ಬೆಂಗಳೂರು:  ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರದಂತಹ ವಿಚಾರಗಳೇ ನಿತ್ಯ ವಿಷಯವಾಗಿರುವ ಪೊಲೀಸ್ ಠಾಣೆಗಳಲ್ಲಿ ಇನ್ನು ಮುಂದೆ ಕಥೆ, ಸಾಹಿತ್ಯ, ಕಾದಂಬರಿಯ ಕಂಪು ಕೂಡ ಇರಲಿದೆ.

ಪೊಲೀಸರಲ್ಲಿ ಜ್ಞಾನರ್ಜನೆ, ಒತ್ತಡ ನಿವಾರಣೆ, ಮಾನ ಸಿಕ ಶಾಂತಿ ವಾತಾವರಣ ನಿರ್ಮಾಣ ಮಾಡುವ ಸಲುವಾಗಿ ದಕ್ಷಿಣ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಡಿಸಿಪಿ ಕೆ.ಅಣ್ಣಾಮಲೈ ಅವರು ‘ಗ್ರಂಥಾಲಯ’ವನ್ನು ತೆರೆದಿದ್ದಾರೆ. ದಕ್ಷಿಣ ವಿಭಾಗದ ಬಸವನಗುಡಿ, ಜಯನಗರ, ಜೆ.ಪಿ. ನಗರ, ಸಿದ್ದಾಪುರ, ಬನಶಂಕರಿ, ವಿ.ವಿ.ಪುರಂ, ಹನುಮಂತನಗರ, ಗಿರಿನಗರ, ಸಿ.ಕೆ.ಅಚ್ಚುಕಟ್ಟು ಠಾಣೆ ಸೇರಿದಂತೆ ಮೊದಲ ಹಂತದಲ್ಲಿ ದಕ್ಷಿಣ ವಿಭಾಗದ 17  ಠಾಣೆಗಳಲ್ಲಿ ಗ್ರಂಥಾಲಯ ತೆಗೆಯಲಾಗಿದೆ. ಆಯಾ ಠಾಣಾ ವ್ಯಾಪ್ತಿಗಳಲ್ಲಿನ ಪ್ರಮುಖರನ್ನು ಕರೆಯಿಸಿ ಠಾಣೆ ಗ್ರಂಥಾಲಯ ಉದ್ಘಾಟಿಸಲಾಗಿದೆ.

ಯಾವೆಲ್ಲಾ ಪುಸ್ತಕ ಇರಲಿದೆ!: ಕುವೆಂಪು, ಎಸ್.ಎಸ್. ಭೈರಪ್ಪ, ಯು.ಆರ್.ಅನಂತಮೂರ್ತಿ ಸೇರಿದಂತೆ ಹಲವು ಖ್ಯಾತನಾಮರ ಸಾಹಿತ್ಯ ಪುಸ್ತಕಗಳು ಹಾಗೂ ಕಾನೂನು, ಆಧ್ಯಾತ್ಮಕ ಪುಸ್ತಕ, ಜೀವನ ಸಾಧಕರ ಕುರಿತ ಪುಸ್ತಕ ಅದರಲ್ಲೂ ಮುಖ್ಯವಾಗಿ ಮನಃ ಪರಿವರ್ತನೆಯಂತಹ ಪುಸ್ತಕಗಳು ಇರಲಿವೆ. ಈ ಪುಸ್ತಕಗಳನ್ನಿಡಲು ಪ್ರತ್ಯೇಕವಾದ ಕಾಬೋರ್ಡ್ ವ್ಯವಸ್ಥೆ ಮಾಡಲಾಗಿದ್ದು, ಸಿಬ್ಬಂದಿ ಓದಲು ಟೇಬಲ್ ಹಾಗೂ 4 ಕುರ್ಚಿ ವ್ಯವಸ್ಥೆ ಇದೆ. ಠಾಣೆಯಲ್ಲಿರುವ ಸ್ಥಳವಕಾಶವನ್ನು ಬಳಸಿಕೊಂಡು ಗ್ರಂಥಾಲಯಕ್ಕೆ ಅವಕಾಶ ಮಾಡಿಕೊಡಲಾಗಿದೆ. ಡಿಸಿಪಿ ಅಣ್ಣಾಮಲೈ ಅವರು ತಾವೇ ಪ್ರತಿ ಠಾಣೆಗೂ ಇಪ್ಪತ್ತು ಪುಸ್ತಕಗಳನ್ನು ಕೊಡಿಸಿದ್ದಾರೆ. 

