ಬೆಳಗಾವಿ(ಆ.23): ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನ ಪರಿಶೀಲನೆ ನಡೆಸಲು ಜಿಲ್ಲೆಗೆ ಆಗಮಿಸಬೇಕಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬೆಳಗಾವಿ ಜಿಲ್ಲಾ ಪ್ರವಾಸವನ್ನ ಮುಂದೂಡಲಾಗಿದೆ ಎಂದು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ ಅವರು ಹೇಳಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಕ್ಷೇತ್ರದಲ್ಲಿ ನೆರೆ ಪರಿಸ್ಥಿತಿ ಪರಿಶೀಲನೆಗೆ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದರು. ಆದರೆ, ಡಿಕೆಶಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಳಗಾವಿ ಪ್ರವಾಸ ಮುಂದೂಡಿಕೆಯಾಗಿದೆ ಎಂದು ತಿಳಿಸಿದ್ದಾರೆ. 

ಉತ್ತರ ಕರ್ನಾಟಕದಲ್ಲಿ ಪ್ರವಾಹ: ಸಚಿವ ಜಾರಕಿಹೊಳಿ ಕ್ಷೇತ್ರಕ್ಕೆ ಡಿಕೆಶಿ ಲಗ್ಗೆ

ಡಿ.ಕೆ.ಶಿವಕುಮಾರ್ ನಾಳೆ(ಸೋಮವಾರ)ದಂದು ಬೆಳಗಾವಿ ಜಿಲ್ಲಾ ಪ್ರವಾಸ ಮಾಡಲು ನಿರ್ಧರಿಸಿದ್ದರು. ಜಿಲ್ಲೆಯ ಗೋಕಾಕ್ ಹಾಗೂ ಅರಭಾವಿ ಕ್ಷೇತ್ರದ ನೆರೆ ಪೀಡಿತ ಗ್ರಾಮಗಳ ಭೇಟಿ ನೀಡಿ ಪರಿಸ್ಥಿತಿಯನ್ನ ಅವಲೋಕ ನಡೆಸಲಿದ್ದರು. ಬಳಿಕ ಬೆಳಗಾವಿ ಹಾಗೂ ಚಿಕ್ಕೋಡಿ ಕಾಂಗ್ರೆಸ್ ಸಮಿತಿಗಳ ಕಾರ್ಯಕಾರಿ ಸಭೆ ಸಹ ನಡೆಸಲು ನಿರ್ಧರಿಸಿದ್ದರು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಪ್ರವಾಸ ಮುಂದೂಡಿಕೆಯಾಗಿದೆ.