರಸ್ತುತ ಸಗಟು ದರದಲ್ಲಿ ಅತ್ಯುತ್ತಮ ಈರುಳ್ಳಿ ಕೆ.ಜಿ. 40-50 ರು., ಎರಡು ಮತ್ತು ಮೂರನೇ ದರ್ಜೆ ಈರುಳ್ಳಿ ಕೆ.ಜಿ. 20ರಿಂದ 40 ರು.ವರೆಗೆ ಇದೆ. ಈ ಹಿಂದೆ ದ್ವಿತೀಯ ದರ್ಜೆ ಈರುಳ್ಳಿ ಕೆ.ಜಿ. 50-60 ರು., ಸಾಧಾರಣ ಕೆ.ಜಿ. 40-50 ರು. ನಿಗದಿಯಾಗಿತ್ತು. ಆದರೆ, ಚಿಲ್ಲರೆ ವ್ಯಾಪಾರಿಗಳು ಮಾತ್ರ ದರ ಇಳಿಸಿರಲಿಲ್ಲ. ಕೆಲವು ಮಾರುಕಟ್ಟೆಗಳಲ್ಲಿ ಕೆ.ಜಿ. 40ರಿಂದ 110 ರು.ವರೆಗೆ ಮಾರಾಟವಾಗುತ್ತಿತ್ತು. ಇದೀಗ ಸಗಟು ದರ ಇಳಿದಿರುವುದರಿಂದ ಗ್ರಾಹಕರು ಸಹ ಅಧಿಕ ಬೆಲೆ ನೀಡಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕೆಲವೆಡೆ ಚಿಲ್ಲರೆ ಮಾರಾಟಗಾರರು ಕೂಡ ದರ ಕಡಿತಗೊಳಿಸಿದ್ದಾರೆ. ಆದರೆ, ಈ ಮಾರಾಟಗಾರರು ಮೂರನೇ ದರ್ಜೆಯ ಈರುಳ್ಳಿಯನ್ನು ಕೆ.ಜಿ. 60-70 ರು ನಂತೆ ಮಾರಾಟ ಮಾಡುತ್ತಿದ್ದಾರೆ. ಗಾತ್ರದಲ್ಲಿ ಸ್ವಲ್ಪ ದಪ್ಪವಿರುವ ಈರುಳ್ಳಿಯನ್ನು ಕೆಲ ವ್ಯಾಪಾರಿಗಳು ಕೆ.ಜಿ. 80 ರು.ಗೆ ಮಾರುತ್ತಿದ್ದಾರೆ.

'ಬೆಲೆ ಏರಿಕೆ ಬಿಸಿ : ಪಡಿತರ ಚೀಟಿಯಲ್ಲಿ ಕಡಿಮೆ ದರದಲ್ಲಿ ಈರುಳ್ಳಿ'

ಹಾಪ್‌ಕಾಮ್ಸ್‌ನಲ್ಲಿ ದುಬಾರಿ ಬೆಲೆ!:

ಯಶವಂತಪುರ ಎಪಿಎಂಸಿಯ ಸಗಟು ದರದಲ್ಲಿ ಅತ್ಯುತ್ತಮ ಈರುಳ್ಳಿ ಕೆ.ಜಿ.ಗೆ 40-50 ರು. ಇದೆ. ಆದರೆ, ಹಾಪ್‌ ಕಾಮ್ಸ್‌ನಲ್ಲಿ ಎರಡನೇ ದರ್ಜೆ ಈರುಳ್ಳಿಯನ್ನೇ ಕೆ.ಜಿ. 92 ರು.ಗೆ ಮಾರಾಟ ಮಾಡಲಾಗುತ್ತಿದೆ. ಇದು ಗ್ರಾಹಕರಿಗೆ ಹೊಡೆತ ನೀಡಿದೆ. ಮಾರುಕಟ್ಟೆಯಲ್ಲಿ ದರ ಇಳಿಕೆಯಾದರೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೂ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಗ್ರಾಹಕರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಇತರೆ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆ ಇದ್ದರೂ ಹಾಪ್‌ಕಾಮ್ಸ್‌ನಲ್ಲಿ ಅಧಿಕ ದರಕ್ಕೆ ಖರೀದಿಸುವ ಅನಿವಾರ್ಯತೆಗೆ ಗ್ರಾಹಕರು ಸಿಲುಕಿದ್ದಾರೆ.

ಸದ್ಯ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗುತ್ತಿದೆ. ಶನಿವಾರ ಎಪಿಎಂಸಿಗೆ 140 ಟ್ರಕ್‌ ಈರುಳ್ಳಿ ಬಂದಿದೆ. ಜತೆಗೆ ಈಜಿಪ್ಟ್‌, ಇರಾನ್‌ ದೇಶದಿಂದಲೂ 10 ಟ್ರಕ್‌ ಬಂದಿದೆ. ಕರ್ನಾಟಕದ ಕೆಲವು ಭಾಗಗಳಿಂದ ಹೊಸ ಈರುಳ್ಳಿಯೂ ಬರುತ್ತಿದೆ. ಹೀಗಾಗಿ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ಯಶವಂತಪುರ ಎಪಿಎಂಸಿ ವರ್ತಕ ಉದಯ್‌ ಶಂಕರ್‌ ತಿಳಿಸಿದ್ದಾರೆ.