ದಾವಣಗೆರೆ [ನ.29]: ಆರ್ಥಿಕ ಸಬಲರು ಬಿಪಿಎಲ್‌ ಕಾರ್ಡ್‌ ಪಡೆದಿದ್ದರೆ, ಅವುಗಳನ್ನು ಸ್ವಯಂ ಪ್ರೇರಿತವಾಗಿ ಆಹಾರ ಮತ್ತು ನಾಗರಿಕ ಇಲಾಖೆಗೆ ಹಿಂದಿರುಗಿಸ ಬೇಕು. ಇದಕ್ಕಾಗಿ ಒಂದು ತಿಂಗಳ ಕಾಲಾವಕಾಶ ನೀಡಿದ್ದು, ಈ ಕಾಲಮಿತಿಯಲ್ಲಿ ಕಾರ್ಡ್‌ ಮರಳಿಸದಿದ್ದರೆ ಈವರೆಗೆ ಪಡೆದ ಪಡಿತರಕ್ಕೆ ಮುಕ್ತ ಮಾರುಕಟ್ಟೆದರ ವಸೂಲಿ ಮಾಡಿ, ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಎಚ್ಚರಿಸಿದ್ದಾರೆ.

ಬಿಪಿಎಲ್‌ ಕಾರ್ಡ್‌ ಹೊಂದಿರುವ ಆರ್ಥಿಕ ಸ್ಥಿತಿವಂತ ಕುಟುಂಬಗಳು ಸ್ವಪ್ರೇರಣೆಯಿಂದ ಅದನ್ನು ಇಲಾಖೆಗೆ ಒಂದು ತಿಂಗಳಲ್ಲೇ ಮರಳಿಸಬೇಕು. ನಿಗದಿತ ಕಾಲಾವಧಿಯಲ್ಲಿ ಕಾರ್ಡ್‌ ಹಿಂದಿರುಗಿಸಿದವರಿಗೆ ಇಲಾಖೆ ಯಾವುದೇ ದಂಡ ವಿಧಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 381145 ಎಎವೈ, ಬಿಪಿಎಲ್‌ ಪಡಿತರ ಚೀಟಿ ವಿತರಿಸಿದೆ. ಆದರೆ ಕೆಲ ಕುಟುಂಬ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವವರು, ಮಕ್ಕಳು ಸರ್ಕಾರಿ, ಅರೆ ಸರ್ಕಾರಿ ಸೇವೆಗೆ ಸೇರಿ, ವೇತನ ಪಡೆಯುತ್ತಿರುವವರು, ಆದಾಯ ತೆರಿಗೆ ಪಾವತಿಸುತ್ತಿರುವವರು, ನಗರ ಪ್ರದೇಶದಲ್ಲಿ ಸ್ವಂತ ಆರ್‌ಸಿಸಿ ಕಟ್ಟಡ ಹೊಂದಿದ್ದು, ಮನೆ ಬಾಡಿಗೆ ಪಡೆಯುತ್ತಿರುವವರು ತಮ್ಮ ಪಡಿತರ ಚೀಟಿ ಬಿಪಿಎಲ್‌ ಪಟ್ಟಿಯಲ್ಲೇ ಮುಂದುವರಿಸಿಕೊಂಡು, ಉಚಿತ ಅಕ್ಕಿ ಪಡೆಯುತ್ತಿದ್ದಾರೆ ಎಂದರು.

 

ಆರ್ಥಿಕವಾಗಿ ಸಬಲರು ಪಡೆದ ಬಿಪಿಎಲ್‌ ಕಾರ್ಡ್‌ಗಳನ್ನು ಸ್ವಪ್ರೇರಣೆಯಿಂದ ಇಲಾಖೆಗೆ ಮರಳಿಸಲು ಒಂದು ತಿಂಗಳ ಕಾಲಾವಕಾಶವಿದೆ. ಅನರ್ಹ ಕಾರ್ಡ್‌ಗಳನ್ನು ಗೌಪ್ಯವಾಗಿ ಪರಿಶೀಲಿಸುವ ಕಾರ್ಯ ಆರಂಭವಾಗಿದೆ. ಪರಿಶೀಲನೆ ವೇಳೆ ಅನರ್ಹರು ಬಿಪಿಎಲ್‌ ಕಾರ್ಡ್‌ ಪಡೆದಿದ್ದು ಕಂಡು ಬಂದರೆ ಬಿಪಿಎಲ್‌ ಕಾರ್ಡ್‌ ಪಡೆದಾಗಿನಿಂದ ಈವರೆಗೆ ಸ್ವೀಕರಿಸಿದ ಪಡಿತರ ಪ್ರಮಾಣಕ್ಕೆ ಮುಕ್ತ ಮಾರುಕಟ್ಟೆದರದಲ್ಲಿ ದಂಡ ವಸೂಲಿ ಮಾಡಿ, ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಿ ಅವರು ಎಚ್ಚರಿಸಿದ್ದಾರೆ.

