ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಮುಗಿಸುವ ಸಂಕಲ್ಪ: ಕಾರಜೋಳ
ಬುರಾಣಪೂರದ ಬಳಿ ವಿಮಾನ ನಿಲ್ದಾಣಕ್ಕಾಗಿ 727 ಎಕರೆ ಭೂಪ್ರದೇಶ ಸ್ವಾಧೀನ| 221 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಕಾಮಗಾರಿ| ಏರ್‌ಪೋರ್ಟ್ ನಿರ್ಮಾಣ ಸೇರಿದಂತೆ ಮುಂತಾದ ಕಾರ್ಯಗಳನ್ನು ರಾಜ್ಯ ಸರ್ಕಾರ ಹಾಗೂ ಏರ್‌ಪೋರ್ಟ್‌ಗೆ ಬೇಕಾದ ಎಲ್ಲ ಯಂತ್ರ ಮೊದಲಾದ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ತನ್ನ ಅನುದಾನದಲ್ಲಿ ಒದಗಿಸಲಿದೆ|
ವಿಜಯಪುರ(ಡಿ.26): ಕಳೆದ 2009ರಲ್ಲಿ ಬಿ.ಎಸ್. ಯಡಿಯೂರಪ್ಪ ಆಡಳಿತದಲ್ಲಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಲಾಗಿತ್ತು. ಆದರೆ ಈ ಕಾಮಗಾರಿ ಆರಂಭಿಸಲು ನಂತರ ಅಸ್ತಿತ್ವಕ್ಕೆ ಬಂದ ಸರ್ಕಾರಗಳು ಇಚ್ಛಾಶಕ್ತಿ ತೋರದ ಕಾರಣ ಈಗ ಈ ಪ್ರಕ್ರಿಯೆಗೆ ಮರುಜೀವ ನೀಡಲಾಗಿದ್ದು, ಶೀಘ್ರವೇ ಈ ಕಾಮಗಾರಿ ಪೂರ್ಣಗೊಳಿಸುವ ಸಂಕಲ್ಪ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭರವಸೆ ನೀಡಿದ್ದಾರೆ.
ನಗರದ ಹೊರವಲಯದ ನಿಯೋಜಿತ ಬುರಾಣಪೂರದ ಬಳಿ ವಿಮಾನ ನಿಲ್ದಾಣ ಸ್ಥಳಕ್ಕೆ ಬುಧವಾರ ಆಗಮಿಸಿ ಸ್ಥಳ ಪರಿಶೀಲಿಸಿದ ನಂತರ ನಿಲ್ದಾಣದ ನೀಲನಕ್ಷೆ, ರನ್-ವೇ ಉದ್ದ ಸೇರಿದಂತೆ ವಿವಿಧ ತಾಂತ್ರಿಕ ಮಾಹಿತಿಗಳನ್ನು ಅಧಿಕಾರಿಗಳಿಂದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬುರಾಣಪೂರದ ಬಳಿ ವಿಮಾನ ನಿಲ್ದಾಣಕ್ಕಾಗಿ 727 ಎಕರೆ ಭೂಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, 221 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಏರ್‌ಪೋರ್ಟ್ ನಿರ್ಮಾಣ ಸೇರಿದಂತೆ ಮುಂತಾದ ಕಾರ್ಯಗಳನ್ನು ರಾಜ್ಯ ಸರ್ಕಾರ ಹಾಗೂ ಏರ್‌ಪೋರ್ಟ್‌ಗೆ ಬೇಕಾದ ಎಲ್ಲ ಯಂತ್ರ ಮೊದಲಾದ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ತನ್ನ ಅನುದಾನದಲ್ಲಿ ಒದಗಿಸಲಿದೆ ಎಂದು ಹೇಳಿದರು.
