Cyclone Asani ಹೊತ್ತು ತಂದ ಬೂತಾಯಿ ಮೀನು, ಕರಾವಳಿಗರಿಗೆ ಹಬ್ಬ!

  • ಚಿಮ್ಮಿ ಚಿಮ್ಮಿ ಹಾರುತ್ತಿದೆ ಬೂತಾಯಿ ಮೀನು
  • ಬೋಟಿಗೆ ಮೀನು ಚಿಮ್ಮುವ ದೃಶ್ಯ ವೈರಲ್
  • ಬೂತಾಯಿ ಎಂಬ ಬಡವರ ಮೀನು
  • ಕರಾವಳಿಯ ಮನೆಮನೆಯಲ್ಲೂ ಘಮಘಮ
     
Cyclone Asani effects More than 30 tons of fish were found at Udupi kapu beach gow

ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್ 

ಉಡುಪಿ (ಮೇ.13): ಅಸಾನಿ ಚಂಡಮಾರುತ (Asani Cyclone) ಪ್ರಕೃತಿಯ ಚಿತ್ರಣವನ್ನೇ ಬದಲಾಯಿಸಿದೆ. ಬಿಸಿಲಿನ ಧಗೆಯಿಂದ ಕಂಗಾಲಾಗಿದ್ದ ವಾತಾವರಣ ತಿಳಿಯಾಗಿದೆ. ಹನಿ ಹನಿ ಮಳೆ ತಂಗಾಳಿ ಬೀಸುವಾಗ ಬಿಸಿಬಿಸಿ ಮೀನು ತಿನ್ನುವ ಆಸೆ ಆದರೆ ಕರಾವಳಿಗೆ ಬನ್ನಿ. 

ಉಡುಪಿಯ (Udupi) ಕಾಪು (Kapu) ಕಡಲ ತೀರದಲ್ಲಿ ಬೂತಾಯಿ ಮೀನಿನ (Indian oil sardine) ಸುಗ್ಗಿ ಎದ್ದಿದೆ. ಶುಕ್ರವಾರ ಮೀನುಗಾರಿಕೆ ನಡೆಸಿದವರಿಗೆ ಭರಪೂರ ಬೂತಾಯಿ ಮೀನು ಸಿಕ್ಕಿದೆ. ಒಂದು ಜೋಡಿ ದೋಣಿಗೆ 30 ಟನ್ ಮೀನು ಸಿಕ್ಕಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ!

ಚಿಮ್ಮಿ ಚಿಮ್ಮಿ ಹಾರುತ್ತಿದೆ ಬೂತಾಯಿ ಮೀನು: ಉಡುಪಿಯ ಕಾಪು ಸಮೀಪದ ಕೈಪುಂಜಾಲು ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಜೋಡಿ ದೋಣಿಗೆ ಲಕ್ಷಾಂತರ ಮೌಲ್ಯದ ಮೀನು ಸಿಕ್ಕಿದೆ. ಇಂದು ಬೆಳಿಗ್ಗೆ ಮೀನುಗಾರಿಕೆಗೆ ಕಡಲಿಗೆ ಇಳಿದ ಓಂ ಸಾಗರ ಹೆಸರಿನ ಜೋಡಿ ದೋಣಿಯು ಬರೋಬ್ಬರಿ 30 ಟನ್ ಬೂತಾಯಿ ಮೀನಿನೊಂದಿಗೆ ವಾಪಸಾಗಿದೆ. ವೃತ್ತಾಕಾರದಲ್ಲಿ ಬಲೆಯನ್ನು ಬೀಸಿ, ಜ್ಯೂಲಿ ಯಲ್ಲಿ ಮೇಲೆತ್ತಿ ದಂತೆ ಮೀನನ್ನು ಬೋಟಿಗೆ ಸಾಗಿಸುವ ಜೋಡಿ ದೋಣಿಯ ಮೀನುಗಾರಿಕೆ ಈದಿನ ಲಾಭದಾಯಕವಾಗಿದೆ. ಅಂದಾಜು 30 ಲಕ್ಷಕ್ಕೂ ಅಧಿಕ ಮೌಲ್ಯಕ್ಕೆ ಈ 30 ಟನ್ ಮೀನು ಮಾರಾಟವಾದ ಸುದ್ದಿ ಇದೆ.

CYCLONE ASANI ಬಿರುಗಾಳಿ ಮಳೆಗೆ ಮೆಕ್ಕೆಜೋಳ ನಾಶ, ಚಿತ್ರದುರ್ಗ ರೈತ ಕಂಗಾಲು

ಬೋಟಿಗೆ ಮೀನು ಚಿಮ್ಮುವ ದೃಶ್ಯ ವೈರಲ್: ನಡು ಸಮುದ್ರದಲ್ಲಿ ಬಲೆಯನ್ನು ಎಳೆಯುವಾಗ, ಮುನ್ನುಗ್ಗಿ ಬರುವ ಮೀನುಗಳು ಬೋಟ್ ಗೆ ಚಿಮ್ಮುವ ದೃಶ್ಯ ಸದ್ಯ ಎಲ್ಲಾ ಕಡೆ ವೈರಲ್ ಆಗಿದೆ. ದೋಣಿಯಲ್ಲಿರುವ ಮೀನುಗಾರರು ಖುಷಿಯಿಂದ ಕಿರುಚಾಡುತ್ತಿದ್ದರೆ, ಕೋಟ್ಯಾಂತರ ಮೀನುಗಳು ಬೋಟಿಗೆ ಚಿಮ್ಮಿಚಿಮ್ಮಿ ಹಾರುವ ದೃಶ್ಯ ಇದಾಗಿದೆ. 

