ಬಾಗಲಕೋಟೆ[ಡಿ.14]: ಸುಳ್ವಾಡಿ ಪ್ರಕರಣದ ಸಂತ್ರಸ್ತರಿಗೆ ಹಿಂದಿನ ಸರ್ಕಾರ ಪರಿಹಾರ ಕೊಟ್ಟಿದೆ ಅಂತ ತಿಳಿದುಕೊಂಡಿದ್ದೆವು.ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಅಂತ ಮಾಧ್ಯಮಗಳ ಮೂಲಕ ನನ್ನ ಗಮನಕ್ಕೆ ಬಂದಿದೆ. ಸಂತ್ರಸ್ತರಿಗೆ ಹಿಂದಿನ ಸರ್ಕಾರ ಭರವಸೆ ಕೊಟ್ಟಿದೆ. ಭರವಸೆ ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. 

ಶನಿವಾರ ತಾಲೂಕಿನ ತುಳಸಿಗೇರಿಯಲ್ಲಿ ಯಾತ್ರಿ ನಿವಾಸ ಉದ್ಘಾಟಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಪಚುನಾವಣೆಯ ಬಳಿಕ ಕಾಂಗ್ರೆಸ್ ನಾಯಕರ ರಾಜಿನಾಮೆ ವಿಚಾರದ ಬಗ್ಗೆ ಮಾತನಾಡಿದ ಅವರು, ನಾನು ಚುನಾವಣೆ ಮುನ್ನವೇ ಹೇಳಿದ್ದೆ, ನಮ್ಮ ಸರ್ಕಾರ ಮೂರುವರೆ ವರ್ಷ ಸುಭದ್ರವಾಗಿರುತ್ತೆ. ಮುಂದಿನ ಮೂರುವರೆ ವರ್ಷ ಬಿಎಸ್ವೈ ಸಿಎಂ ಆಗಿರುತ್ತಾರೆ. ನಮ್ಮ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದೆ,  ಕಾಂಗ್ರೆಸ್, ಜೆಡಿಎಸ್ ಏನೇ ಕುತಂತ್ರ ಮಾಡಿದ್ರೂ ಜಯ ಸಿಗೋದಿಲ್ಲ ಎಂದು ಹೇಳಿದ್ದೆನು. ಬಿಜೆಪಿ ಭರ್ಜರಿ ಗೆಲುವಿನಿಂದ ಕೖ ನಾಯಕರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದ್ದಾರೆ. 

ಡಿಸೆಂಬರ್ 9 ನಂತ್ರ ಕಾಂಗ್ರೆಸ್ ಹಾಗೂ ಜೆಡಿಎಸ್ ಕಚೇರಿಯಲ್ಲಿ ದೀಪ ಹಚ್ಚುವರು ಸಿಗೋಲ್ಲಂತ ಹೇಳಿದ್ದೆ, ಈಗ ನನ್ನ ಮಾತು ಸತ್ಯವಾಗಿದೆ. ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದಾರೆ. ಇನ್ನು ಸ್ವಲ್ಪ ದಿನ ಕಾಯಿರಿ ಕಾಂಗ್ರೆಸ್, ಜೆಡಿಎಸ್ ಇನ್ನು ಅಧೋಗತಿಗೆ ಹೋಗುತ್ತವೆ ಎಂದು ತಿಳಿಸಿದ್ದಾರೆ. 

ಬಿಜೆಪಿ ಸರ್ಕಾರ ಬಂದು ನಾಲ್ಕು ತಿಂಗಳ ಉತ್ತಮ ಕೆಲಸ ಮಾಡಿದೆ. ಬಿಎಸ್ವೈ ಸರ್ಕಾರ ಇರಬೇಕು ಅನ್ನೋದು ಜನರ ಆಸೆ ಇದೆ ಅಂತ ಸಿದ್ದರಾಮಯ್ಯಗೆ ಹೇಳಿದ್ದೆವು. 2018 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಬಿಎಸ್ವೈ ಸಿಎಂ ಆಗ್ಬೇಕು ಎಂದು ಆರೂವರೆ ಕೋಟಿ ಜನ ಹಂಬಲಿಸ್ತಿದ್ರು, ಏಳೆಂಟು ಸೀಟು ಕಡಿಮೆ ಆಗಿದ್ರಿಂದ ನಮ್ಮ ಸರ್ಕಾರ ಆಗಲಿಲ್ಲ. ಕಾಂಗ್ರೆಸ್, ಜೆಡಿಎಸ್ ಅನೈತಿಕ,ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ಮಾಡಿದ್ದರು. ಅವರಿಗೆ ಮೈತ್ರಿ ಸರ್ಕಾರ ನಡೆಸಲಿಕ್ಕೆ ಆಗಲಿಲ್ಲ. ಪರಿಸ್ಪರ ಕಚ್ಚಾಡಿ ರಾಜೀನಾಮೆ ಕೊಡುವ ಪರಿಸ್ಥಿತಿ ಬಂತು ಎಂದಿದ್ದಾರೆ.