ಇದೇ ಕಡೇ ಅವಕಾಶವಾಗಿದ್ದು, ಆರ್ಥಿಕವಾಗಿ ಸದೃಢ ಕುಟುಂಬಗಳು ತಾವು ಪಡೆದ ಬಿಪಿಎಲ್‌ ಕಾರ್ಡ್‌ಗಳನ್ನು ಸ್ವಯಂ ಪ್ರೇರಣೆಯಿಂದ ಆಹಾರ ಇಲಾಖೆಗೆ ಮರಳಿಸಬೇಕು.

ವೇತನ ಗಣನೆಗೆ ತೆಗೆದುಕೊಳ್ಳದೇ ಎಲ್ಲಾ ಕಾಯಂ ನೌಕರರು ಅಂದರೆ ಸರ್ಕಾರ ಅಥವಾ ಸರ್ಕಾರದ ಅನುದಾನ ಪಡೆಯುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿಕ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿ, ನಿಗಮಗಳು, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್‌, ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು ಒಳಪಡುತ್ತದೆ.

ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬ ಅಥವಾ ಗ್ರಾಮೀಣ ಪ್ರದೇಶ ಹೊರತುಪಡಿಸಿ ನಗರ ಪ್ರದೇಶದಲ್ಲಿ 1 ಸಾವಿರ ಚದರ ಅಡಿಗಿಂತಲೂ ಹೆಚ್ಚು ವಿಸ್ತೀರ್ಣದ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು ಒಳಪಡುತ್ತವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಜೀವನೋಪಾಯಕ್ಕಾಗಿ ಸ್ವಂತ ವಾಹನ ಓಡಿಸುವ, ಒಂದು ವಾಣಿಜ್ಯ ವಾಹನ ಅಂದರೆ ಟ್ರ್ಯಾಕ್ಟರ್‌, ಮ್ಯಾಕ್ಸಿ ಕ್ಯಾಬ್‌, ಟ್ಯಾಕ್ಸಿ ಇತ್ಯಾದಿ ಹೊಂದಿರುವ ಕುಟುಂಬ ಹೊರತುಪಡಿಸಿ, 4 ಚಕ್ರದ ವಾಹನ ಹೊಂದಿರುವ ಎಲ್ಲಾ ಕುಟುಂಬಗಳು, ವಾರ್ಷಿಕ ಆದಾಯ(ಎಲ್ಲಾ ಮೂಲದಿಂದ) 1.20 ಲಕ್ಷ ಮೇಲ್ಪಟ್ಟಕುಟುಂಬಗಳು ಬರುತ್ತವೆ ಎಂದು ವಿವರಿಸಿದ್ದಾರೆ.

ಅನರ್ಹ ಕಾರ್ಡ್‌ ಮಾಹಿತಿಗೆ 400 ಬಹುಮಾನ

ಸಾರ್ವಜನಿಕರು, ಸ್ವಯಂ ಸೇವಾ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಅನರ್ಹ ಬಿಪಿಎಲ್‌ ಪಡಿತರ ಚೀಟಿ ಪಡೆದವರ ಬಗ್ಗೆ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ (ಆಹಾರ ಶಾಖೆ)ಗೆ ಗೌಪ್ಯವಾಗಿ ಲಿಖಿತವಾಗಿ ಸಲ್ಲಿಸಿದರೆ, ಅಂತಹ ಅರ್ಜಿಗಳನ್ನು ಪರಿಶೀಲಿಸಿ, ಅನರ್ಹತೆ ಕಂಡು ಬಂದರೆ ಪಡಿತರ ಚೀಟಿ ರದ್ಧುಗೊಳಿಸಲಾಗುತ್ತದೆ. ಅಲ್ಲದೇ, ಮಾಹಿತಿ ನೀಡಿದವರಿಗೆ ಸರ್ಕಾರದಿಂದ ಬಹುಮಾನ ಯೋಜನೆಯಡಿ ಅನರ್ಹ ಪಡಿತರ ಚೀಟಿಯೊಂದಕ್ಕೆ 400 ರು. ಬಹುಮಾನ ನೀಡಲಾಗುವುದು.

- ಮಹಾಂತೇಶ ಜಿ.ಬೀಳಗಿ, ಜಿಲ್ಲಾಧಿಕಾರಿ