ಚುನಾವಣೆಗೆ ಮುಹೂರ್ತ ಫಿಕ್ಸ್‌: ರಂಗೇರಿದ ಬಂಗಾರಪೇಟೆ ಅಖಾಡ

ವಿಧಾನಸಭೆ ಚುನಾವಣೆಗೆ ಅಖಾಡ ಸಿದ್ದವಾಗುತ್ತಿದ್ದಂತೆ ಇತ್ತ ಕ್ಷೇತ್ರದಲ್ಲಿ ಚುನಾವಣೆ ದಿನಾಂಕಕ್ಕಾಗಿ ಎದುರು ನೋಡುತ್ತಿದ್ದ ಅಭ್ಯರ್ಥಿಗಳಲ್ಲಿ ವಿದ್ಯುತ್‌ ಸಂಚಾರ ಉಂಟಾಗಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದೆ.

 Date Fix for Election Rangerida Bangarpet Akhada snr

 ರಮೇಶ್‌ ಎಸ್‌.

 ಬಂಗಾರಪೇಟೆ :  ವಿಧಾನಸಭೆ ಚುನಾವಣೆಗೆ ಅಖಾಡ ಸಿದ್ದವಾಗುತ್ತಿದ್ದಂತೆ ಇತ್ತ ಕ್ಷೇತ್ರದಲ್ಲಿ ಚುನಾವಣೆ ದಿನಾಂಕಕ್ಕಾಗಿ ಎದುರು ನೋಡುತ್ತಿದ್ದ ಅಭ್ಯರ್ಥಿಗಳಲ್ಲಿ ವಿದ್ಯುತ್‌ ಸಂಚಾರ ಉಂಟಾಗಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದೆ.

ಕಳೆದ ಮೂರು ತಿಂಗಳಿಂದ ಚುನಾವಣೆಗಾಗಿ ರಾಜಕೀಯ ಪಕ್ಷಗಳು ಮೈಕೊಡವಿ ನಿಂತಿತ್ತು,ಈಗ ಮೇ 10 ಚುನಾವಣೆ ನಡೆಸಲು ದಿನಾಂಕ ಘೋಷಣೆಯಾಗುತ್ತಿದ್ದಂತೆ ಮತ್ತಷ್ಟಕಾರ‍್ಯಚಟುವಟಿಗೆಳು ಪಕ್ಷಗಳಲ್ಲಿ ಬಿರುಸಾಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವುದರಿಂದ ಚುನಾವಣೆ ಎದುರಿಸಲು ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಆಯ್ಕೆ ಗೊಂದಲ

ಆದರೆ ಆಡಳಿತ ರೂಡ ಬಿಜೆಪಿಯಲ್ಲಿ ಅಭ್ಯರ್ಥಿ ಘೋಷಣೆ ವಿಳಂಬದಿಂದ ಹಾಗೂ ಮೂವರು ಟಿಕೆಟ್‌ ಆಕಾಂಕ್ಷಿಗಳು ಇರುವುದು ಹೈಕಮಾಂಡ್‌ಗೆ ತಲೆ ಬಿಸಿಯಾಗಿದೆ. ನಾಲ್ಕು ಬಾರಿ ಶಾಸಕರಾಗಿದ್ದ ಎಂ.ನಾರಾಯಣಸ್ವಾಮಿ ಮತ್ತೊಬ್ಬ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಅವರ ಪುತ್ರ ಜಿಪಂ ಮಾಜಿ ಸದಸ್ಯ ಬಿ.ವಿ.ಮಹೇಶ್‌ ಹಾಗೂ ಸಮಾಜ ಸೇವಕ ವಿ.ಶೇಷು ಟಿಕೆಟ್‌ಗಾಗಿ ಪ್ರಬಲ ಲಾಬಿ ನಡೆಸಿದ್ದಾರೆ. ಒಬ್ಬರ ಹೆಸರನ್ನು ಘೋಷಣೆ ಮಾಡಿದರೆ ಇಬ್ಬರು ಮುನಿಸಿಕೊಂಡರೆ ಹೇಗೆ ಎಂಬ ಲೆಕ್ಕಾಚಾರದಲ್ಲಿ ಪಕ್ಷ ತೊಡಗಿದೆ. ಮೂವರು ಟಿಕೆಟ್‌ ಆಕಾಕ್ಷಿಂಗಳು ತಮ್ಮಲ್ಲಿ ಯಾರಿಗೇ ಟಿಕೆಟ್‌ ನೀಡಿದರೂ ಬಂಡಾಯವಿಲ್ಲದೆ ಒಗ್ಗಟ್ಟಾಗಿ ಪಕ್ಷಕ್ಕಾಗಿ ಶ್ರಮಿಸಲು ದೇವರ ಮೇಲೆ ಪ್ರಮಾಣ ಸಹ ಮಾಡಿದ್ದಾರೆ. ಆದರೂ ಹೈಕಮಾಂಡ್‌ ಅಭ್ಯರ್ಥಿ ಯಾರೆಂದು ಗುಟ್ಟುಬಿಟ್ಟುಕೊಟ್ಟಿಲ್ಲ.

