ಮೈಸೂರು (ಅ.20): ಪ್ರಧಾನಿ ನರೇಂದ್ರ ಮೋದಿ ಅವರು ಮಾತು ನಿಲ್ಲಿಸಿ, ಉದ್ಯೋಗ ಕಲ್ಪಿಸಬೇಕು ಎಂದು ಆಗ್ರಹಿಸಿ ದಲಿತ ವಿದ್ಯಾರ್ಥಿಗಳ ಒಕ್ಕೂಟದವರು ಪಕೋಡ ಮಾರುವ ಮೂಲಕ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟಿಸಿದರು.

ಉದ್ಯೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಅವರು ಯುವ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಲ್ಲದೇ, ಅವರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಉದ್ಯೋಗದ ಬಗ್ಗೆ ಮಾತನಾಡಿದರೆ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಪಕೋಡ ಮಾರುವಂತೆ ಬಿಟ್ಟಿಸಲಹೆ ನೀಡುವ ಮೂಲಕ ಪದವೀಧರರಿಗೆ ಅವಮಾನಿಸುತ್ತಿದ್ದಾರೆ. ಇತ್ತ ರಾಜ್ಯ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್‌ ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆಯೇ ಇಲ್ಲ ಎಂಬ ಬೇಜಾವಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಕೊರೋನಾ; ಪ್ರಧಾನಿ ಮೋದಿ ಕೊಟ್ಟ 'ರಿಕವರಿ' ಮಾಹಿತಿ .

ಕಳೆದ 45 ವರ್ಷಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಪಾರ ನಿರುದ್ಯೋಗ ಸಮಸ್ಯೆ ಸೃಷ್ಟಿಸಿವೆ. ಆದರೆ, ಆ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುತ್ತಿಲ್ಲ. ಪ್ರಧಾನಿ ಮೋದಿಯವರು ಕೇವಲ ಮಾತನಾಡುತ್ತಿದ್ದಾರೆಯೇ ಹೊರತು ಉದ್ಯೋಗ ಸೃಷ್ಟಿಸುತ್ತಿಲ್ಲ. ನಮಗೆ ಅವರು ಮಾತು ಬೇಡ, ಉದ್ಯೋಗ ಬೇಕು. ಹೀಗಾಗಿ, ಜನವಿರೋಧಿ ನೀತಿಗಳನ್ನು ಕೈಬಿಟ್ಟು ಉದ್ಯೋಗ ಸೃಷ್ಟಿಗೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.