ಕೊಡಗು: ರೈತರು, ವ್ಯಾಪಾರಿಗಳಾದ ವಿದ್ಯಾರ್ಥಿಗಳು, ಮಕ್ಕಳ ಸಂತೆಯಲ್ಲಿ ವಸ್ತು ಖರೀದಿಸಿದ ಡಿಸಿ ವೆಂಕಟ ರಾಜ
200 ಕ್ಕೂ ಹೆಚ್ಚು ಮಕ್ಕಳು ಅಂಗಡಿಗಳನ್ನು ತೆರೆಯುವ ಮೂಲಕ ತರಕಾರಿ, ತಿಂಡಿ ತಿನಿಸು, ವಿವಿಧ ಅಲಂಕಾರಿಕ ಸಾಮಗ್ರಿಗಳನ್ನು ಮಕ್ಕಳ ಸಂತೆಯಲ್ಲಿ ಮಾರಾಟ ಮಾಡಿದರು. ಸುಮಾರು 64 ಕ್ಕೂ ಹೆಚ್ಚು ಮಕ್ಕಳು ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದ್ರು. ಹಣದ ಲೆಕ್ಕಾಚಾರ, ಮಾರಾಟ ಕೌಶಲ್ಯ ಸೇರಿದಂತೆ ವ್ಯಾಪಾರದಲ್ಲಿ ತಾವು ಯಾರಿಗೂ ಕಡಿಮೆ ಇಲ್ಲವೆಂಬಂತೆ ಮಕ್ಕಳು ನಿಜ ವ್ಯಾಪಾರಿಗಳಿಗೆ ಸಡ್ಡು ಹೊಡೆದಂತೆ ವಹಿವಾಟು ನಡೆಸಿದರು.
ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಅ.05): ಮಂಜಿನ ನಗರಿ ಮಡಿಕೇರಿಯಲ್ಲಿ ಈಗ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಶಿಸ್ತಾಗಿ ಶಾಲೆಗೆ ಹೋಗ್ತಿದ್ದ ಮಕ್ಕಳು ಇವತ್ತು ಅಕ್ಷರಶಃ ರೈತರಾಗಿದ್ರು. ಪಂಚೆ, ಟವಲ್ ಸುತ್ತಿಕೊಂಡು ವ್ಯಾಪಾರಕ್ಕೆ ಇಳಿದು ಬಿಟ್ಟಿದ್ರು. ಇನ್ನು ಪುಟ್ಟ ಮಕ್ಕಳು ಫ್ಯಾನ್ಸಿ ಡ್ರೆಸ್ ನಲ್ಲಿ ಮಿಂಚಿ ಪ್ರೇಕ್ಷಕರ ಗಮನ ಸೆಳೆದ್ರು. ಇವೆಲ್ಲಾ ಮಡಿಕೇರಿ ದಸರಾ ಅಂಗವಾಗಿ ಏರ್ಪಡಿಸಲಾಗಿದ್ದ ಮಕ್ಕಳ ಸಂತೆ, ಮಕ್ಕಳ ಮಂಟಪ ಸ್ಪರ್ಧೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವ ಮೂಲಕ ದಸರಾದಲ್ಲಿ ತಮ್ಮ ಸಂಭ್ರಮ ಪ್ರದರ್ಶಿಸಿದರು. ಮಡಿಕೇರಿಯಲ್ಲಿ ಮೇಳೈಸಿದೆ ಮಕ್ಕಳ ದಸರಾ ಸಂಭ್ರಮ.
ಅಪ್ಪಟ ರೈತರು, ವ್ಯಾಪಾರಸ್ಥರಾದ ಪುಟ್ಟ ಮಕ್ಕಳು
ಮಡಿಕೇರಿ ದಸರಾ ಮಂಟಪಗಳನ್ನು ಮೀರಿಸುವ ಮಕ್ಕಳ ಮಂಟಪಗಳು. ಹೀಗೆ ಒಂದೆರಡಲ್ಲ, ಮಡಿಕೇರಿಯ ಗಾಂಧಿ ಮೈದಾನದಲ್ಲಿ ಇಂದು ಬೆಳಿಗ್ಗೆಯೇ ಸಂತೆಯ ವಾತಾವರಣ ಕಂಡು ಬಂತು. ಮಕ್ಕಳು ನೆಲದಲ್ಲಿ ಕುಳಿತು ವ್ಯಾಪಾರ ಆರಂಭಿಸಿಯೇ ಬಿಟ್ಟರು. ಬಾಳೆಕಾಯಿ, ಬಾಳೆ ಹಣ್ಣು , ಕಿತ್ತಳೆ ಹಣ್ಣು, ಸೊಪ್ಪು, ಸೀಬೆ ಹಣ್ಣು, ಬೀನ್ಸ್, ಗೆಣಸು, ಫ್ರೆಶ್ ಆಗಿದೆ .... ತಗೊಳ್ಳಿ ಸಾರ್, ತರಕಾರಿ ತರಕಾರಿ.. ಸಾರ್ ಅಂತಾ ಕೂಗಿ ಸಖತ್ತಾಗಿ ಮಾರಾಟ ಮಾಡಿದ್ರು. ಇದು ಮಡಿಕೇರಿಯ ಮಕ್ಕಳ ದಸರಾದ ಸೆಂಟರ್ ಆಫ್ ಅಟ್ರ್ಯಾಕ್ಷನ್. ನಿಮಗೆ ಫ್ರೂಟ್ ಸಲಾಡ್ ಬೇಕಾ.. ಚರುಮುರಿ... ಪಾಪ್‌ಕಾರ್ನ್... ಕೇಕ್, ಜಾಮೂನು ಬೇಕಾ ಅಂತಾ ಹೀಗೆ ನೂರಾರು ತರಾವರಿ ತಿನಿಸುಗಳನ್ನು ಮಕ್ಕಳು ಸಂತೆಯಲ್ಲಿ ಮಾರಾಟ ಮಾಡಿದರು. ಆ ಪುಟಾಣಿ ಮಕ್ಕಳ ವ್ಯಾಪಾರದ ಚಾಕಚಕ್ಯತೆ, ಗಮನ ಸೆಳೆಯಿತು. ಮತ್ತೊಂದೆಡೆ ಪುಟ್ಟ ಮಕ್ಕಳಿಂದ ವಿವಿಧ ರೀತಿಯ ಛದ್ಮವೇಶ ಪ್ರೇಕ್ಷಕರನ್ನ ಮನೆಸೋರೆಗೊಳಿಸಿತು. ಇನ್ನು ಮಡಿಕೇರಿ ಸೇರಿದಂತೆ ವಿವಿಧ ಗ್ರಾಮೀಣ ಭಾಗಗಳ 200 ಕ್ಕೂ ಹೆಚ್ಚು ಮಕ್ಕಳು ಅಂಗಡಿಗಳನ್ನು ತೆರೆಯುವ ಮೂಲಕ ತರಕಾರಿ, ತಿಂಡಿ ತಿನಿಸು, ವಿವಿಧ ಅಲಂಕಾರಿಕ ಸಾಮಗ್ರಿಗಳನ್ನು ಮಕ್ಕಳ ಸಂತೆಯಲ್ಲಿ ಮಾರಾಟ ಮಾಡಿದರು. ಸುಮಾರು 64 ಕ್ಕೂ ಹೆಚ್ಚು ಮಕ್ಕಳು ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದ್ರು. ಹಣದ ಲೆಕ್ಕಾಚಾರ, ಮಾರಾಟ ಕೌಶಲ್ಯ ಸೇರಿದಂತೆ ವ್ಯಾಪಾರದಲ್ಲಿ ತಾವು ಯಾರಿಗೂ ಕಡಿಮೆ ಇಲ್ಲವೆಂಬಂತೆ ಮಕ್ಕಳು ನಿಜ ವ್ಯಾಪಾರಿಗಳಿಗೆ ಸಡ್ಡು ಹೊಡೆದಂತೆ ವಹಿವಾಟು ನಡೆಸಿದರು. ಕೆಲ ವಿದ್ಯಾರ್ಥಿಗಳಂತೂ ಮಡಿಕೇರಿಯ ದಸರಾ ನೆನಪಿಸುವ ಮಂಟಪಗಳನ್ನು ಮಾಡಿ ಪ್ರೇಕ್ಷಕರನ್ನ ಅಟ್ರ್ಯಾಕ್ಟ್ ಮಾಡಿದ್ರು.
ಕೊಡಗು ಗಾಜಿನ ಸೇತುವೆಗಳಿಗೆ ಎದುರಾಯ್ತು ಸಂಕಷ್ಟ; ಪ್ರವಾಸಿಗರು ಏನು ಮಾಡಬೇಕು?
ಇನ್ನೂ ಮಕ್ಕಳ ಸಂತೆಗೆ ಕೊಡಗು ಜಿಲ್ಲಾಧಿಕಾರಿ ವೆಂಕಟ ರಾಜ ಹಾಗೂ ಐಜಿ ಬೋರಲಿಂಗಯ್ಯ ಕೂಡ ಮಕ್ಕಳ ಸಂತೆಗೆ ಭೇಟಿ ನೀಡಿ ಮಕ್ಕಳ ಸಂತೆಯಲ್ಲಿ ತಾವೂ ಕೂಡ ವಸ್ತುಗಳನ್ನು ಖರೀದಿಸಿದ್ದು ಮಕ್ಕಳಿಗೆ ಮತ್ತಷ್ಟು ಹುರುಪು ಬರುವಂತೆ ಮಾಡಿತ್ತು.
ಒಟ್ಟಿನಲ್ಲಿ ಮಕ್ಕಳ ಸಂತೆಯಲ್ಲಿ ಮಕ್ಕಳು ತಂದಿದ್ದ ತರಕಾರಿ, ಹಣ್ಣು, ಇತರೆ ಉತ್ಪನ್ನಗಳು ಕೇವಲ ಗಂಟೆಯಲ್ಲಿಯೇ ಖಾಲಿಯಾಗಿದ್ದು ವಿಶೇಷ. ಮಡಿಕೇರಿ ನಗರದ ಹಲವು ಮಹಿಳೆಯರು, ಪುರುಷರು ಸಂತೆ ವ್ಯಾಪಾರವನ್ನು ಮಕ್ಕಳ ಸಂತೆಯಲ್ಲಿ ಖರೀದಿ ಮಾಡಿ ಖುಷಿಪಟ್ರು.