Asianet Suvarna News Asianet Suvarna News

ಅಧಿಕಾರಿಗಳೇ ಕಳೆದುಹೋದ ಕಾಡಿನಲ್ಲಿ ಮಕ್ಕಳಿಗೇಕೆ 16 ಕಿ.ಮಿ ನಡೆಯುವ ಶಿಕ್ಷೆ?

ಕಗ್ಗತ್ತಲ ಕಾಡು, ಜಿಟಿ ಜಿಟಿ ಮಳೆ, ಎಷ್ಟುಕೂಗಿದರೂ ಅರಣ್ಯರೋದನ.. ಅದು ಕೈಗಾ ಸಮೀಪದ ದಟ್ಟಕಾನನ. ಎರಡು ವಾರಗಳ ಹಿಂದೆ ಇಬ್ಬರು ಅಧಿಕಾರಿಗಳು ಆ ಕಾಡಲ್ಲಿ ಸಿಕ್ಕಿಹಾಕಿಕೊಂಡಾಗ ಒಂದಿಷ್ಟುಸುದ್ದಿಯಾಯ್ತು. ಕೈಗಾ, ಕದಂಬ ನೌಕಾ ನೆಲೆಗೆ ಸಮೀಪದಲ್ಲಿರುವ ಆ ಕಾಡು ಹೇಗಿದೆ, ಇಲ್ಲಿ ಕಳೆದುಹೋದವರು ಅದೆಷ್ಟುಮಂದಿ..

Dangerous forest in between Karwar Ankola yellapur disturbs villagers lifestyle
Author
Bangalore, First Published Sep 17, 2019, 9:39 AM IST

ವಸಂತಕುಮಾರ್‌ ಕತಗಾಲ

‘ಸಂಜೆ ಐದೂವರೆ ಆಗುತ್ತಿದ್ದ ಹಾಗೇ ಕಾಡಲ್ಲಿ ಕತ್ತಲಾವರಿಸತೊಡಗಿತು. ಏನೂ ಕಾಣುತ್ತಿರಲಿಲ್ಲ. ಜೋರಾಗಿ ಸುರಿಯುವ ಮಳೆ, ಭೋರ್ಗರೆಯುತ್ತಿದ್ದ ಹಳ್ಳ. ಕಾಡಲ್ಲಿ ಪ್ರಾಣಿ, ಪಕ್ಷಿಗಳ ಚೀರಾಟದ ದನಿಯಷ್ಟೇ.. ರಕ್ತ ಹೀರುತ್ತಿದ್ದ ಜಿಗಣೆ, ಹಸಿಯುತ್ತಿದ್ದ ಹೊಟ್ಟೆ, ವಿಲಕ್ಷಣ ಭಯ..’

ಕಾರವಾರದ ಡಿವೈಎಸ್ಪಿ ಶಂಕರ ಮಾರಿಹಾಳ ಪತ್ರಕರ್ತರಿಗೆ ಆ ಘಟನೆ ವಿವರಿಸುತ್ತಿದ್ದ ರೀತಿಯಲ್ಲೇ ಕೈಗಾದ ಸಮೀಪದ ಆ ಕಾಡಿನ ಭಯಾನಕತೆ ಕಣ್ಣೆದುರಿಗೆ ಬರುತ್ತಿತ್ತು. ಆ ಬಗ್ಗೆ ಇನ್ನಷ್ಟುಮಾಹಿತಿ ಕಲೆಹಾಕಿದಾಗ ಈ ಕಾಡಿನ ಸಮೀಪದ ಊರುಗಳು, ಅಲ್ಲಿನ ಜನರ ಬದುಕು, ಕಷ್ಟಗಳ ಮತ್ತೊಂದು ಸರಮಾಲೆಯೇ ತೆರೆದುಕೊಂಡಿತು.