ಇಲ್ಲಿ 80 ಸೀಟರ್‌ಗಳ ವಿಮಾನ ಹಾರಾಡುವ ವ್ಯವಸ್ಥೆ ಇದೆ. 2.1 ಕಿಮೀ. ರನ್-ವೇ ನಿರ್ಮಿಸಲಾಗುತ್ತಿದೆ. ಇದರಲ್ಲಿ ಸೇಫ್ಟಿಝೋನ್ ಸಹ ಸೇರಿದ್ದು, ಶೀಘ್ರದಲ್ಲಿಯೇ ಈ ವಿಷಯವನ್ನು ಸಚಿವ ಸಂಪುಟದಲ್ಲಿ ಇರಿಸಲಾಗುತ್ತಿದ್ದು, ಶೀಘ್ರವೇ ಇದಕ್ಕೆ ಒಪ್ಪಿಗೆ ದೊರೆಯುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಕಾಮಗಾರಿ ಯಾವಾಗ ಪೂರ್ಣಗೊಳ್ಳುವುದು ಎಂಬುದರ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ, ಆಡಳಿತಾತ್ಮಕ ಅನುಮೋದನೆ, ತಾಂತ್ರಿಕ ಪ್ರಕ್ರಿಯೆ ಹೀಗೆ ಇದಕ್ಕೆ ಸಮಯ ಬೇಕಾಗುತ್ತದೆ ಎಂದರು.
ಈ ಹಿಂದೆ ಮುಳವಾಡದಲ್ಲಿ ಏರ್‌ಪೋರ್ಟ್ ನಿರ್ಮಾಣವಾಗಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಿರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅವರು, ನಿಜ. ಆದರೆ ಕೆಲವೊಬ್ಬರು ಇದನ್ನು ಅಪಾರ್ಥ ಮಾಡಿಕೊಂಡರು. ತಮ್ಮ ಜಮೀನುಗಳಿಗೋಸ್ಕರ ಮುಳವಾಡದಲ್ಲಿ ಕಾರಜೋಳರು ವಿಮಾನ ನಿಲ್ದಾಣ ಮಾಡುತ್ತಿದ್ದಾರೆ ಎಂದು ಭಾವಿಸಿದರು. ಆದರೆ ವಾಸ್ತವವಾಗಿ ಮುಳವಾಡದಲ್ಲಿ ನನ್ನ ಜಮೀನು, ಹೊಲ ಇಲ್ಲವೇ ಇಲ್ಲ, ದೂರದ ಕಾಖಂಡಕಿ-ಧೂಡಿಹಾಳದಲ್ಲಿ ನನ್ನ ಜಮೀನುಗಳಿವೆ ಎಂದರು.
ಮುಳವಾಡದಲ್ಲಿ ಈಗಾಗಲೇ ಜಮೀನು ಸಮತಟ್ಟಾಗಿರುವುದರಿಂದ ಕಡಿಮೆ ಖರ್ಚು ಆಗುವ ಕಾರಣದಿಂದಾಗಿ ಅಲ್ಲಿ ವಿಮಾನ ನಿಲ್ದಾಣ ಮಾಡುವಂತೆ ಪತ್ರ ಬರೆದಿದ್ದೇ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರು ಇದ್ದರು.
ಗಿಮಿಕ್ ಮಾಡಿ ಕಾಂಗ್ರೆಸ್ 70 ವರ್ಷ ದೇಶವಾಳಿದೆ
ಗಿಮಿಕ್ ಮಾಡಿ ಕಾಂಗ್ರೆಸ್ 70 ವರ್ಷ ದೇಶವನ್ನಾಳಿದ್ದು, ಈಗ ಜನರಿಗೆ ಕಾಂಗ್ರೆಸ್ ಅಸಲಿಯತ್ತು ಗೊತ್ತಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ. ಮಂಗಳೂರು ಗಲಭೆ ವಿಡಿಯೋ ಬಿಡುಗಡೆ ನಂತರ ಕಾಂಗ್ರೆಸ್ ನಾಯಕರು ಹೇಳಲು ಏನೂ ಇಲ್ಲ. ಹೀಗಾಗಿ ಏನೇನೋ ಹೇಳಿಕೆ ನೀಡುತ್ತಾ ಕಾಂಗ್ರೆಸ್ಸಿಗರು ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದೇಶದ ಎಲ್ಲ ಜನರು ಹೊಸ ಕಾಯ್ದೆಯನ್ನು ಸ್ವಾಗತಿಸಬೇಕು. ನಮ್ಮ ದೇಶದ ಯಾವುದೇ ಒಬ್ಬ ಸಾಮಾನ್ಯ ನಾಗರಿಕನಿಗೂ ಕಾಯ್ದೆಯಿಂದ ತೊಂದರೆ ಇಲ್ಲ. ದೇಶದ ಆರ್ಥಿಕ ಸ್ಥಿತಿ ಬುಡಮೇಲು ಮಾಡಲು ಯತ್ನಿಸುವವರ ವಿರುದ್ಧ ಈ ಕಾಯ್ದೆ ರೂಪಿಸಲಾಗಿದೆ. ದೇಶವಿರೋಧಿ, ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದವರಿಗೆ ಕಾಯ್ದೆಯಿಂದ ತೊಂದರೆಯಾಗುವುದು ಗ್ಯಾರಂಟಿ ಎಂದರು.