ಇನ್ನು ಪುಸ್ತಕಗಳನ್ನು ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೊಡುಗೆಯಾಗಿ ಪೊಲೀಸ್ ಠಾಣೆಯ ಗ್ರಂಥಾಲಯಕ್ಕೆ ನೀಡಲು ಅವಕಾಶ ಕಲ್ಪಿಸಲಾಗಿದೆ. ನಿತ್ಯ ಪೊಲೀಸರು ಕೊಲೆ, ಸುಲಿಗೆ ಅಪರಾಧ ಕೃತ್ಯಗಳಂತಹ ಪ್ರಕರಣ ಬೇಧಿಸುವುದರಲ್ಲೇ ತೊಡಗಿಸಿಕೊಂಡಿರು ತ್ತಾರೆ. ತಮ್ಮ ಕುಟುಂಬ, ಜೀವನ ಹೊರತುಪಡಿಸಿ ಸಮಾಜದ ರಕ್ಷಣೆಯಲ್ಲಿಯೇ ಇರುತ್ತಾರೆ. ಠಾಣೆಗಳಲ್ಲಿ ಬಿಡುವಿನ ವೇಳೆ ಸಿಬ್ಬಂದಿ ಪುಸ್ತಕಗಳ ಬಗ್ಗೆ ಕಣ್ಣು ಹಾಯಿಸುವುದರಿಂದ ಜ್ಞಾನರ್ಜನೆ ಜತೆಗೆ ಶಾಂತಿ ಸಿಗಲಿದೆ. ಪ್ರತಿ ಬಾರಿ ಪೊಲೀಸ್ ಠಾಣೆಗಳ ತಪಾಸಣೆಗೆ ತೆರಳಿ ಅಲ್ಲಿನ ಸಿಬ್ಬಂದಿಯನ್ನು ಮಾತ ನಾಡಿಸುವಾಗ ಒಂದು ರೀತಿಯ ಒತ್ತಡ ಕಾಣುತ್ತಿತ್ತು. 

ತಮ್ಮ ಪೊಲೀಸ್ ಸಿಬ್ಬಂದಿಯ ಜೀವನ ಶೈಲಿ ಬಗ್ಗೆ ವಿಚಾರಿಸುತ್ತಿದ್ದೆ. ಕೆಲವರನ್ನು ಏಕೆ ನೀವು ಪುಸ್ತಕ ಓದುವುದಿಲ್ಲ ಎಂದು ಪ್ರಶ್ನಿಸಿದಾಗ ಅಷ್ಟು ಹಣ ಕೊಟ್ಟು ಪುಸ್ತಕ ಖರೀದಿಸುವುದು ಹೇಗೆ ಎನ್ನುತ್ತಿದ್ದರು. ಹೀಗಾಗಿ ತಮ್ಮ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಗ್ರಂಥಾ ಲಯ ತೆಗೆಯುವ ಅಲೋಚನೆ ಮಾಡಿದೆ ಎನ್ನುತ್ತಾರೆ ಡಿಸಿಪಿ ಅಣ್ಣಾಮಲೈ. 

ಮೆಚ್ಚುಗೆಯ ಮಹಾಪೂರ: ಇನ್ನು ಡಿಸಿಪಿ ಅಣ್ಣಾಮಲೈ ಅವರ ಗ್ರಂಥಾಲಯ ತೆರೆದ ನಿರ್ಧಾರಕ್ಕೆ ಸಾಮಾಜಿಕ ಜಾಲ ತಾಣದಿಂದ ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕ ರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಎಡಿಜಿಪಿ ಭಾಸ್ಕರ್ ರಾವ್ ಅವರು, ನಿಮಗೆ ಗ್ರಂಥಾಲಯ ಇಲಾಖೆಯಿಂದ ದೊಡ್ಡ ಮಟ್ಟದ ಪುಸ್ತಕಗಳು ದೊರೆಯಲಿವೆ ಎಂದು ಹೇಳಿದ್ದಾರೆ.