Dangerous forest in between Karwar Ankola yellapur disturbs villagers lifestyle

ದುರ್ಗಮ ಅರಣ್ಯ

ಈ ಅಡವಿ ಕಾರವಾರ, ಅಂಕೋಲಾ ಹಾಗೂ ಯಲ್ಲಾಪುರ ಈ ಮೂರೂ ತಾಲೂಕುಗಳ ಗಡಿ ಪ್ರದೇಶದಲ್ಲಿದೆ. ಸುಮಾರು 40-50 ಚ.ಕಿ.ಮೀ.ವಿಸ್ತಾರವಾದ ಕಾಡು. ಈ ಅರಣ್ಯಕ್ಕೆ ಒಂದು ನಿರ್ದಿಷ್ಟವಾದ ಹೆಸರಿಲ್ಲ. ಇದು ಹಾದುಹೋಗುವ ಊರಿನ ಹೆಸರಿನೊಂದಿಗೆ ಕಾಡು ಗುರುತಿಸಿಕೊಳ್ಳುತ್ತದೆ. ಇಲ್ಲಿನ ಕಾಡು ಯಾರಿಗಾದರೂ ದಿಕ್ಕು ತಪ್ಪಿಸುತ್ತೆ. ಎಲ್ಲಿ ನೋಡಿದರೂ ಒಂದೇ ರೀತಿಯ ಭೂಪ್ರದೇಶ, ದಟ್ಟವಾಗಿ ಆವರಿಸಿ ಮರಗಳು, ಪೊದೆಗಳು, ಅಲ್ಲಲ್ಲಿ ಝರಿಗಳು. ಎಲ್ಲಿದ್ದೇವೆ, ಎಲ್ಲಿ ಹೋಗುತ್ತಿದ್ದೇವೆ ಎಂದೂ ಗೊತ್ತಾಗದಂತಹ ದುರ್ಗಮ ಅರಣ್ಯ.

ಕಾಡಲ್ಲಿ ಕಾಣೆಯಾದವರ ಕಥೆ

- ಲಕ್ಕೆಮನೆಯ ಪರಮೇಶ್ವರ ಭಟ್‌ ಅವರ ಮಗ ಹರ್ಷಹಾಗೂ ಸಾಂಬ ಶಿವಭಟ್ಟರ ಮಗ ವೆಂಕಟ್ರಮಣ ಹದಿಹರೆಯದ ಯುವಕರು. ಒಟ್ಟೂ15 ಯುವಕರಿದ್ದ ತಂಡ 4-5 ಕಿ.ಮೀ.ದೂರದ ಕಾಡಿನಲ್ಲಿದ್ದ ಸೂರ್ಯಕಲ್ಯಾಣಿ ಗುಡ್ಡದತ್ತ ತೆರಳಿತು. ಅಲ್ಲಿನ ಸೂರ್ಯಾಸ್ತದ ಸೊಬಗನ್ನು ಸವಿದು ಮರಳುವಾಗ ಹರ್ಷ ಮತ್ತು ವೆಂಕಟ್ರಮಣ ಹತ್ತಿರದ ದಾರಿಯಲ್ಲಿ ಹೋಗೋಣ ಎಂದು ಭಾವಿಸಿ ಉಳಿದವರಿಗಿಂತ ಬೇರೆ ದಾರಿಯಲ್ಲಿ ಸಾಗಿದರು. ಆದರೆ ಎಲ್ಲರೂ ಮರಳಿದರೂ ಇವರು ಬರಲಿಲ್ಲ.

ಊರಿನಲ್ಲಿ ಗದ್ದಲವೋ ಗದ್ದಲ. ನೂರಾರು ಜನರು ಸೇರಿ ತೆಂಗಿನಗರಿಯ ಸೂಡಿಯನ್ನು ಹಿಡಿದು ರಾತ್ರಿಯಿಡೀ ಕಾಡಿನಲ್ಲೆಲ್ಲ ಜಾಲಾಡಿದರೂ ಪತ್ತೆಯಾಗಲಿಲ್ಲ. ಕೆಲವರು ಆಯಾಸಗೊಂಡು ಸುಸ್ತಾಗಿ ಗುಡ್ಡದಲ್ಲೆ ಮಲಗಿದರು. ನಸುಕಿನಲ್ಲಿ ಅಂಕೋಲಾ ತಾಲೂಕಿನ ಸುಂಕಸಾಳದ ಕಂಟ ಎಂಬಲ್ಲಿ ಸೊಪ್ಪು ತರಲು ಬಂದವರಿಗೆ ಕ್ಷೀಣ ಧ್ವನಿಯೊಂದು ಕೇಳಿತು. ಹೋಗಿ ನೋಡಿದರೆ ಇಬ್ಬರು ಯುವಕರು ಬಸವಳಿದು ಬಿದ್ದಿದ್ದರು. ನಂತರ ಅವರನ್ನು ಹೊತ್ತು ತರಲಾಯಿತು. ಅವರಿಬ್ಬರೂ ಊರಿನ ದಾರಿ ತಿಳಿಯದೆ ಕಗ್ಗತ್ತಲಿನಲ್ಲಿ ಸುಮಾರು 20-25 ಕಿ.ಮೀ.ಅಲೆದಾಡಿದ್ದರು.