ಮೂವರು ಟಿಕೆಟ್‌ ಆಕಾಂಕ್ಷಿಗಳು ಪ್ರತ್ಯೇಕವಾಗಿ ಪ್ರಚಾರ ಮಾಡದೆ ಒಂದಾಗಿಯೂ ಎಲ್ಲಿಯೂ ಕಾಣಿಸಿಕೊಳ್ಳದೆ ಬರೀ ರಾಜ್ಯ ನಾಯಕರು ಕ್ಷೇತ್ರಕ್ಕೆ ಭೇಟಿಯ ಸಮಯದಲ್ಲಿ ಮಾತ್ರ ಕಾಣಿಸಿಕೊತ್ತಿದ್ದಾರೆ. ಇದರಿಂದ ಪಕ್ಷದ ಕಾರ‍್ಯಕರ್ತರಿಗೆ ನಾಯಕರ ಮೇಲೆ ಅಸಮಾಧಾನ ಮೂಡುವಂತಾಗಿದೆ. ಈಗಾಗಲೇ ಚುನಾವಣೆಗೆ ಮುರ್ಹೂತ ನಿಗದಿಯಾಗುವುದಕ್ಕೆ ಮೊದಲೇ ಒಂದು ಸುತ್ತಿನ ಪ್ರಚಾರವನ್ನು ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳು ಮುಗಿಸಿದ್ದಾರೆ. ಆದರೆ ಬಿಜೆಪಿ ಮಾತ್ರ ಎಲ್ಲಿಯೂ ಅಷ್ಟಾಗಿ ಪ್ರಚಾರದಲ್ಲಿ ತೊಡಗಿಲ್ಲ.

ಕಾಂಗ್ರೆಸ್‌ಗೆ ಎದುರಾಳಿ ಜೆಡಿಎಸ್‌

ಮತ್ತೊಂದು ಕಡೆ ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಬಂಗಾರಪೇಟೆ ಕ್ಷೇತ್ರವನ್ನು ಛಿದ್ರ ಮಾಡಿ ಕಮಲ ಅರಳಿಸಲು ಬಿಜೆಪಿ ಸಂಕಲ್ಪ ಮಾಡಿದೆ. ಆದರೆ ಅಭ್ಯರ್ಥಿಯನ್ನು ಮಾತ್ರ ಘೋಷಿಸಿಲ್ಲ. ಮೂರನೇ ಬಾರಿ ಹ್ಯಾಟ್ರಿಕ್‌ ಗೆಲುವಿಗಾಗಿ ಚಡಪಡಿಸುತ್ತಿರುವ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿಯನ್ನು ಮಣಿಸುವ ಸಮರ್ಥ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ನಡೆಸಿದೆ. ಕಳೆದ ಬಾರಿ ಅಲ್ಪ ಮತಗಳಿಂದ ಸೋತಿದ್ದ ಜೆಡಿಎಸ್‌ ಅಭ್ಯರ್ಥಿ ಎಂ.ಮಲ್ಲೇಶಬಾಬು ಸಹ ಈ ಬಾರಿ ಪ್ರಬಲ ಪೈಪೋಟಿ ನೀಡಲು ಮುಂದಾಗಿದ್ದಾರೆ. ಜನತಾಜಲಧಾರೆ, ಪಂಚರತ್ನ ಯಾತ್ರೆ ಮೂಲಕ ಹಾಗೂ ಮನೆ ಮನೆಗೂ ಮಲ್ಲೇಶಣ್ಣ ಎಂಬ ಕಾರ‍್ಯಕ್ರಮ ಮೂಲಕ ಮತದಾರರನ್ನು ಭೇಟಿಯಾಗಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಹವಾ ಕಾಣಿಸಿಕೊಂಡರೂ ಅಭ್ಯರ್ಥಿ ಯಾರೆಂಬುದೇ ನಿರ್ಧಾರವಾಗದಿರುವುದು ಪ್ರಚಾರಕ್ಕೆ ಅಡ್ಡಿಯಾಗಿದೆ.

Latest Videos
Follow Us:
Download App:
  • android
  • ios