ಸುರಪುರ: ಸ್ಕೂಟಿಯಲ್ಲಿ ಹಳ್ಳಿ ತಲುಪಿದ ಡಿಸಿ..!
ಜಿಲ್ಲಾಧಿಕಾರಿ ಸ್ನೇಹಲ್ ಅವರಿಗೆ ಗಡ್ಡಿ ನಿವಾಸಿಗಳಿಂದ ಅದ್ಧೂರಿ ಸ್ವಾಗತ
ಸುರಪುರ(ನ.20): ಸರಕಾರದ ಕನಸಿನ ಕೂಸಾದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮ ತಾಲೂಕಿನ ನೀಲಕಂಠರಾಯನಗಡ್ಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸುರಪುರ ನಗರದಿಂದ ಸುಮಾರು 70 ಕಿಮೀ ದೂರದಲ್ಲಿದೆ. ಕೃಷ್ಣ ನದಿಯವರೆಗೂ ವಾಹನದಲ್ಲಿ ಹೋಗಿ ಅಲ್ಲಿಂದ ನದಿಯ ಮೇಲಿರುವ ಬ್ರಿಜ್ ಮೂಲಕ ನಡೆದೇ ಹೋದರು. ಅಲ್ಲಿಂದ ತಗ್ಗುಗುಂಡಿಗಳಿಂದ ಕೂಡಿದ ರಸ್ತೆ ಒಂದೆರೆಡು ಕಿಮೀ. ಸ್ಕೂಟಿಯಲ್ಲಿಯೇ ಕ್ರಮಿಸಿದರು. ಗ್ರಾಮ ಲೆಕ್ಕಿಗರಾದ ಮಲ್ಲಮ್ಮ ಅವರಿಗೆ ಸಾಥ್ ನೀಡಿದರು.
ಜಿಲ್ಲಾಧಿಕಾರಿಗಳು ಮುಂದೆ ಸಾಗುತ್ತಿದ್ದರೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ದಂಡು ಸೈನ್ಯದಂತೆ ಹಿಂದೆಯೇ ಸಾಗುತ್ತಿತ್ತು. ಕೆಲವೆಡೆ ತಗ್ಗು ಮತ್ತು ಗುಂಡಿಗಳಿಗೆ ಬೈಕ್ ಆ ಕಡೆ ಈ ಕಡೆ ಹೋಗುತ್ತಿತ್ತು. ಜಿಲ್ಲಾಧಿಕಾರಿಗಳು ಯಾವುದಕ್ಕೂ ಅಂಜದೆ ಬ್ಯಾಲೆನ್ಸ್ ಮಾಡುತ್ತಾ ಸಾಗಿದರು. ಗ್ರಾಮ ಇನ್ನೇನು ಅರ್ಧ ಕಿಮೀ ಇದೆಯೆನ್ನುವ ಮುನ್ನವೇ ಜಿಲ್ಲಾಧಿಕಾರಿಗಳಿಗಾಗಿ ಗಡ್ಡಿ ನಿವಾಸಿಗಳು ಬಾಜಾ ಭಜಂತ್ರಿ, ಡೊಳ್ಳು, ಕುಂಬಕಳಸ ಹೊತ್ತು ಕಾಯುತ್ತಿದ್ದರು.
ಜಿಲ್ಲಾಧಿಕಾರಿಗಳು ಆಗಮಿಸುತ್ತಿದ್ದಂತೆ ಸುಮಂಗಲೆಯರು ಆರತಿ ಮಾಡಿ, ಹಣೆಗೆ ತಿಲಕವಿಟ್ಟು ಬರಮಾಡಿಕೊಡರು. ಅಲ್ಲಿಂದ ಜಿಲ್ಲಾಧಿಕಾರಿ ಜತೆ ಅಧಿಕಾರಿಗಳ ದಂಡು ಕುಂಭಕಳಸ ಹೊತ್ತ ಮಹಿಳೆಯರ ಸಾಲಿನೊಂದಿಗೆ ಹೆಜ್ಜೆ ಹಾಕಿದರು. ಡೊಳ್ಳು, ಬಾಜಾ ಭಜಂತ್ರಿ ಮೂಲಕ ಗ್ರಾಮದವರೆಗೂ ಅದ್ಧೂರಿಯಾಗಿ ಸ್ವಾಗತಿಸಿದರು.
SWACHH VIDYALAYA AWARD: ಯಾದಗಿರಿ ಜಿಲ್ಲೆಯ ಶಾಲೆಗೆ ‘ಸ್ವಚ್ಛ ವಿದ್ಯಾಲಯ’ ಪುರಸ್ಕಾರ
ನೀಲಕಂಠರಾಯ ಗಡ್ಡಿ ಗ್ರಾಮದ ಜನರ ಅಹವಾಲುಗಳನ್ನು ಆಲಿಸಿದರು. ಬಳಿಕ ಪಿಂಚಣಿ ಪ್ರಮಾಣ ಪತ್ರಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿದರು. ಬಳಿಕ ಮಾತನಾಡಿ, ಮಳೆಗಾಲ ಬಂದಾಗಲೆಲ್ಲ ಪ್ರವಾಹಪೀಡಿತವಾಗಿ ಅನೇಕ ಸಮಸ್ಯೆಯನ್ನು ಎದುರಿಸುತ್ತಿರುವ ನೀಲಕಂಠರಾಯನ ( ನಡು) ಗಡ್ಡಿ ಜನತೆಯು ಗಡ್ಡಿ ತೊರೆದು ಬೇರೆಡೆಗೆ ಸ್ಥಳಾಂತರವಾಗಲು ಒಪ್ಪಿದರೆ ಸರ್ಕಾರ ಸಕಲ ಸೌಲಭ್ಯ ಒದಗಿಸಲಿದೆ ಎಂದರು.