- ಲಕ್ಕೆಮನೆ ಸಮೀಪದ ಕುಣಬಿ ಮಹಿಳೆ ಕಾಡಿಗೆ ಹೋದವಳು ನಾಪತ್ತೆಯಾಗಿದ್ದಳು. ರಾತ್ರಿಯಿಡೀ ಊರವರು ಸೇರಿ ಹುಡುಕಾಡಿದಾಗ ನಸುಕಿನಲ್ಲಿ ಏಕಾಂಗಿಯಾಗಿ ದಾರಿಯನ್ನು ಹುಡುಕಾಡುತ್ತಿದ್ದಾಗ ಪತ್ತೆಯಾಗಿತ್ತು.

Dangerous forest in between Karwar Ankola yellapur disturbs villagers lifestyle

ಇಂತಹ ಕೆಲವು ಉದಾಹರಣೆಗಳು ಅಲ್ಲಿ ಸಿಗುತ್ತವೆ. ಊರಿನವರೆ ನಾಲ್ಕು ಹೆಜ್ಜೆ ಆಚೀಚೆ ಇಟ್ಟರೆ ನಾಪತ್ತೆಯಾಗುವಂತಹ ದಟ್ಟಡವಿ. ಹಾಗಿರುವಾಗ ಅಪರೂಪಕ್ಕೆ ಬಂದ ಡಿಎಸ್ಪಿ ಶಂಕರ ಮಾರಿಹಾಳ ಹಾಗೂ ಗುಪ್ತದಳದ ಇನ್ಸಫೆಕ್ಟರ್‌ ರವಿ ದಾರಿ ತಪ್ಪಿ ನಾಪತ್ತೆಯಾಗಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಈ ಅಧಿಕಾರಿಗಳೂ ಕೂಡ ಪತ್ತೆಯಾಗಿದ್ದು ಮರುದಿನ ನಸುಕಿನಲ್ಲೆ.

16 ಕಿಮೀ ನಡೆದು ಶಾಲೆಗೆ ಹೋಗುವ ಮಕ್ಕಳು

ಎಲ್ಲಕ್ಕಿಂತ ಮುಖ್ಯ ಅನಿಸೋದು ಈ ಕಾಡಿನ ನಡುವೆ ಇರುವ ಊರಿನ ಮಕ್ಕಳು ಕತೆ. ಸುಮಾರು 15 ಜನ ಶಾಲೆಗೆ ಹೋಗುವ ಮಕ್ಕಳು ಇಲ್ಲಿದ್ದಾರೆ. ದಿನಕ್ಕೆ 16 ಕಿಲೋಮೀಟರ್‌ ನಡೆದು ಈ ಮಕ್ಕಳು ಶಾಲೆಗೆ ಹೋಗಿ ಬರಬೇಕು. ನಮ್ಮ ಮಕ್ಕಳೆಲ್ಲ ಬೆಚ್ಚಗೆ ಮಲಗಿರುವಾಗ ಅಂದರೆ ಮುಂಜಾವ ನಾಲ್ಕೂವರೆ ಐದು ಗಂಟೆಗೆಲ್ಲ ಚಾಪೆ ಬಿಟ್ಟೇಳುತ್ತಾರೆ. ಚಳಿ ಇರಲಿ, ಮಳೆ ಇರಲಿ ಈ ಮಕ್ಕಳು ದಿನಚರಿಯಲ್ಲಿ ವ್ಯತ್ಯಾಸವಾಗಲ್ಲ. ಇನ್ನೂ ಸರಿಯಾಗಿ ಬೆಳಕು ಹರಿಯದ ನಸುಕಿನ ಆರು ಗಂಟೆಗೆಲ್ಲ ಪಾಟಿಚೀಲ ಹೆಗಲಿಗೇರಿಸಿ ನಡೆಯತೊಡಗುತ್ತಾರೆ. ಶಾಲೆ ಮುಗಿಸಿ ಮತ್ತೆ ಮನೆಗೆ ಬರುವಾಗ ರಾತ್ರಿ 7.30. ಕೈಗಾದಿಂದ ಇಂಥ ಊರುಗಳಿಗೆ ‘ವಿದ್ಯಾವಾಹಿನಿ’ ಎಂಬ ವಾಹನ ಸೌಲಭ್ಯವಿದ್ದರೂ, ಈ ಊರಿಗೆ ರಸ್ತೆಯೇ ಇಲ್ಲದ ಕಾರಣ ವಾಹನ ಬರುವುದು ದೂರದ ಮಾತು.