ಕೇರಳದಲ್ಲಿ ಬಿಎಸ್‌ವೈ ಕಾರಿಗೆ ಮುತ್ತಿಗೆ ವಿಚಾರಕ್ಕೆ ಉತ್ತರಿಸಿದ ಅವರು, ಕೇರಳದಲ್ಲಿ ಘೇರಾವ್ ಹಾಕದೇ ಮತ್ತೆ ಎಲ್ಲಿ ಹಾಕ್ತಾರೆ? ಇದನ್ನು ನಾವು ಗಂಭೀರ ವಿಷಯವಾಗಿ ತೆಗೆದುಕೊಳ್ಳೋದಿಲ್ಲ. ಇವೆಲ್ಲ ಸರ್ವೆ ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಕೇರಳ ಸರ್ಕಾರ ಅಸಹಾಯಕ ಸ್ಥಿತಿಯಲ್ಲಿದೆ. ಬೇರೆ ರಾಜ್ಯದ ಮುಖ್ಯಮಂತ್ರಿ ಬಂದರೆ ರಕ್ಷಣೆ ನೀಡಲಾರದಷ್ಟು ಅಸಹಾಯಕ ಸ್ಥಿತಿ ಎಂದು ಲೇವಡಿ ಮಾಡಿದರು.
ಮಂಗಳೂರು ಗಲಾಟೆಯಲ್ಲಿ ಗೋಲಿಬಾರ್‌ನಲ್ಲಿ ಮೃತರಿಗೆ ಪರಿಹಾರ ತಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಂಗಳೂರು ಗಲಾಟೆಯಲ್ಲಿ ಗೋಲಿಬಾರ್ ಸಮಯದಲ್ಲಿ ಮೃತರಿಗೆ ಈ ಹಿಂದೆ ಪರಿಹಾರ ನೀಡಬೇಕು ಎನ್ನುವುದರ ಬಗ್ಗೆ ನಿರ್ಧಾರ ಮಾಡಲಾಗಿತ್ತು. ಆದರೆ ಘಟನೆಯ ವಿಡಿಯೋಗಳ ಬಿಡುಗಡೆ ಬಳಿಕ ಸತ್ಯ ಬೇರೆ ಇದೆ ಎನಿಸುತ್ತದೆ. ವಿಡಿಯೋಗಳಲ್ಲಿ ನೋಡಿದಂತೆ ಈ ಘಟನೆ ಪೂರ್ವ ನಿಯೋಜಿತವಾಗಿದೆ. ಈ ಘಟನೆ ಬಗ್ಗೆ ಸತ್ಯಾಸತ್ಯತೆ ಹೊರಬರಬೇಕು. ತನಿಖೆ ನಂತರ ಸತ್ಯಾಸತ್ಯತೆ ಹೊರ ಬರಲಿದೆ. ಈ ಘಟನೆಯ ಬಗ್ಗೆ ಯಾರೂ ರಾಜಕೀಯ ಮಾಡಬಾರದು ಎಂದು ಹೇಳಿದರು.