ಪೌರತ್ವ ತಿದ್ದುಪಡಿ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ರಾಹುಲ್ ಗಾಂಧಿಗೆ ಜ್ಞಾನದ ಕೊರತೆಯಿದೆ. ಯಾವ ಸಂದರ್ಭದಲ್ಲಿ ಏನು ಮಾತನಾಡ್ಬೇಕು ಅನ್ನೋ ಪರಿಜ್ಞಾನ ಅವರಿಗಿಲ್ಲ. ಯಾವುದೇ ವಿಷಯ ಪ್ರಸ್ತಾಪ ಮಾಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕು. ರಾಹುಲ್ ಗಾಂಧಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದವರು. ಲೋಕಸಭೆ ಸದಸ್ಯರಿದ್ದಾರೆ. ನಾಲಿಗೆ ಮೇಲೆ ಹಿಡಿತವಿರೋದನ್ನು ಉಳಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದ್ದಾರೆ. 

ಶ್ರೀರಾಮುಲು ಡಿಸಿಎಂ ಹುದ್ದೆಗೆ ಮುನಿಸು ವಿಚಾರದ ಬಗ್ಗೆ ಮಾತನಾಡಿದ ಅವರು, ಏನೇ ತೀರ್ಮಾನವಾದರೂ ರಾಷ್ಟ್ರೀಯ ಮಟ್ಟದಲ್ಲಿ ಆಗುತ್ತವೆ. ಶ್ರೀರಾಮುಲು  ಕ್ಯಾಬಿನೆಟ್ ಗೆ ಬಂದಿಲ್ಲವೆಂದ್ರೆ, ನಾನು ಕ್ಯಾಬಿನೆಟ್ ಗೆ ಹೋಗಿರಲಿಲ್ಲ ಕಲಬುರಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ ,ಕೆಡಿಪಿ ಸಭೆ ಕರೆದಿದ್ದರಿಂದ ನಾನು ಅಲ್ಲಿಗೆ ಹೋಗಿದ್ದೆ, ನಾನು ಸಿಎಂ ಅನುಮತಿ ಪಡೆದು ಹೋಗಿದ್ದೆ.ಯಾರ್ಯಾರು ಕ್ಯಾಬಿನೆಟ್ ಗೆ ಬಂದಿಲ್ಲ ಅವ್ರು ಅನುಮತಿ ಪಡೆದಿರುತ್ತಾರೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶಾಸಕ ಬಸನಗೌಡ ಪಾಟೀ ಲ ಯತ್ನಾಳ್ ಹೇಳಿಕೆ ವಿಚಾರದ ಬಗ್ಗೆ  ನಾನು ಯಾರ ಹೇಳಿಕೆಗೂ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ, ನಮ್ಮ ಪಕ್ಷ ವ್ಯಕ್ತಿಗಳಿಗೆ ಸೀಮಿತವಾಗಿಲ್ಲ, ತಮ್ಮ ಭಾವನೆಗಳನ್ನು ಹೇಳಲು ಸ್ವತಂತ್ರರಾಗಿದ್ದಾರೆ. ಆದ್ರೆ ನಿರ್ಣಯಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ನಾಯಕರು ಮಾಡ್ತಾರೆ. ಹಾಗಾಗಿ ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ. 

