ಚಿಕ್ಕಮಗಳೂರು(ಫೆ28) : ಮಗನ ಆರೋಗ್ಯ ಚೇತರಿಸಿಕೊಳ್ಳಲು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮದಲ್ಲಿ ಉಪ ಮುಖ್ಯಮಂತ್ರಿ ಎಂ.ಗೋವಿಂದ ಕಾರಜೋಳ ಅವರು ಮೃತ್ಯುಂಜಯ ಹೋಮ ನಡೆಸಿದರು. 48 ದಿನಗಳ ಕಾಲ ನಡೆದ ಹೋಮದ ಪೂರ್ಣಾಹುತಿ ಶನಿವಾರ ನಡೆಯಿತು.

ಈ ಸಂದರ್ಭ ಅವರೇ ಖುದ್ದಾಗಿ ಹಾಜರಿದ್ದು ಹೋಮದಲ್ಲಿ ಪಾಲ್ಗೊಂಡಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗ ಎರಡೂವರೆ ತಿಂಗಳು ಅನಾರೋಗ್ಯದಿಂದ ವೆಂಟಿಲೇಟರ್‌ನಲ್ಲೇ ಇದ್ದ. ಆ ಸಂದರ್ಭದಲ್ಲಿ ವಿನಯ್‌ ಗುರೂಜಿ ಅವರು ಬೆಂಗಳೂರಿಗೆ ಬಂದು ನಿಮ್ಮ ಮಗನಿಗೆ ಏನೂ ಆಗುವುದಿಲ್ಲ, ಭಯಪಡಬೇಡಿ ಎಂದು ಧೈರ್ಯ ಹೇಳಿದ್ದರು. ಅವರ ಮಾತಿನಂತೆ ನನ್ನ ಮಗ ಈಗ ಆರಾಮವಾಗಿದ್ದಾನೆ ಎಂದರು.

'ರಾಜಕೀಯ ಮಾಡುವುದು ನನ್ನ ಉದ್ದೇಶವಲ್ಲ : ದೇಶ ಕಟ್ಟುವುದೇ ಉದ್ದೇಶ' .

ವಿನಯ್‌ ಗುರೂಜಿ ಮಾತನಾಡಿ, ಗೋವಿಂದ ಕಾರಜೋಳ ಅವರ ಮಗ ಬದುಕುವುದಿಲ್ಲ ಎಂದು ವೈದ್ಯರು ಹೇಳಿದ್ದರು. ಎರಡು ತಿಂಗಳ ನಂತರ ಬರುತ್ತೇನೆ, ಆತ ಆರೋಗ್ಯವಂತನ್ನಾಗಿ ಇರುತ್ತಾನೆಂದು ಹೇಳಿದ್ದೆ ಎಂದು ತಿಳಿಸಿದರು. ಅಂದು ದತ್ತಾತ್ರೇಯ ಗುರುಗಳಿಗೆ ಪೂಜೆ ಸಲ್ಲಿಸಿದ್ದೆ, ದತ್ತಾತ್ರೇಯ ಅನುಗ್ರಹದಂತೆ ಆಗಿದೆ, ವೇದದ ತಾಕತ್ತು ಏನೆಂದು ಭಗವಂತ ತೋರಿಸಿದ್ದಾನೆ ಎಂದು ಹೇಳಿದರು.