ಬಂದೂಕು ಭದ್ರತೆಯಲ್ಲಿ ಐವರು ದಲಿತ ಮಹಿಳೆಯರು ಯಾದಗಿರಿ ದೇಗುಲಕ್ಕೆ!
* ಅಸ್ಪೃಶ್ಯತೆಗೆ ಟಾಂಗ್
* ಬಿಗಿ ಭದ್ರತೆ ಯಲ್ಲಿ ಕರೆತಂದು ದರ್ಶನ ಕೊಡಿಸಿದ ಪೊಲೀಸರು
* ಯಾದಗಿರಿಯ ಅಂಬಲೀಹಾಳ್ ಗ್ರಾಮದಲ್ಲಿ ನಡೆದ ಘಟನೆ
ಯಾದಗಿರಿ(ಮೇ.29): ಜಿಲ್ಲೆಯ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬಲೀಹಾಳ್ ಗ್ರಾಮದಲ್ಲಿ ಐವರು ದಲಿತ ಮಹಿಳೆಯರು ಪೊಲೀಸ್ ಬಿಗಿ ಭದ್ರತೆಯಲ್ಲಿ ಆಂಜನೇಯ ದೇವಸ್ಥಾನ ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ.
ದೇವಸ್ಥಾನಕ್ಕೆ ದಲಿತರ ಪ್ರವೇಶ ಮಾಡುವುದಕ್ಕೆ ಪಕ್ಕದ ಹೂವಿನಹಳ್ಳಿ ಗ್ರಾಮದಿಂದ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ಪೊಲೀಸ್ ಜೀಪಿನಲ್ಲಿ, ರೈಫಲ್‌ಗಳ ಬಿಗಿ ಭದ್ರತೆಯೊಂದಿಗೆ ಬಂದು ಐವರು ದಲಿತ ಮಹಿಳೆಯರು ದೇಗುಲ ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ. ಮತ್ತದೇ ಜೀಪಿನಲ್ಲಿ ದಲಿತ ಮಹಿಳೆಯರನ್ನು ಊರಿಗೆ ಕರೆದೊಯ್ದು ಬಿಡಲಾಯಿತು. ಅಂಬಲಿಹಾಳ ಗ್ರಾಮದಲ್ಲೀಗ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವಿದೆ.
ಕುಡಿದ ಮತ್ತಿನಲ್ಲಿ ಪತ್ನಿ, ಅತ್ತೆ ಮೇಲೆ ಮಾರಕಾಸ್ತ್ರಗಳಿಂದ ದಾಳಿ, ಆರೋಪಿ ಅರೆಸ್ಟ್
ಏನಿದು ವಿವಾದ?:
ದಶಕಗಳ ಹಿಂದೆ ಅಂಬಲೀಹಾಳದಲ್ಲಿ ವಾಸವಿದ್ದ ದಲಿತರ ಒಂದು ವರ್ಗದ ಜನ ಪಕ್ಕದ ಹೂವಿನಹಳ್ಳಿಗೆ ತೆರಳಿ ಅಲ್ಲೇ ವಾಸವಿದ್ದರು. ಹಿರೀಕರ ಸಂಪ್ರದಾಯದಂತೆ, ಅಂಬಲೀಹಾಳದ ದೇವಸ್ಥಾನಕ್ಕೆ ಪೂಜೆಗೆ ಆಗಮಿಸುತ್ತಿದ್ದರಾದರೂ ಹೊರಗಡೆಯೇ ಪೂಜೆ ನಡೆಸಿಕೊಂಡು ಹೋಗುತ್ತಿದ್ದರು. ಆದರೆ ಆಂಜನೇಯ ದೇಗುಲದಲ್ಲೇ ಪೂಜೆ ನಡೆಸಲು ಒಂದು ಗುಂಪು ಇತ್ತೀಚೆಗೆ ಬೇಡಿಕೆ ಇಟ್ಟಾಗ ಅಂಬಲೀಹಾಳ ಗ್ರಾಮಸ್ಥರು ನಿರಾಕರಿಸಿದ್ದರು ಎನ್ನಲಾಗಿದೆ.
ದೇಗುಲ ಪ್ರವೇಶಿಸುವ ಪಟ್ಟು ಹೆಚ್ಚಾಗಿ ದಲಿತ ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಶನಿವಾರ ದೇಗುಲದಲ್ಲಿ ಪೂಜೆ ಸಲ್ಲಿಸುವ ಬಗ್ಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆಯೇ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮತ್ತವರ ತಂಡ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿದ್ದರು. ಆದರೂ ಕಲ್ಲು ತೂರಾಟ ಹಾಗೂ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆಯುವ ಸಾಧ್ಯತೆ ಇದ್ದುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಸುಮಾರು 150ಕ್ಕೂ ಹೆಚ್ಚು ಜನ ಪೊಲೀಸರು, 10 ಪಿಎಸೈಗಳು, 7 ಜನ ಸಿಪಿಐಗಳು, ಕೆಎಸ್‌ಆರ್ಪಿ ಪಡೆ, ಒಬ್ಬರು ಡಿವೈಎಸ್ಪಿ ನೇತೃತ್ವದ ಶಸ್ತ್ರಧಾರಿ ತಂಡ ನಿಯೋಜಿತಗೊಂಡಿತ್ತು. ಗ್ರಾಮದ ಕೆಲವು ಮನೆಗಳ ಮೇಲೆ ಕಣ್ಗಾವಲು ಇಡಲು ‘ಸ್ಪೈ ಸೆಂಟ್ರಿ’ (ರೈಫಲ್‌ಧಾರಿ ಪೊಲೀಸ ಪಡೆ) ನಿಯೋಜಿತಗೊಂಡಿತ್ತು.