ಕೆಲವು ರಾಜ್ಯಗಳಲ್ಲಿ ಚುನಾವಣೆ ಇದೆ‌. ರಾಷ್ಟ್ರೀಯ ನಾಯಕರ ಜೊತೆ ನಮ್ಮ ನಾಯಕರಾದ ಸಿಎಂ ಯಡಿಯೂರಪ್ಪ ಚರ್ಚೆ ಆಗಬೇಕು ಇನ್ನೂ ಆಗಿಲ್ಲ. ರಾಷ್ಟ್ರೀಯ ನಾಯಕರು ಸಮಯ ಕೊಟ್ಟು ಕರೆದ ಮೇಲೆ ಚರ್ಚೆ ಮಾಡುತ್ತೇವೆ.  ಖಂಡಿತವಾಗಿಯೂ ದಿನಾಂಕ, ಸಮಯ ಘೋಷಣೆ ಮಾಡುತ್ತೇವೆ. ಮಾಧ್ಯಮದವರನ್ನು, ರಾಜ್ಯದ ಜನರನ್ನು ಕರೆಯುತ್ತೇವೆ ಎಂದು ಹೇಳಿದ್ದಾರೆ. 

ಬಿಜೆಪಿ ಬಂದ ಎಲ್ಲ 17 ಜನರಿಗೂ ಸಚಿವ ಸ್ಥಾನ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ, ಯಾವುದೇ ನಿರ್ಣಯಗಳು ರಾಷ್ಟ್ರ ಮಟ್ಟದಲ್ಲಿ ಆಗುತ್ತವೆ ಎಂದು ಹೇಳಿದ್ದಾರೆ. 

ರಮೇಶ್ ಜಾರಕಿಹೊಳಿಗೆ ಡಿಸಿಎಂ, ಸಚಿವ ಸ್ಥಾನಕ್ಕೆ ಮೂಲ, ವಲಸಿಗರ ಮಧ್ಯೆ ತಿಕ್ಕಾಟ ವಿಚಾರದ ಬಗ್ಗೆ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ತಿಕ್ಕಾಟ ಇಲ್ಲ. ಇದು ಕೇವಲ ಮಾಧ್ಯಮಗಳ ಸೃಷ್ಟಿಯಾಗಿದೆ. ಕೆಲವು ಊಹಾಪೋಹಗಳಿಂದ ಸುದ್ದಿ ಬರುತ್ತವೆ. ಈಗ ಗೆದ್ದವರು, ಹಿಂದೆ ಇದ್ದವರು ಎಲ್ಲರು ಹಾಲು ಜೇನಿನಂತೆ ಒಕ್ಕಟ್ಟಾಗಿ ಕೆಲಸ ಮಾಡ್ತೇವೆ. ನಮ್ಮದು ರಾಷ್ಟ್ರೀಯ ಪಕ್ಷ, ರಾಷ್ಟ್ರ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ, ರಾಷ್ಟ್ರೀಯ ಅಧ್ಯಕ್ಷ ರಿದ್ದಾರೆ.  ರಾಜ್ಯ ಮಟ್ಟದಲ್ಲಿ ಬಿಎಸ್ವೈ ಸಿಎಂ ಇದ್ದಾರೆ. ಎಲ್ಲರೂ ಸೇರಿ ನಿರ್ಣಯಿಸುತ್ತಾರೆ. ಯಾವುದೇ ನಿರ್ಣಯಗಳು ರಸ್ತೆಯಲ್ಲಿ ಆಗುವುದಿಲ್ಲ, ನಮ್ಮ ನಿರ್ಣಯಗಳು ಕೇಂದ್ರ ಮಟ್ಟ ದೆಹಲಿಯಲ್ಲಿ ಆಗುತ್ತವೆ ಎಂದಿದ್ದಾರೆ. 

ನಮ್ಮ ಪಕ್ಷ ನಿಂತ ನೀರಲ್ಲ ಹರಿಯುವ ನೀರು,  ಹರಿಯೋ ನೀರಿನೊಂದಿಗೆ ಹೊಸ ಹೊಸ ನೀರು ಬಂದು ಸೇರೋದು ಸ್ವಾಭಾವಿಕವಾಗಿದೆ. ಮುಂದೆ ಬಿಜೆಪಿ ಇನ್ನೂ ಯಾರ್ಯಾರು ಬರುತ್ತಾರೆ ಅನ್ನೋದನ್ನು ಕಾದುನೋಡಿ. ಅವರ ಸರ್ಕಾರದಲ್ಲಿ ಯಾವುದು ನೆಟ್ಟಗೆ ಇರಲಿಲ್ಲ. ಆ ಕಾರಣಕ್ಕಾಗಿ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಜನರು ರಾಜೀನಾಮೆ ಕೊಡುತ್ತಾರೆ ಎಂದು ಹೇಳಿದ್ದಾರೆ.