ದಾವಣಗೆರೆಯ ಟೆಕ್ಕಿಯೊಬ್ಬರು ಮ್ಯಾಟ್ರಿಮೊನಿ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯ ಮಾತು ನಂಬಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ₹9.34 ಲಕ್ಷ ಕಳೆದುಕೊಂಡಿದ್ದಾರೆ. ವಂಚನೆಗೊಳಗಾದ ಟೆಕ್ಕಿ ದಾವಣಗೆರೆ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ದಾವಣಗೆರೆ (ಜು. 4): ಮದುವೆಗೆ ಸೂಕ್ತ ಜೋಡಿ ಹುಡುಕಲು ಮ್ಯಾಟ್ರಿಮೊನಿ ಆ್ಯಪ್‌ ಬಳಸಿದ ದಾವಣಗೆರೆಯ ಟೆಕ್ಕಿ, ಭಾರಿ ವಂಚನೆಗೆ ಬಲಿಯಾಗಿರುವ ಘಟನೆ ಬಹಿರಂಗವಾಗಿದೆ. ಇಂಟರ್‌ನೆಟ್‌ನಲ್ಲಿ ನಡೆದ ಈ ಸಂಬಂಧ ಹೊಂದಿದ ವಾಟ್ಸಪ್‌ ಪರಿಚಯದ ನಂತರ, ಯುವತಿಯೊಬ್ಬಳ ಮಾತು ನಂಬಿ ಸಾವಿರಾರು ರೂಪಾಯಿ ಹೂಡಿಕೆ ಮಾಡಿದ ಟೆಕ್ಕಿಗೆ ರೂ. 9.34 ಲಕ್ಷ ರೂ. ಕಳೆದುಕೊಂಡು ವಂಚನೆಗೊಳಾದ ಸತ್ಯಾಂಶ ಬೆಳಕಿಗೆ ಬಂದಿದೆ.

ಘಟನೆ ವಿವರ:

ದಾವಣಗೆರೆಯ ಟೆಕ್ಕಿಯೊಬ್ಬರು ಪ್ರಸಿದ್ಧ 'ಸಂಗಮ' ಮ್ಯಾಟ್ರಿಮೊನಿ ಆ್ಯಪ್‌ನಲ್ಲಿ ಖಾತೆ ತೆರೆಯಿದ್ದರು. ಏಪ್ರಿಲ್ 24 ರಂದು ‘ಅಭಿನಯ’ ಎಂಬ ಹೆಸರಿನ ಪ್ರೊಫೈಲ್‌ ಹೊಂದಿದ ಯುವತಿಯೊಬ್ಬರಿಂದ ವಾಟ್ಸಪ್‌ನಲ್ಲಿ ಸಂದೇಶ ಬಂದಿದೆ. ತಮಿಳುನಾಡಿನ ಚೆನ್ನೈ ಮೂಲದವಳಾಗಿದ್ದು, ಮಲೇಷಿಯಾದಲ್ಲಿ ನೆಲೆಸಿದ್ದಾಗಿ ತಿಳಿಸಿದ ಆಕೆ ಹೇಳಿಕೊಳ್ಳುತ್ತಾಳೆ. ಜೊತೆಗೆ, ನಿಮ್ಮ ಪ್ರೊಫೈಲ್ ಇಷ್ಟವಾದ್ದು, ನಾನು ನಿಮ್ಮನ್ನು ಮದುವೆ ಮಾಡಿಕೊಳ್ಳಲು ಒಪ್ಪಿಗೆ ಇದೆ ಎಂದು ಹೇಳಿಕೊಳ್ಳುತ್ತಾಳೆ.

