ವಿಜಯಪುರ(ಫೆ.29): ಬೇರೆ ಪಕ್ಷದಿಂದ ಬಿಜೆಪಿಗೆ ಬರಲು ಶಾಸಕರು ತುದಿಗಾಲಿನ ಮೇಲೆ ನಿಂತಿದ್ದಾರೆ. ಎಷ್ಟು ಜನ ಶಾಸಕರು ಅನ್ನೋದನ್ನ ಹೇಳಲು ಆಗೋದಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. 

ಶೀಘ್ರದಲ್ಲೇ ಬಿಜೆಪಿಗೆ 32 ಜನ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಕಾಂಗ್ರೆಸ್‌ ಎಂಎಲ್‌ಸಿ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರದ ಬಗ್ಗೆ ಶನಿವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇಬ್ರಾಹಿಂ ಜೀವನದಲ್ಲಿ ಎಂದಾದ್ರು ಸತ್ಯ ಹೇಳಿದ್ದಾರಾ? 32 ಜನರ ಬಿಜೆಪಿ ಶಾಸಕರಲ್ಲಿ ಇಬ್ರಾಹಿಂ ಒಬ್ಬರ ಹೆಸರು ಹೇಳಲಿ ನೋಡೋಣ. ಇದೆಲ್ಲ ಸತ್ಯಕ್ಕೆ ದೂರವಾದ ಮಾತಾಗಿದೆ. ಇಬ್ರಾಹಿಂ ಕನಸು ಕಾಣುತ್ತಿದ್ದಾರೆ, ಅವರ ಕನಸು ನನಸಾಗಲ್ಲ. ಬಿಜೆಪಿಯ ಯಾವ ಶಾಸಕರು ಬಿಜೆಪಿ ಬಿಡಲ್ಲ ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿರುವವರು ಸಿದ್ದರಾಮಯ್ಯ ಕರೆದರೆ ವಾಪಸ್ ಬರ್ತಾರೆ ಎಂಬ ಮಾರ್ಗರೆಟ್ ಆಳ್ವಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾರಜೋಳ, ಇದು ಮಾರ್ಗರೆಟ್ ಆಳ್ವಾರ ಭ್ರಮೆಯಾಗಿದೆ. ಇದು ಸಾಧ್ಯವೇ ಇಲ್ಲಾ ಎಂದು ಹೇಳಿದ್ದಾರೆ.

ನಾವು ರಾಮಕೃಷ್ಣ ಹೆಗಡೆಯವರು ಇದ್ದಾಗಲೇ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೆವು. 1983ರಲ್ಲಿ  ಹೆಗಡೆ ಅವರನ್ನ ಸಿಎಂ ಮಾಡಲು ಬಿಜೆಪಿಯ 18 ಶಾಸಕರ ಸಹಾಯ ತೆಗೆದುಕೊಂಡು ಸರ್ಕಾರ ರಚನೆ ಮಾಡಿದ್ದೆವು. ಮುಂದೆಯೂ ಹೆಗಡೆಯವರು ವಾಜಪೇಯಿ ಅವರ ಕೇಂದ್ರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದರು. ನಾವೆಲ್ಲ ರಾಮಕೃಷ್ಣ ಹೆಗಡೆ ಅನುಯಾಯಿಗಳಾಗಿದ್ದೇವೆ. ಅಂದೇ ಬಿಜೆಪಿಯನ್ನ ಸೇರಿಕೊಂಡಿದ್ದೇವೆ. ಈ ಮೂಲಕ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ಕಾರಜೋಳ ಸ್ಪಷ್ಟಪಡಿಸಿದ್ದಾರೆ. 

ಎಐಸಿಸಿ ಕಾರ್ಯಾಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ಕೇಳಿದ ವಿಚಾರದ ಬಗ್ಗೆ ಮಾತನಾಡಿದ ಅವರು, ಅಮಿತ್ ಶಾ ಅವರ ರಾಜೀನಾಮೆ ಕೇಳುವ ನೈತಿಕ ಹಕ್ಕು ಸೋನಿಯಾ ಗಾಂಧಿಗೆ ಇಲ್ಲ. ಸೋನಿಯಾ ಹಾಗೂ ಅವರ ತಂಡ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಅವರು ಏನು ಮಾಡಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಪಕ್ಷವನ್ನ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಜನರು ತಿರಸ್ಕಾರ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. 
 

ಫೆಬ್ರವರಿ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