ದಾವಣಗೆರೆ ಜಿಲ್ಲೆಯ ಮಲೆಬೆನ್ನೂರು ಕಾಲೇಜಿನ ಉಪನ್ಯಾಸಕ ಮಲ್ಲಿಕಾರ್ಜುನ, ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಅನ್ವಯ, ಆರೋಪಿ ಉಪನ್ಯಾಸಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಜಿಲ್ಲಾಧಿಕಾರಿಗಳು ಆತನನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ದಾವಣಗೆರೆ: ಜಿಲ್ಲೆಯ ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಪನ್ಯಾಸಕನೊಬ್ಬ ಕಾಲೇಜು ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿ, ಲೈಂಗಿK ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಆರೋಪಿ ಉಪನ್ಯಾಸಕ ಮಲ್ಲಿಕಾರ್ಜುನ ವಿರುದ್ಧ ವಿದ್ಯಾರ್ಥಿನಿಯರ ಪೋಷಕರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಸಂತ್ರಸ್ತ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಉಪನ್ಯಾಸಕ ಮಲ್ಲಿಕಾರ್ಜುನ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಎಫ್‌ಐಆರ್ (FIR) ದಾಖಲಾಗಿದೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು, ಇಲಾಖಾ ವಿಚಾರಣೆ ಮುಗಿಯುವವರೆಗೆ ಉಪನ್ಯಾಸಕ ಮಲ್ಲಿಕಾರ್ಜುನನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಬೇಬಿ, ಡಾರ್ಲಿಂಗ್ ನನ್ನ ಇಷ್ಟಪಡ್ತೀಯಾ?

ಸಂತ್ರಸ್ತ ಬಾಲಕಿ ತಾಯಿ ನೀಡಿದ ದೂರಿನಲ್ಲಿ ತಮ್ಮ ಮಗಳೊಂದಿಗೆ ಉಪನ್ಯಾಸಕ ನಡೆದುಕೊಂಡ ಕೆಟ್ಟ ವರ್ತನೆಯನ್ನು ಉಲ್ಲೇಖಿಸಿದ್ದಾರೆ. ಉಪನ್ಯಾಸಕ ಮಲ್ಲಿಕಾರ್ಜುನ ಕಾಲೇಜಿನ ಬಾಲಕಿಯರ ಜೊತೆ ನಿರಂತರವಾಗಿ ಅಸಭ್ಯವಾಗಿ ವರ್ತಿಸುತ್ತಿದ್ದ ವಿಷಯವನ್ನು ನನ್ನ ಮಗಳು ನನ್ನ ಬಳಿ ತಿಳಿಸಿದ್ದಳು. ಪಾಠ ಮಾಡುವ ನೆಪದಲ್ಲಿ ವಿದ್ಯಾರ್ಥಿನಿಯರ ಖಾಸಗಿ ಅಂಗಗಳನ್ನು ಮುಟ್ಟಿ ಕಿರುಕುಳ ನೀಡುತ್ತಿದ್ದಲ್ಲದೆ, ಬಟ್ಟೆ ಹಿಡಿದು ಎಳೆದಾಡಿ "ಬೇಬಿ, ಡಾರ್ಲಿಂಗ್ ನನ್ನ ಇಷ್ಟಪಡ್ತೀಯಾ?" ಎಂದು ಲೈಂಗಿಕವಾಗಿ ಪೀಡಿಸುತ್ತಿದ್ದ.

ಕಾಲೇಜಿನಲ್ಲಿ ಎಲ್ಲರೂ ಹೋದ ನಂತರ "ನೀನು ಒಬ್ಬಳೇ ರೂಮ್‌ನಲ್ಲಿ ಇರು" ಎಂದು ಬಾಲಕಿಗೆ ಒತ್ತಾಯಿಸುತ್ತಿದ್ದ. ಇದೇ ರೀತಿ ಕಾಲೇಜಿನ ಇತರ ಬಾಲಕಿಯರ ಮೇಲೂ ಆತ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ದ್ಯಾರ್ಥಿನಿಯರ ಭವಿಷ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಉಪನ್ಯಾಸಕ ಮಲ್ಲಿಕಾರ್ಜುನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಯಿ ದೂರಿನಲ್ಲಿ ಆಗ್ರಹಿಸಿದ್ದಾರೆ.