ಯಾದಗಿರಿ(ಏ.26): ಕೊರೋನಾ ಆತಂಕದ ಮಧ್ಯೆ, ಇದೀಗ ವಿಚಿತ್ರ ರೋಗಗಳಿಗೆ ಜಾನುವಾರುಗಳ ಸಾವಿಗೀಡಾಗುತ್ತಿರುವುದು ರೈತರ ಆಘಾತಕ್ಕೆ ಕಾರಣವಾಗಿದೆ. ಬೆಳಗ್ಗೆ ಏಕಾಏಕಿ ಸುಸ್ತಾಗುವ ಜಾನುವಾರುಗಳು, ಸಂಜೆಯಾಗುತ್ತಲೇ ನರಳಾಡಿ ಸಾಯುತ್ತಿರುವುದು ಜಾನುವಾರುಗಳ ಪಾಲಕರಲ್ಲಿ ಆತಂಕ ಸೃಷ್ಟಿಸಿದೆ.

ಜಿಲ್ಲೆಯ ಸೈದಾಪೂರ ಸಮೀಪದ ನಾಗಲಾಪೂರದಲ್ಲಿ ಇಂತಹ ಪ್ರಕರಣಗಳು ಜನರ ನಿದ್ದೆಗೆಡಿಸಿವೆ. ಮೊದಲೇ ಸಂಕಷ್ಟದಲ್ಲಿರುವ ರೈತನಿಗೆ ಜಾನುವಾರುಗಳ ಸಾವು ಮತ್ತಷ್ಟೂ ಅಧೀರರನ್ನಾಗಿಸಿದೆ. ಇಲ್ಲಿಯ ನರಸಪ್ಪ ಎನ್ನುವವರ ಕರು ಸೇರಿದಂತೆ ನಾಲ್ಕು ಜಾನುವಾರುಗಳು ವಾರೊಪ್ಪತ್ತಿನಲ್ಲಿ ಕೊನೆಯುಸಿರೆಳೆದಿವೆ. ಅಲ್ಲಿನ ಮತ್ತೊಬ್ಬರ ಜಾನುವಾರು ಸಹ ಇದೇ ರೀತಿಯಾಗಿ ಸಾವನ್ನಪ್ಪಿ, ಗ್ರಾಮದ ಕೆಲವರ ಜಾನುವಾರುಗಳಲ್ಲಿ ಸುಸ್ತು ಕಾಣಿಸಿಕೊಳ್ಳುತ್ತಿದೆ ಎನ್ನಲಾಗಿದೆ.

ಕೊರೋನಾ ಭೀತಿ: ಹೂತಿದ್ದ ಬಾಲಕಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

ಈ ಘಟನೆ ಚಿಕಿತ್ಸೆಗೆಂದು ಬಂದ ಪಶು ಇಲಾಖೆ ಸಿಬ್ಬಂದಿಗಳಿಗೂ ಅಚ್ಚರಿ ಮೂಡಿಸಿದ್ದು, ತಾಲೂಕು ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದಾರೆ. ಎರಡು ನರಸಪ್ಪನವರ ಎರಡು ಆಕಳುಗಳು, ಒಂದು ಹೋರಿ ಹಾಗೂ ಕರು ವಿಚಿತ್ರ ರೋಗಕ್ಕೆ ಬಲಿಯಾಗಿವೆ. ಸದ್ಯ, ಇನ್ನೆರಡು ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಯಾದಗಿರಿ ಸಮೀಪದ ಹತ್ತಿಕುಣಿ ಭಾಗದಲ್ಲಿ ಕೆಲವು ದಿನಗಳ ಹಿಂದೆ ಜಾನುವಾರುಗಳಿಗೆ ಇಂತಹ ರೋಗ ಕಾಣಿಸಿಕೊಂಡಿತ್ತು. ಚಿಕಿತ್ಸೆ ನೀಡಿದ ನಂತರ ಗುಣಮುಖವಾಗಿವೆ. ನಮ್ಮ ಪಶು ಇಲಾಖೆ ವೈದ್ಯರ ತಂಡ ಭೇಟಿ ನೀಡಿ ಬಂದಿದ್ದಾರೆ. ಕಲುಷಿತ ನೀರು ಸೇವನೆ ಹಾಗೂ ಹೀಟ್‌ ಸ್ಟ್ರೋಕ್‌ನಿಂದಾಗಿ ಹೀಗೆ ಆಗಿರಬಹುದು. ಸಾಮಾನ್ಯವಾಗಿ ಕರುಗಳನ್ನು ಮೇಯಲು ಬಿಟ್ಟಾಗ ಹೀಗಾಗಿದೆ, ಎರಡು ಕರುಗಳು ಹೀಗೆ ಮೃತಪಟ್ಟಿಗೆ ಎಂಬುದಾಗಿ ತಿಳಿದು ಬಂದಿದೆ. ಇಲಾಖೆಯ ಸಿಬ್ಬಂದಿಗಳು ಈ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಮಾಹಿತಿ ಪಡೆಯುತ್ತಿದ್ದಾರೆ ಎಂದು ಯಾದಗಿರಿ  ಪಶು ಇಲಾಖೆ ಉಪ ನಿರ್ದೇಶಕ ಡಾ.ಶರಣಭೂಪಾಲರೆಡ್ಡಿ ಅವರು ಹೇಳಿದ್ದಾರೆ. 

ಎಂಟೇ ದಿನಗಳಲ್ಲಿ ನಮ್ಮ ನಾಲ್ಕು ಜಾನುವಾರುಗಳು ವಿಚಿತ್ರ ರೋಗದಿಂದ ಸಾವನ್ನಪ್ಪಿವೆ. ಪಶು ಇಲಾಖೆಯ ಸಿಬ್ಬಂದಿಗಳೂ ಸಹ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈಗ ಇನ್ನೆರಡು ಜಾನುವಾರುಗಳಿಗೆ ಸಲೈನ್‌ ಹಚ್ಚಿದ್ದಾರೆ. ಇದು ನಮಗೆ ಆತಂಕ ಮೂಡಿಸಿದೆ ಎಂದು ನಾಗಲಾಪೂರ ಗ್ರಾಮಸ್ಥ ಸಾಬಯ್ಯ ಅವರು ಹೇಳಿದ್ದಾರೆ.