ಬಾಗಲಕೋಟೆ(ಡಿ.16):ಹಿಡಿದ ಹಾವಿನೊಂದಿಗೆ ಆಟವಾಡುತ್ತಿದ್ದ ವೇಳೆ ಅದೇ ಹಾವು ಕಚ್ಚಿ ಉರಗ ತಜ್ಞನೊಬ್ಬ ಸಾವನ್ನಪ್ಪಿದ ಘಟನೆ ಬಾಗಲಕೋಟೆಯಲ್ಲಿ ಮಂಗಳವಾರ ನಡೆದಿದೆ.

"

ಬಾಗಲಕೋಟೆಯ ಉರಗ ತಜ್ಞ ಡ್ಯಾನಿಯಲ್‌ ನ್ಯೂಟನ್‌ (42) ಸಾವನ್ನಪ್ಪಿದ ಉರಗ ತಜ್ಞ. ಸಾವಿರಾರು ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುತ್ತಿದ್ದ ಡ್ಯಾನಿಯಲ್‌ ನ್ಯೂಟನ್‌ ಮಂಗಳವಾರವೂ ಬಾಗಲಕೋಟೆ ಸಮೀಪದ ಶಿಕ್ಕೇರಿ ಗ್ರಾಮದ ಬಳಿ ಬೆಳಗ್ಗೆ 11 ಗಂಟೆಗೆ ಹೊಲವೊಂದರಲ್ಲಿ ಕಂಡ ನಾಗರಹಾವು ಹಿಡಿಯಲು ಕೇಳಿಕೊಂಡಾಗ ತಕ್ಷಣವೇ ತೆರಳಿ ನಾಗರಹಾವನ್ನು ಹಿಡಿದು ಹೊರಬಂದಿದ್ದಾನೆ. ಈ ಸಂದರ್ಭದಲ್ಲಿ ಎಂದಿನಂತೆ ಹಾವಿನ ಜೊತೆ ಆಟವಾಡಲು ಮುಂದಾದಾಗ ವಿಷಕಾರಿ ಹಾವು ಕಚ್ಚಿದೆ. ತಕ್ಷಣವೇ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ 12 ಗಂಟೆಗೆ ಸಾವನ್ನಪ್ಪಿದ್ದಾನೆ.

ಸಾವು ಗೆದ್ದಿದ್ದ ಡ್ಯಾನಿಯಲ್‌:

ಕಳೆದ ವರ್ಷ ಇದೇ ಸಂದರ್ಭದಲ್ಲಿ ವಿಷಕಾರಿ ಹಾವು ಕಚ್ಚಿಸಿಕೊಂಡು ಸಾವು ಬದುಕಿನಲ್ಲಿ ಕಾಲಕಳೆದ ಸಾವನ್ನು ಗೆದ್ದು ಮತ್ತೆ ಉರಗಗಳ ರಕ್ಷಣೆಗೆ ಮುಂದಾಗಿದ್ದ ಡ್ಯಾನಿಯಲ್‌ ನ್ಯೂಟನ್‌ ಈ ಬಾರಿ ಸಾವನ್ನು ಗೆಲ್ಲಲು ವಿಧಿ ಅವಕಾಶ ನೀಡಲಿಲ್ಲ. ಕಳೆದ ಬಾರಿ ಹಾವು ಕಡಿದಾಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದು ಮರುಜೀವ ಪಡೆದಿದ್ದ ಉರಗ ಪ್ರೇಮಿ ಅದೇ ವಿಷಕಾರಿ ಹಾವಿನಿಂದ ಸಾವನ್ನಪ್ಪಿರುವುದು ನಿಜಕ್ಕೂ ದುರಂತವೇ ಸರಿ.

ಹಾವು ಕಚ್ಚಿಸಿಕೊಂಡು ಸಾವು ಗೆದ್ದು ಬಂದ ಡ್ಯಾನಿಯಿಂದ ಮತ್ತೇ ಶುರುವಾಯ್ತು ಉರಗ ರಕ್ಷಣೆ‌

ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದ್ದ:

ಉರಗ ತಜ್ಞರಿಗೆ ಕನಿಷ್ಠ ಸೌಲಭ್ಯ ಹಾಗೂ ಭದ್ರತೆ ಇಲ್ಲ ಎಂದು ಅಸಮಾಧಾನಗೊಂಡು 2019ರ ಸೆಪ್ಟೆಂಬರ್‌ 9ರಂದು ಡ್ಯಾನಿಯಲ್‌ ನ್ಯೂಟನ್‌ ಬಾಗಲಕೋಟೆ ಜಿಲ್ಲಾ​ಧಿಕಾರಿಗಳ ಕಚೇರಿ ಎದುರು ಆಗತಾನೆ ಹಿಡಿದ ಹಾವುಗಳೊಂದಿಗೆ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದ. ಸೋಮವಾರ ಇಡೀ ದಿನ ನಗರದಲ್ಲಿ 8 ವಿವಿಧ ಜಾತಿಯ ಹಾವುಗಳನ್ನು ಬೇರೆ ಬೇರೆ ಮನೆಗಳಲ್ಲಿ ಹಿಡಿದು ಆಯಾ ಕುಟುಂಬಗಳಲ್ಲಿನ ಭೀತಿ ನಿವಾರಣೆ ಮಾಡಿದ್ದ ಡ್ಯಾನಿಯಲ್‌.

ದೇಹದಾನ ಮಾಡಿದ್ದ ಡ್ಯಾನಿಯಲ್‌:

ಸಾವಿನ ಜೊತೆ ಸರಸವಾಡುತ್ತಿದ್ದ ಡ್ಯಾನಿಯಲ್‌ ನ್ಯೂಟನ್‌ ತನ್ನ ಸಾವಿನ ನಂತರ ದೇಹವು ಸಹ ಮಣ್ಣಾಗಬಾರದು ಎಂಬ ಉದ್ದೇಶದಿಂದ ಬಾಗಲಕೋಟೆಯ ಎಸ್‌.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತನ್ನ ದೇಹವನ್ನು ನೀಡಲು ವಾಗ್ದಾನ ಮಾಡಿದ್ದ. ಆದರೆ ಕೊರೋನಾ ಹಾಗೂ ವಿಷಪೂರಿತ ಹಾವಿನಿಂದ ಸಾವಿಗೀಡಾದ ಕಾರಣಕ್ಕೆ ಕೆಲವು ನಿರ್ಭಂಧಗಳ ಹಿನ್ನೆಲೆಯಲ್ಲಿ ಡ್ಯಾನಿಯಲ್‌ ನ್ಯೂಟನ್‌ನ ದೇಹವನ್ನು ವೈದ್ಯಕೀಯ ಮಹಾವಿದ್ಯಾಲಯ ಸ್ವೀಕರಿಸಲು ಅಸಹಾಯಕವಾಗಿದ್ದರಿಂದ ನವನಗರದ ಕ್ರಿಶ್ಚಿಯನ್‌ ರುದ್ರಭೂಮಿಯಲ್ಲಿ ಡಿ.16ರಂದು ಅಂತ್ಯಕ್ರಿಯೆ ನಡೆಯಲಿದೆ.

ಇತ್ತೀಚಿಗಷ್ಟೇ ಮದುವೆಯಾಗಿತ್ತು

ವಯಸ್ಸು 40 ದಾಟಿದ್ದರೂ ಮದುವೆಯಾಗದೆ ಏಕಾಂಗಿ ಜೀವನದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿದ್ದ ಡ್ಯಾನಿಯಲ್‌ ನ್ಯೂಟನ್‌ ಇತ್ತೀಚಿಗಷ್ಟೇ ಪ್ರೀತಿಸಿದ್ದ ಹುಡುಗಿಯನ್ನು ಮದುವೆಯಾಗಿದ್ದ. ನೆಮ್ಮದಿಯ ದಾಂಪತ್ಯ ಜೀವನ ನಡೆಸುತ್ತಿದ್ದನಾದರೂ ಉರಗ ಪ್ರೇಮ ಮಾತ್ರ ಬಿಟ್ಟಿರಲಿಲ್ಲ. ಎಷ್ಟೇ ಒತ್ತಡದಲ್ಲಿದ್ದರೂ ಉರಗಗಳ ರಕ್ಷಣೆಯಲ್ಲಿ ತೃಪ್ತಿ ಕಾಣುತ್ತಿದ್ದ ಡ್ಯಾನಿಯಲ್‌ ತಾನು ಹಿಡಿದ ಹತ್ತಾರು ಜಾತಿಯ ಉರಗಗಳ ಜೊತೆ ವಿಭಿನ್ನವಾಗಿ ಆಟವಾಡುವುದೇ ಅವನ ಸಾವಿಗೆ ಕಾರಣವಾಯಿತಲ್ಲ ಎಂಬುವುದೇ ದುರಂತ. ಸಾವಿನ ವಿಷಯ ಕೇಳಿ ಆತನ ಪತ್ನಿಯ ಆಕ್ರಂದನ ಕೂಡ ಮುಗಿಲುಮುಟ್ಟಿತ್ತು.