ರಾಯಚೂರು(ಫೆ.23):  ದೇಶದ್ರೋಹಿಗಳ ವಿಚಾರದಲ್ಲಿ ಎಲ್ಲಾ ಪಕ್ಷಗಳು ಒಂದಾಗಿರಬೇಕು. ಇಂಥಹ ವಿಷಯಗಳಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ. 

ಅಮೂಲ್ಯ ದೇಶದ್ರೋಹ ಹೇಳಿಕೆ ಪ್ರಕರಣದ ಸಂಬಂಧ ಭಾನುವಾರ ಜಿಲ್ಲೆಯ ಸಿಂಧನೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ದೇಶದ್ರೋಹಿ ಹೇಳಿಕೆ ಹಿಂದೆ ಕೆಲವು ಸಂಘಟನೆಗಳು ಶಾಮೀಲಾಗಿವೆ. ಎಲ್ಲೆಲ್ಲಿ ದೇಶದ್ರೋಹ ಹೇಳಿಕೆ ಆಗುತ್ತಿವೆ, ಅಂತವರ ವಿರುದ್ಧ ಕ್ರಮಗಳು ಜರುಗುತ್ತಿವೆ. ಸಾಮಾಜಘಾತುಕ ಶಕ್ತಿಗಳು ಇದರಲ್ಲಿವೆ. ಎಲ್ಲರ ಮೇಲೂ ಕಾನೂನು ಕ್ರಮ‌ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಮೂಲ್ಯ ದೇಶದ್ರೋಹಿ ಹೇಳಿಕೆ ಬಗ್ಗೆ ಅವರ ತಂದೆಯೇ ಕೈ ಕಾಲು ಮುರಿಯಬೇಕು ಎಂದಿದ್ದಾರೆ. ಆಕೆ ತಂದೆ ತಾಯಿಗೆ ಬೇಡವಾದ ಮಗಳಾಗಿದ್ದಾಳೆ. ಯಾರೇ ದೇಶದ್ರೋಹಿ ಹೇಳಿಕೆಗಳನ್ನ ನೀಡಿದ್ರೂ, ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. ದೇಶದಲ್ಲಿರುವ 130 ಕೋಟಿ ಜನ ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರು ಮಕ್ಕಳ ಮನಸ್ಸುಗಳಿಗೆ ದೇಶಪ್ರೇಮ ತುಂಬುವ ಕೆಲಸ ಆಗಬೇಕು ಎಂದು ತಿಳಿಸಿದ್ದಾರೆ. 

ಹಿಂದೂ ಸಂಘಟನೆಗಳು ಅಮೂಲ್ಯ ಮನೆ ಮೇಲೆ ದಾಳಿ ಮಾಡಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಡಿಸಿಎಂ ಕಾರಜೋಳ ಹೇಳಿದ್ದಾರೆ.