ಜನರ ದುಃಸ್ಥಿತಿ

Dangerous forest in between Karwar Ankola yellapur disturbs villagers lifestyle

ಈ ಕಾಡಿನ ನಡುವೆ ಅಲ್ಲೊಂದು ಇಲ್ಲೊಂದು ಕಡೆ ನಾಲ್ಕಾರು ಮನೆಗಳಿರುವ ಊರು. ಶಮೆಗುಳೆ, ಮರಳ್ಳಿ, ಶೇಡಿಗುಳೆ, ತಮ್ಮಾಣಿ, ಬಂಕಳ್ಳಿ, ಜೇನುಗುಳೆ, ತೊಪ್ಪಿನ ಗುಳೆ ಹೀಗೆ. ಇಲ್ಲಿನವರಿಗೆ ಯಾವ ಸೌಲಭ್ಯವೂ ಇಲ್ಲ. ರಸ್ತೆಯೇ ಇಲ್ಲ. ಅಲ್ಲೊಂದು ಇಲ್ಲೊಂದು ವಿದ್ಯುತ್‌ ಕಂಬ ಕಾಣಿಸುವುದಾದರೂ ಕರೆಂಟಂತೂ ಬೆಳಗುತ್ತಿಲ್ಲ. ಚಿಮಣಿ ದೀಪದ ಕಮಟಿನಲ್ಲೆ ರಾತ್ರಿ ಕಳೆಯಬೇಕು. ಶಾಲೆಗಂತೂ ಹೆಜ್ಜೆ ಹಾಕಿ ಬಸವಳಿಯುತ್ತಾರೆ. ಸರ್ಕಾರಿ ಬಸ್ಸು ನೋಡಬೇಕೆಂದರೆ ಹತ್ತಾರು ಕಿ.ಮೀ.ದೂರದ ಬಾರೆ ಅಥವಾ ಮಲವಳ್ಳಿಗೆ ಹೋಗಬೇಕು. ಕಿಸೆಯಲ್ಲಿ 500 ರು. ಗರಿಗರಿ ನೋಟು ಇದ್ದರೂ ಪ್ರಯೋಜನ ಇಲ್ಲ. ಏಕೆಂದರೆ ಖರ್ಚು ಮಾಡುವ ಅವಕಾಶವೇ ಇಲ್ಲ. ಶತಮಾನದ ಹಿಂದಿನ ಬದುಕು ಇವರದ್ದು. ಅಷ್ಟಕ್ಕೂ ಇಂತಹ ಪ್ರದೇಶದಲ್ಲಿ ವಾಸಿಸುತ್ತಿರುವವರು ಬುಡಕಟ್ಟು ಜನಾಂಗವಾದ ಕುಣಬಿ ಹಾಗೂ ಕರೆ ಒಕ್ಕಲಿಗರೇ ಹೆಚ್ಚು. ಬಡತನ, ಅಮಾಯಕತೆಯೆ ಇವರಿಗೆ ಶಾಪವಾಗಿದೆ.

ಕಾಡು ಪ್ರಾಣಿಗಳ ಜೊತೆ ಬದುಕಿ ಬಂದವರು

ನಾಡಿನೆಲ್ಲೆಡೆ ಸಂಕ್ರಾಂತಿಯನ್ನು ಸಡಗರದಿಂದ ಆಚರಿಸುತ್ತಿದ್ದರೆ ಇಲ್ಲಿನ ಜನ ಅದನ್ನು ಕರಡಿ ಸಂಕ್ರಾಂತಿ ಎಂದು ಆಚರಿಸುತ್ತಾರೆ. ಮೈಗೆಲ್ಲ ಹುಲ್ಲು ಕಟ್ಟಿಕೊಂಡು ಕರಡಿಯಂತೆ ವೇಷ ಧರಿಸಿ ಪೂಜಿಸುತ್ತಾರೆ. ಇದಕ್ಕೆ ಕಾರಣ ಕೇಳಿದರೆ ತಬ್ಬಿಬ್ಬುಗೊಳ್ಳುತ್ತೇವೆ. ಈ ಪ್ರದೇಶದಲ್ಲಿ ಕರಡಿಗಳು ಸಾಕಷ್ಟುಸಂಖ್ಯೆಯಲ್ಲಿವೆ. ಕರಡಿಗಳು ಮನುಷ್ಯರ ಮೇಲೆ ಎರಗುವುದು ಸಾಮಾನ್ಯ. ಮಾರಣಾಂತಿಕವಾಗಿ ಗಾಯಗೊಂಡವರು, ಕರಡಿಯೊಂದಿಗೆ ಹೋರಾಡಿ ಗೆದ್ದವರು ಇಲ್ಲಿದ್ದಾರೆ. ತಮ್ಮಾಣಿಯ ಷಣ್ಮುಖ ಗಾಂವಕರ ಕರಡಿ ತಮ್ಮ ಮೇಲೆ ನಡೆಸಿದ ದಾಳಿಯ ವಿವರಗಳನ್ನು ಬಿಚ್ಚಿಡುತ್ತಾರೆ. ಕರಡಿಗಳಿಂದ ಕೇಡಾಗದಿರಲಿ ಎಂದು ಕರಡಿಗೇ ಪೂಜೆ ಸಲ್ಲಿಸುತ್ತಾರೆ. ಅದೆ ಕರಡಿ ಸಂಕ್ರಾಂತಿ.