ಇಬ್ಬರೂ ಪರಸ್ಪರ ಪರಿಚಯ ಬೆಳೆಸಿದ ಬಳಿಕ, ಯುವತಿ ತಾನು 'Global TRX' ಎಂಬ ಕ್ರಿಪ್ಟೋ ಕರೆನ್ಸಿಗೆ ಹೂಡಿಕೆ ಮಾಡಿದ್ದೇನೆ. ನಿಮಗೂ ಆಸಕ್ತಿಯಿದ್ದರೆ ಹೂಡಿಕೆ ಮಾಡಿ ಲಾಭ ಗಳಿಸಿ ಎಂದು ಒಂದು ಲಿಂಕ್ ಅನ್ನು ಕಳುಹಿಸುತ್ತಾಳೆ. ಆಕೆಯ ಮಾತು ನಂಬಿದ ಟೆಕ್ಕಿ, ಮಹಿಳೆ ಕಳುಹಿಸಿದ ಲಿಂಕ್ ಮೂಲಕ ಮೇ 4 ರಿಂದ 9ರ ನಡುವೆ ವಿವಿಧ ಖಾತೆಗಳಿಗೆ ಹಂತ ಹಂತವಾಗಿ ರೂ. 9.34 ಲಕ್ಷ ಹಣ ವರ್ಗಾಯಿಸುತ್ತಾರೆ.

ವಂಚನೆಯ ನಿರ್ವಹಣೆ:

ಹಣ ಹೂಡಿದ ಬಳಿಕ, ಮತ್ತೆ ಪ್ರೊಸೆಸಿಂಗ್ ಶುಲ್ಕ ಪಾವತಿಸಬೇಕೆಂದು ಯುವತಿಯಿಂದ ಮತ್ತೊಂದು ಅಪರಿಚಿತ ನಂಬರ್‌ನಿಂದ ಕರೆ ಬರುತ್ತದೆ. ಶೇಕಡಾ 5 ರಷ್ಟು ಫೀ ಪಾವತಿಸಿದರೂ ಮತ್ತೆ ಯುಎಸ್‌ ಡಾಲರ್‌ನಿಂದ ಭಾರತೀಯ ರೂಪಾಯಿಗೆ ಪರಿವರ್ತನೆಗೆ ಹಣ ಕೇಳಿದಾಗ ಟೆಕ್ಕಿಗೆ ಅನುಮಾನ ಉಂಟಾಗುತ್ತದೆ. ಸ್ನೇಹಿತರ ಸಲಹೆ ಕೇಳಿದ ನಂತರ ವಂಚನೆ ಸಂಬಂಧಿತದ್ದು ಎಂಬುದು ಗೊತ್ತಾಗುತ್ತದೆ. ತಕ್ಷಣವೇ ದಾವಣಗೆರೆ ಸೈಬರ್, ಎಕಾನಾಮಿಕ್ ಕ್ರೈಂ ಮತ್ತು ನಾರ್ಕೋಟಿಕ್ಸ್ (CEN) ಠಾಣೆಗೆ ಹೋಗಿ ಟೆಕ್ಕಿ ದೂರು ನೀಡುತ್ತಾನೆ. ಅಲ್ಲಿ ತಾನು ಹಣವನ್ನು ಕಳೆದುಕೊಂಡ ರೀತಿಯನ್ನು ವಿವರಿಸಿದ್ದಾನೆ.

ದಾವಣಗೆರೆ ಸೆನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇನ್ನು ಪೋಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಾ, ಮ್ಯಾಟ್ರಿಮೊನಿ ಆ್ಯಪ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ಅಪರಿಚಿತ ವ್ಯಕ್ತಿಗಳಿಂದ ಹಣ ವರ್ಗಾವಣೆ ಮಾಡುವ ಮೊದಲು ಅವರ ಪೂರ್ವಾಪರದ ಬಗ್ಗೆ ತನಿಖೆ ನಡೆಸಬೇಕೆಂದು ಸಲಹೆ ನೀಡಿದ್ದಾರೆ. ಕ್ರಿಪ್ಟೋ ಕರೆನ್ಸಿ ಮತ್ತು ವಿದೇಶಿ ಹೂಡಿಕೆಯಂತಹ ಆಫರ್‌ಗಳನ್ನು ನಂಬದಿರಲು ಸೂಚಿಸಿದ್ದಾರೆ.