ಹೊಳೆಆಲೂರ(ಡಿ.21): ನಿಮಗೆ ಸರ್ಕಾರದಿಂದ ಮನೆಗೆ ಬಂದಿರುವ ಪತ್ರದಲ್ಲಿ ಇರುವ ಹಾಗೆ ನೀವು ಮನೆಗಳನ್ನು ಕಟ್ಟಲು ಚಾಲು ಮಾಡಿ, ಇಲ್ಲವಾದರೆ ನಿಮಗೆ ಬಂದಿರುವ ಪರಿಹಾರಧನ ವಾಪಸ್‌ ಆಗುವ ಸಾಧ್ಯತೆಗಳಿವೆ. ನಿಮ್ಮ ಮನೆಯ ಎ.ಬಿ.ಸಿ. ಗ್ರೇಡ್‌ ಕೊಡುವಲ್ಲಿ ವ್ಯತ್ಯಾಸವಾಗಿದ್ದರೆ, ಇನ್ನೊಮ್ಮೆ ನಾವು ಅಧಿಕಾರಿಗಳನ್ನು ಕಳಿಸಿಕೊಡುತ್ತೆವೆ. ನಿಮ್ಮ ಮನೆಗಳನ್ನು ಸರಿಯಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದ್ದಾರೆ.
ಶುಕ್ರವಾರ ಪ್ರವಾಹ ಪೀಡಿತ ಪ್ರದೇಶ ಹೊಳೆಆಲೂರಗೆ ಭೇಟಿ ನೀಡಿ ಮಾತನಾಡಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲಾಧಿಕಾರಿ ಮಾತನಾಡುವ ಮೊದಲು ಇಲ್ಲಿನ ಹಲವಾರು ಸಂತ್ರಸ್ತರು ನಮ್ಮ ಮನೆಯು ಎ ಗ್ರೇಡ್‌ ಬರಬೇಕಾಗಿತ್ತು, ಸಿ ಮತ್ತು ಬಿ ಕೊಟ್ಟಿದ್ದಾರೆ. ಅದಕ್ಕೆ ದಯಮಾಡಿ ನೋಡಿ, ಬಂದು, ಪರಿಶೀಲಿಸಿ ಪರಿಹಾರ ಕೊಡಿ ಎಂದರು. ಸಂತ್ರಸ್ತ ಶಂಕ್ರಪ್ಪ ಹುಚ್ಚಪ್ಪ ಗಂಗೂರ ಮಾತನಾಡಿ, ಎ ಗ್ರೇಡ್‌ ಕೊಟ್ಟವರಿಗೆ 1 ಲಕ್ಷ ರು. ಜಮಾ ಆಗಿವೆ. ನಮಗೆ 1 ರು. ಕೂಡಾ ಜಮಾ ಆಗಿಲ್ಲ, ನಾವು ಹೇಗೆ ಮನೆ ಕಟ್ಟಿಸಿಕೊಳ್ಳುವುದು ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ತಹಸೀಲ್ದಾರ್‌ ಜೆ.ಬಿ. ಜಕ್ಕನಗೌಡ್ರ, ತಾಪಂ ಎ.ಒ. ಸಂತೋಷ ಪಾಟೀಲ, ಹೊಳೆಆಲೂರು ತಾ.ಪಂ. ಸದಸ್ಯ ಜಗದೀಶ ಬ್ಯಾಡಗಿ, ಗ್ರಾಪ ಅಧ್ಯಕ್ಷೆ ಸುಮಂಗಲಾ ಕಾತರಕಿ, ಪಿಡಿಒ ಮಂಜುನಾಥ ಗಣಿ, ಗ್ರಾ.ಪಂ. ಸದಸ್ಯರಾದ ಸಂತೋಷ ದೊಡಮನಿ, ಸಂಗಪ್ಪ ದುಗಲದ ಇದ್ದರು.

ಕೊಣ್ಣೂರು, ಹೊಳೆಆಲೂರು ಗ್ರಾಮಗಳಿಗೆ ಡಿಸಿ ಭೇಟಿ

ಜಿಲ್ಲೆಯ ನೆರೆಪೀಡಿತ ನರಗುಂದ ತಾಲೂಕಿನ ಕೊಣ್ಣೂರು, ವಾಸನ, ಶಿರೋಳ ಹಾಗೂ ರೋಣ ತಾಲೂಕಿನ ಹೊಳೆಆಲೂರು ಗ್ರಾಮಗಳಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭೇಟಿ ನೀಡಿದರು.

ಮನೆ ಹಾನಿಗೊಳಗಾದ ಕುಟುಂಬಗಳಿಗೆ ಮೊದಲ ಹಂತದಲ್ಲಿ ರಾಜೀವ ಗಾಂಧಿ ವಸತಿ ನಿಗಮದಿಂದ ತಲಾ ಒಂದು ಲಕ್ಷ ಪರಿಹಾರ ಬಿಡುಗಡೆ ಆಗಿದ್ದು, ಆ ಕುಟುಂಬಗಳು ಕಟ್ಟುತ್ತಿರುವ ಮನೆಗಳ ಕಾಮಗಾರಿಯನ್ನು ಹಾಗೂ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ ದುರಸ್ತಿ ಕಾಮಗಾರಿಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.

ರಾಜ್ಯ ಸರ್ಕಾರವು ನಿಯಮಾವಳಿಗಿಂತಲೂ ಹೆಚ್ಚಿನ ಪರಿಹಾರ ನೀಡಿದ್ದು ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಫಲಾನುಭವಿಗಳಿಗೆ ತಿಳಿಸಿದರು. ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಹಂಗರಗಿ, ನರಗುಂದ ತಹಸೀಲ್ದಾರ ಮಹೇಂದ್ರ, ಕಂದಾಯ ನಿರೀಕ್ಷಕರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.