ಅಡವಿಯಲ್ಲಿ ಹೆಜ್ಜೆ ಹಾಕುವಾಗ ಹುಲಿ, ಚಿರತೆ ಹಠಾತ್ತಾಗಿ ಎದುರಿಗೆ ಬಂದರೆ ಥಟ್ಟನೇ ನಿಲ್ಲುತ್ತಾರೆ. ಹುಲಿಯ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾರೆ. ಈ ದೃಷ್ಟಿಯುದ್ಧ ಕೆಲ ನಿಮಿಷಗಳ ತನಕ ಮುಂದುವರಿದಾಗ ಹುಲಿ, ಚಿರತೆ ಕಾಲು ಕೀಳುತ್ತದೆ. ಇಂತಹ ನೈಜ ಕತೆಯನ್ನು ಕೇಳುವುದೆ ಒಂದು ರೋಚಕ ಅನುಭವ. ಇವರಿಗೆ ಆ ಹುಲಿ, ಚಿರತೆಗಳ ಮೇಲೆ ನಂಬಿಕೆ. ಅವೇನೂ ಮಾಡಲಾರವು ಎಂಬ ವಿಶ್ವಾಸ. ಕಾಡುಕೋಣಗಳ ಹಿಂಡಿನಲ್ಲಿ ಸಿಲುಕಿ ನರಳಿದವರಿದ್ದಾರೆ. ಕಾಡು ಹಂದಿಗಳ ದಾಳಿಯಲ್ಲಿ ಬದುಕುಳಿದವರಿದ್ದಾರೆ.

Dangerous forest in between Karwar Ankola yellapur disturbs villagers lifestyle

ಚಿರತೆಯಿಂದ ದಾರಿತಪ್ಪಿಸಿಕೊಂಡರು

ಈ ಪ್ರದೇಶ ಕೈಗಾ ಅಣು ವಿದ್ಯುತ್‌ ಸ್ಥಾವರ ಹಾಗೂ ಐಎನ್‌ಎಸ್‌ ಕದಂಬ ನೌಕಾನೆಲೆಗೆ ಸಮಾನ ಅಂತರದಲ್ಲಿದೆ. ಈ ಸೂಕ್ಷ್ಮ ಪ್ರದೇಶಗಳಿರುವ ಹಿನ್ನೆಲೆಯಲ್ಲಿ ಕಾಡಿನಲ್ಲಿ ಸೆ.1ರಂದು ಕೂಂಬಿಂಗ್‌ ನಡೆಸುತ್ತಿದ್ದ ಕಾರವಾರ ಡಿಎಸ್ಪಿ ಶಂಕರ ಮಾರಿಹಾಳ ಹಾಗೂ ಗುಪ್ತದಳದ ಇನ್ಸಫೆಕ್ಟರ್‌ ರವಿ ಅವರಿಗೆ ಚಿರತೆಯೊಂದು ಎದುರಾಗಿದೆ. ಚಿರತೆಯಿಂದ ತಪ್ಪಿಸಿಕೊಳ್ಳಲು ದಾರಿಬಿಟ್ಟು ಓಡಿದ್ದೆ ಇವರಿಬ್ಬರಿಗೂ ಮುಳುವಾಗಿದೆ. ದಾರಿ ತಪ್ಪಿ ರಾತ್ರಿಯಿಡಿ ಕಾಡಿನಲ್ಲಿ ಅಲೆದಾಡಿದ್ದಾರೆ. ಗುಡ್ಡದ ಮೇಲೆ ಗಡ್ಡಕ್ಕೆ ಕೈಹಚ್ಚಿ ಕುಳಿತಿದ್ದಾರೆ. ರಾತ್ರಿಯಿಡಿ ಇವರಿಗಾಗಿ ಹುಡುಕಾಡಿದರೂ ಪತ್ತೆಯಾಗದೆ ನಸುಕಿನ 6 ಗಂಟೆ ಸುಮಾರಿಗೆ ಪತ್ತೆಯಾಗಿದ್ದಾರೆ.

Follow Us:
Download App:
  • android
  • ios