ದಾವಣಗೆರೆ ರಾಜನಹಳ್ಳಿಯ ಗರ್ಭಿಣಿಗೆ ಪಾಸಿಟಿವ್: ಜನರಲ್ಲಿ ಆತಂಕ
ಕೆಲವು ದಿನಗಳ ಹಿಂದೆ ಮಹಿಳೆ ಗರ್ಭಿಣಿಯಾದ ಕಾರಣ ರಾಜನಹಳ್ಳಿಯ ತಾಯಿಯ ಮನೆಗೆ ಹೋಗಿದ್ದರು, ಈ ಮಹಿಳೆಗೆ ಕೊರೋನಾ ಸೋಂಕು ತಗುಲಿರುವುದು ಜಿಲ್ಲೆಯ ಜನತೆಗೆ ಆತಂಕ ಹೆಚ್ಚುವಂತೆ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಹರಿಹರ(ಜೂ.19): ತಾಲೂಕಿನ ರಾಜನಹಳ್ಳಿಯ ಗರ್ಭಿಣಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನಲೆ ಮಹಿಳೆಯ ಮನೆಯ ಸುತ್ತಾ ಸೀಲ್‌ಡೌನ್ ಮಾಡಲಾಗಿದೆ.
ಸುಮಾರು 100 ಮೀಟರ್ ಸುತ್ತಳತೆಯಲ್ಲಿ ಬ್ಯಾರಿಕೇಡ್‌ಗಳ ಮೂಲಕ ಹತ್ತಾರು ಮನೆಗಳನ್ನು ಸೀಲ್ ಡೌನ್ ಮಾಡಿ ಸೋಂಕಿತ ಮಹಿಳೆಯನ್ನು ಮನವೂಲಿಸಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು. ಸ್ಥಳಕ್ಕೆ ತಹಸೀಲ್ದಾರ್, ತಾಲೂಕು ವೈದ್ಯಾಧಿಕಾರಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಸೋಂಕಿತ ಮಹಿಳೆಯ ಗಂಡನ ಮನೆ ಹರಿಹರ ನಗರವಾಗಿದ್ದು, ಕೆಲವು ದಿನಗಳ ಹಿಂದೆ ಮಹಿಳೆ ಗರ್ಭಿಣಿಯಾದ ಕಾರಣ ರಾಜನಹಳ್ಳಿಯ ತಾಯಿಯ ಮನೆಗೆ ಹೋಗಿದ್ದರು ಎನ್ನಲಾಗಿದೆ. ಸೋಂಕಿತಳು ಗರ್ಭಿಣಿಯಾದ ಕಾರಣ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಹೊದಾಗ ವೈದ್ಯರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಪರೀಕ್ಷೆಗೆ ಕಳುಹಿಸಿದ್ದರು. ಜೂನ್ 13 ರಂದು ಗಂಟಲು ದ್ರವ ಪಡೆದಿದ್ದರು. ಗುರುವಾರ ವರದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.
ದಾವಣಗೆರೆ ಮಹಿಳೆಗೆ ಕೊರೋನಾ ಪಾಸಿಟಿವ್: ಕಾಂಪ್ಲೆಕ್ಸ್ ಸೀಲ್‌ಡೌನ್
ಪಕ್ಕದ ದಾವಣಗೆರೆ ನಗರದಲ್ಲಿ ಕೊರೋನಾ ಆರ್ಭಟಿಸುತ್ತಿದ್ದರೂ ಹರಿಹರ ತಾಲೂಕಿನ ಜನರು ಯಾವುದೇ ಪಾಸಿಟಿವ್ ಪ್ರಕರಣ ಇಲ್ಲದೆ ಇರುವುದಕ್ಕೆ ನಿರಾಂತಕರಾಗಿದ್ದರು. ಈಗ ಗ್ರಾಮೀಣ ಹಾಗೂ ನಗರ ಪ್ರದೇಶಕ್ಕೂ ಸಂಪರ್ಕ ಹೊಂದಿರುವ ಮಹಿಳೆಗೆ ಪಾಸಿಟಿವ್ ದೃಢಪಟ್ಟಿರುವುದರಿಂದ ಜನರಲ್ಲಿ ಆತಂಕ ಮನೆಮಾಡಿದೆ.