Asianet Suvarna News Asianet Suvarna News

ಡಿ ಗ್ರೂಪ್‌ ನೌಕರನೇ ಸರ್ಕಾರಿ ಆಸ್ಪತ್ರೆ ವೈದ್ಯ!

ಕೀಲು ಮೂಳೆಗೆ ಸಂಬಂಧಿಸಿದ ರೋಗಿಗಳನ್ನು ತಪಾಸಣೆ ಮಾಡುವುದು ಯಾರು ಗೊತ್ತಾ?

D group employee is a government hospital doctor snr
Author
First Published Jun 5, 2023, 6:05 AM IST

  ಪಾವಗಡ :  ಕೀಲು ಮೂಳೆಗೆ ಸಂಬಂಧಿಸಿದ ರೋಗಿಗಳನ್ನು ತಪಾಸಣೆ ಮಾಡುವುದು ಯಾರು ಗೊತ್ತಾ?

ವೈದ್ಯರು ಅಂತಾ ನಿಮ್ಮ ಉತ್ತರ ಇದ್ದರೆ ಅದು ತಪ್ಪು. ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ತಪಾಸಣೆ ಮಾಡುವುದು ಡಿ ಗ್ರೂಪ್‌ ನೌಕರ. ಎಂದರೇ ಆಶ್ಚರ್ಯವಾಯಿತೇ?

ಇದು ನೂರಕ್ಕೆ ನೂರರಷ್ಟುನಿಜ. ಗಡಿ ಭಾಗದ ಪಾವಗಡದಲ್ಲಿ ಕೀಲು ಮೂಳೆಗೆ ಸಂಬಂಧಿಸಿದಂತೆ ರೋಗಿಗಳ ತಪಾಸಣೆ ಮಾಡುವುದು ನುರಿತ ವೈದ್ಯನಲ್ಲ, ಬದಲಿಗೆ ಡಿ ಗ್ರೂಪ್‌ ನೌಕರ. ದೀರ್ಘ ಕಾಲದ ರಜೆಗೆ ವೈದ್ಯರು ಹೋಗಿರುವ ಹಿನ್ನೆಲೆಯಲ್ಲಿ ಡಿ ಗ್ರೂಪ್‌ ನೌಕರನೇ ವೈದ್ಯನ ಕೆಲಸ ಮಾಡುತ್ತಿದ್ದಾನೆ. ಡಾಕ್ಟರ್‌ ಎಲ್ಲಿ ಎಂದು ಕೇಳುವ ರೋಗಿಗಳಿಗೆ ಟ್ರೀಟ್‌ಮೆಂಟ್‌ ಬೇಕು ಅಂದರೆ ತೆಗೆದುಕೊಳ್ಳಿ ಇಲ್ಲದಿದ್ದರೆ ಹೋಗಿ ಎಂದು ಡಿ ಗ್ರೂಪ್‌ ನೌಕರರ ಅವಾಜ್‌ ಹಾಕುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ.

ಬಯಲು ಸೀಮೆಯ ಪ್ರದೇಶದ ರೋಗಿಗಳಿಗೆ ಅನುಕೂಲ ಕಲ್ಪಿಸಲು ಸುಸಜ್ಜಿತ ಸಾರ್ವಜನಿಕ ಆಸ್ಪತ್ರೆ ತಲೆ ಎತ್ತುತ್ತಿದ್ದು ವೈದ್ಯರ ನಿರ್ಲಕ್ಷ್ಯದ ಪರಿಣಾಮ ಆಸ್ಪತ್ರೆಯ ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿತರಾದ ಡಿ.ಗ್ರೂಪ್‌ನ ಸಿಬ್ಬಂದಿಯೇ ರೋಗಿಗಳಿಗೆ ಚಿಕಿತ್ಸೆ ನೀಡುವ ಸ್ಥಿತಿ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.