ಇದೇ ವೇಳೆ 2014ರಲ್ಲಿ ಕೃಷ್ಣಾ ನದಿ ಸುತ್ತುವರಿದ ನೀಲಕಂಠರಾಯನ ಗಡ್ಡಿಯಲ್ಲಿ ಪ್ರವಾಹಕ್ಕೆ ಹೆದರದೆ ಈಜಿ ದಡ ಸೇರಿ ಸಾಹಸ ಮೆರೆದ ತುಂಬು ಗರ್ಭಿಣಿ ಯಲ್ಲಮ್ಮ ಮತ್ತು ಮಗನಿಗೆ ಹಾಗೂ 6 ಜನರ ಪ್ರಾಣವನ್ನು ರಕ್ಷಿಸಿದ ಶೌರ್ಯ ಸಾಹಸ ಪ್ರಶಸ್ತಿ ವಿಜೇತ ನೀಲಕಂಠರಾಯನಗಡ್ಡಿ ಗ್ರಾಮದ ಕನಕಪ್ಪ ತಂ.ಮುದಕಪ್ಪ ಇವರಿಗೆ ವೇದಿಕೆಯಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು.
ಅಗತ್ಯ ಸೌಲಭ್ಯಗಳನ್ನು ನೀಡಬೇಕು. ಮನೆಗಳು ಇಲ್ಲಿಂದ ತೆರವು ಮಾಡಿದರೆ ಕಷ್ಟಆಗುತ್ತದೆ. ನದಿಯಲ್ಲಿ ಪ್ರವಾಹ ಬಂದಾಗ ಮಾತ್ರ ನಾವು ಅಲ್ಲಿರುತ್ತೇವೆ. ಉಳಿದ ಸಮಯದಲ್ಲಿ ಗಡ್ಡಿಯಲ್ಲಿಯೇ ವಾಸ ಮಾಡುತ್ತೇವೆ. ಬದಲಾದ ಬಳಿಕ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಿದರೆ ಕಕ್ಕೇರಾ ಪುರಸಭೆ ಮುಂದೆ ಪ್ರತಿಭಟಿಸುತ್ತೇವೆ ಅಂತ ನೀಲಕಂಠರಾಯನ ಗಡ್ಡಿ ನಿವಾಸಿ ಅಮರಪ್ಪ ತಿಳಿಸಿದ್ದಾರೆ.
ಸುರಪುರ: ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಿಎಂ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ, ರಾಜೂಗೌಡ
ವೆಂಕಟಪ್ಪ ನಾಯಕರ ದಯದಿಂದ ಸೇತುವೆ ನಿರ್ಮಿಸಲಾಗಿದೆ. ಅದನ್ನು ಇನ್ನಷ್ಟುಗಟ್ಟಿಯಾಗಿ ಮತ್ತು ಅಗಲವಾಗಿ ಮಾಡಿಕೊಡಬೇಕು. ಸುಸಜ್ಜಿತ ಸೇತುವೆ ನಿರ್ಮಿಸಿಕೊಟ್ಟರೆ ನಿಮ್ಮಲ್ಲಿ ಬೇರೇನು ಕೇಳುವುದಿಲ್ಲ. ನಾವು ಹುಟ್ಟು ಬೆಳೆದ ನೆಲವನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ. ತಾತ್ಕಾಲಿಕವಾಗಿ ಬೇಕಿದ್ದರೆ ಎರಡು ತಿಂಗಳು ಮಾತ್ರ ಹೋಗುತ್ತೇವೆ ಅಂತ ಗಡ್ಡಿ ನಿವಾಸಿ ದ್ಯಾಮವ್ವ ರಾಯಪ್ಪ, ನೀ ತಿಳಿಸಿದ್ದಾರೆ.
ಅಂಗನವಾಡಿ ನಿರ್ಮಾಣ, ರೇಷನ್ ಕಾರ್ಡ್, ಗ್ರಾಮದಿಂದ ಬ್ರಿಡ್ಜ್ ವರೆಗೆ ಡಾಂಬಾರು ರಸ್ತೆ, ಬಸ್ ಸಂಚಾರ, ಮುಟೇಷನ್, ವೃದ್ಧಾಪ್ಯ, ಪಿಂಚಣಿ ಸೇರದಂತೆ ವಿವಿಧ ಅರ್ಜಿಗಳನ್ನು ನೀಡಿದ್ದೇವೆ ಅಂತ ಗಡ್ಡಿ ನಿವಾಸಿ ನಾಗಮ್ಮ ಅಮರಪ್ಪ ಹೇಳಿದ್ದಾರೆ.