ಗಡಿ ಭಾಗದ ತಾಲೂಕಿನಲ್ಲಿ ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಅನುಕೂಲ ಕಲ್ಪಿಸುವ ಹಿನ್ನಲೆಯಲ್ಲಿ ಸರ್ಕಾರ ಆಸಕ್ತಿವಹಿಸಿ ನಗರದ ಬಳ್ಳಾರಿ ರಸ್ತೆಯ ಪಕ್ಕದಲ್ಲಿ ಹೈಟೆಕ್‌ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ವಿಪರ್ಯಾಸವೆಂದರೆ, ಆಸ್ಪತ್ರೆಯ ನಿರ್ವಹಣೆ ಸರಿಯಿಲ್ಲದ ಕಾರಣ ಅಪಘಾತಕ್ಕೀಡಾದ ಮತ್ತು ಗರ್ಭೀಣಿಯರು, ಮಕ್ಕಳು ಕಿವಿ, ಕಣ್ಣು ಕಾಯಿಲೆಗೆ ತುತ್ತಾದ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿದ್ದು ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ.

ಇಲ್ಲಿನ ಆಸ್ಪತ್ರೆಗೆ ಮೂಳೆ ವೈದ್ಯರಾಗಿ ಡಾ. ನಾಗರಾಜ್‌ ಎಂಬುವರು ನಿಯೋಜಿತರಾಗಿದ್ದು ಕಳೆದ ಆರು ತಿಂಗಳಿಂದಲೂ ಆಸ್ಪತ್ರೆಗೆ ಅನಧಿಕೃತವಾಗಿ ಗೈರು ಆಗುತ್ತಿದ್ದಾರೆ. ಇದರಿಂದ ಅಪಘಾತಕ್ಕೀಡಾದ ಮತ್ತು ಬೆನ್ನು, ಕೈಕಾಲು ಮತ್ತು ಇತರೆ ಮೂಳೆ ರೋಗದಿಂದ ನರಳುತ್ತಿರುವ ರೋಗಿಗಳು ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಯಾತನೆ ಅನುಭವಿಸುತ್ತಿದ್ದಾರೆ. 10 ರು. ಪಾವತಿಸಿ ಒಪಿಡಿ ರಸೀದಿ ಪಡೆದು ಆಸ್ಪತ್ರೆಯ ವಿಭಾಗಕ್ಕೆ ಹೋದರೆ ಅಲ್ಲಿ ಮೂಳೆ ವೈದ್ಯರೇ ಇಲ್ಲ, ಇಂತಹ ಪರಿಸ್ಥಿತಿಯಲ್ಲಿ ಮೂಳೆ ರೋಗ ವಿಭಾಗದಲ್ಲಿ ಹೊರಗುತ್ತಿಗೆ ಅಧಾರದ ಮೇಲೆ ಕೆಲಸ ಮಾಡುವ ಡಿ.ಗ್ರೂಪ್‌ ನೌಕರರೇ ರೋಗಿಗಳಿಗೆ ಚಿಕಿತ್ಸೆ ನೀಡಿ ಹೆಚ್ಚುವರಿ ಆಸ್ಪತ್ರೆಗೆ ಶಿಫಾರಸು ಮಾಡುತ್ತಿರುವುದಾಗಿ ತಿಳಿದು ಬಂದಿದೆ.

ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹಾಗೂ ಬ್ಯಾಡೆಂಜ್‌ ಕಟ್ಟಲು ಅದಕ್ಕೆ ಆದ ತರಬೇತಿ ಪಡೆದಿರಬೇಕು. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಡಿ.ಗ್ರೂಪ್‌ ಸಿಬ್ಬಂದಿ ರೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡುವುದು ಸಮಂಜಸವಲ್ಲ ಎಂಬುದು ಸಾರ್ವಜನಿಕರದ್ದಾಗಿದೆ. ಬ್ಯಾಡೆಂಜ್‌ ಕಟ್ಟುವುದು ಮತ್ತು ಹಾಸಿಗೆ ಮೇಲಿನ ರೋಗಿಗಳ ಕಂಡಿಷನ್‌ ನೋಡಿಕೊಳ್ಳುವ ಜವಾಬ್ದಾರಿ ವಹಿಸುವುದು ಎಷ್ಟರ ಮಟ್ಟಿಗೆ ಸರಿ. ಆಸ್ಪತ್ರೆಯ ನಿರ್ವಹಣೆ ಸರಿಯಿಲ್ಲ, ರೋಗಿಗಳ ಪರದಾಟ ಕೇಳುವವರೇ ಇಲ್ಲ. ಇಲ್ಲಿ ಪ್ರತಿಯೊಂದು ಚಿಕಿತ್ಸೆಗೂ ರಾಜಕಾರಣಿಗಳ ಶಿಫಾರಸು ಮಾಡಿದರೆ ಮಾತ್ರ ರೋಗಿಗಳ ಬಗ್ಗೆ ನಿಗಾವಹಿಸುತ್ತಾರೆ. ಆಸ್ಪತ್ರೆಗೆ ಬಂದ ಬಡ ರೋಗಿಗಳ ಪರಿಸ್ಥಿತಿ ಅತ್ಯಂತ ಹೀನವಾಗಿದೆ ಎಂದು ಅನೇಕ ಮಂದಿ ಸಂಘಟನೆಗಳ ಪದಾಧಿಕಾರಿಗಳು ಆರೋಪಿಸಿದ್ದಾರೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಯ ವಿಭಾಗದಲ್ಲಿ ಡಾ.ನಾಗರಾಜ್‌ ಎಂಬ ವೈದ್ಯರು ಸೇವೆ ಸಲ್ಲಿಸುತ್ತಿದ್ದು ಜನವರಿಯಿಂದಲೂ ಆಸ್ಪತ್ರೆಗೆ ಬರುತ್ತಿಲ್ಲ. ಇವರ ಬಗ್ಗೆ ಮೇಲಾಧಿಕಾರಿ ತುಮಕೂರು ಡಿಎಚ್‌ಒ ಡಾ.ಮಂಜುನಾಥ್‌ರಿಗೆ ವರದಿ ಸಲ್ಲಿಸಲಾಗಿದೆ.

ಡಾ.ಕಿರಣ್‌ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ

26 ನರ್ಸ್‌ಗಳಿದ್ದರೂ ಡಿ.ಗ್ರೂಪ್‌ ನೌಕರನಿಂದಲೇ ಚಿಕಿತ್ಸೆ

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್‌ ತರಬೇತಿ ಪಡೆದಿರುವ 26 ಮಂದಿ ನರ್ಸ್‌ಗಳಿದ್ದು 30 ಮಂದಿ ಡಿ.ಗ್ರೂಪ್‌ ನೌಕರರಿದ್ದಾರೆ. ನರ್ಸ್‌ಗಳಿದ್ದರೂ ಆಸ್ಪತ್ರೆಗೆ ಬಂದ ರೋಗಿಗಳಿಗೆ ಡಿ ಗ್ರೂಪ್‌ ನೌಕರರೇ ಚಿಕಿತ್ಸೆ ಕೊಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ನಡೆಯುವ ಅವ್ಯವಸ್ಥೆ ಬಗ್ಗೆ ಅನೇಕ ಬಾರಿ ಇಲ್ಲಿನ ಉಸ್ತುವಾರಿ ವೈದ್ಯರ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ, ಸರ್ಕಾರಿ ಆಸ್ಪತ್ರೆ ಅತಂತ್ರ ಸ್ಥಿತಿಯಲ್ಲಿದ್ದು ಮೇಜರ್‌ ಸರ್ಜರಿ ಆಗಬೇಕಿದೆ. ಇಲ್ಲಿನ ಆಸ್ಪತ್ರೆಯ ಅನೇಕ ವಿಭಾಗಗಳಲ್ಲಿ ವೈದ್ಯರ ಕೊರತೆ ಇದೆ. ಬಹಳಷ್ಟುಹುದ್ದೆಗಳು ಖಾಲಿ ಇದ್ದು ಅನಧಿಕೃತ ಗೈರಾಗುವ ವೈದ್ಯರ ಬಗ್ಗೆ ಮಾಹಿತಿ ಇದ್ದರೂ ಸೂಕ್ತ ಕ್ರಮ ಜರುಗಿಸಿ ಸರಿಪಡಿಸುವಲ್ಲಿ ಇಲ್ಲಿನ ಆಸ್ಪತ್ರೆಯ ಆಡಳಿತಾಧಿಕಾರಿ ಮತ್ತು ಡಿಎಚ್‌ಒ ವಿಫಲರಾಗಿರುವುದಾಗಿ ನಾರಾಯಪ್ಪ, ನಾಗರಾಜಪ್ಪ, ಹನುಮಂತರಾಜು ಮತ್ತಿತರರು ಆರೋಪಿಸಿದ್ದಾರೆ.

Follow Us:
Download App:
  • android
  • ios