ಬಂಪರ್ ಮೀನುಗಾರಿಕೆಗೆ ಕಾರಣ ಗೊತ್ತಾ?: ದಿನಬೆಳಗಾದರೆ ನಾವು ಅಸಾನಿ ಚಂಡಮಾರುತದಿಂದಾದ ಅನಾಹುತಗಳನ್ನು ನೋಡುತ್ತೇವೆ. ಆದರೆ ಕರಾವಳಿಯ ಮೀನುಗಾರರ ಪಾಲಿಗೆ ಚಂಡಮಾರುತ ವರದಾನವಾಗಿದೆ. ಚಂಡಮಾರುತ ಬಂದಾಗ ಅಲೆಗಳ ಆರ್ಭಟ ಹೆಚ್ಚಿರುತ್ತೆ. ಗಾಳಿಯ ವೇಗ ಜಾಸ್ತಿ ಇರುವುದರಿಂದ ಕಡಲಿನ ನೀರು ಅಡಿಮೇಲಾಗುತ್ತೆ.  ಇದರಿಂದ ಮೀನುಗಳ ಚಲನೆಯಲ್ಲಿ ಬದಲಾವಣೆ ಉಂಟಾಗಿ ಕಡಲತೀರಕ್ಕೆ ಬರುತ್ತೆ. ಹೀಗಾಗಿ ಕಡಲತೀರದಲ್ಲಿ ಮೀನುಗಾರಿಕೆ ನಡೆಸುವ ನಾಡದೋಣಿಗಳಿಗೆ ಭರಪೂರ ಮೀನುಗಳು ಸಿಗುತ್ತಿದೆ. 

ಕರ್ನಾಟಕ ಕರಾವಳಿಯ ಗಂಗೊಳ್ಳಿ ಯಿಂದ ಮಂಗಳೂರುವರೆಗೆ ಮೀನಿನ ಚಲನವಲನ ಹೆಚ್ಚಾಗಿದ್ದು, ಅದರಲ್ಲೂ ಬೂತಾಯಿ ಮೀನುಗಳೇ ದಂಡಿಯಾಗಿ ಓಡಾಡುತ್ತಿವೆ. ಹೀಗೆ ಸಂಚರಿಸುವಾಗ ಬೀಸಿದ ಬಲೆ ಗಳಿಗೆ ಈ ಮೀನುಗಳು ಸೆರೆಯಾಗುತ್ತಿವೆ.

Belagavi ಸಂಪುಟ ವಿಸ್ತರಿಸಿದ್ರೆ ಗಡಿ ಉಸ್ತುವಾರಿ ಸಚಿವರ ನೇಮಿಸಿ ಕನ್ನಡಿಗರ ಆಗ್ರಹ

ಬೂತಾಯಿ ಎಂಬ ಬಡವರ ಮೀನು: ಬೂತಾಯಿ ಮೀನನ್ನು ಬಡವರ ಮೀನು ಎಂದೇ ಕರೆಯುತ್ತಾರೆ. ಪ್ರತಿ ಕೆಜಿ ಮೀನಿಗೆ 100ರಿಂದ 150 ರೂಪಾಯಿವರೆಗೆ ಬೆಲೆ ಇರುತ್ತೆ. ಅಂಜಲ್ ಪ್ಯಾಂಪ್ಲೆಟ್ ನಂತಹ ಮೀನುಗಳು ಸಾವಿರಾರು ರೂಪಾಯಿಗೆ ಬಿಕರಿಯಾಗುತ್ತಿದ್ದರೆ, ಬೂತಾಯಿ ಮೀನು ಬಡವರ ಹೊಟ್ಟೆ ತಣಿಸುತ್ತದೆ. ಅದರಲ್ಲೂ ನೀರು ದೋಸೆಯ ಜೊತೆಗೆ ತಿನ್ನುವ ಬೂತಾಯಿ ಮೀನಿನ ಪುಳಿಮುಂಚಿಯ ರುಚಿ ತಿಂದವರಿಗೇ ಗೊತ್ತು. ಸದ್ಯ ಒಂದೆರಡು ದಿನಗಳಿಂದ ಕರಾವಳಿಯ ಮನೆಮನೆಗಳಲ್ಲೂ ಬೂತಾಯಿ ಮೀನಿನ ಖಾದ್ಯಗಳ ಹಬ್ಬವೇ ನಡೆಯುತ್ತಿದೆ. ಬೂತಾಯಿ ಮೀನು ಅತ್ಯಧಿಕ ಪೌಷ್ಟಿಕಾಂಶವನ್ನು ಹೊಂದಿದ್ದು ಇದರ ಎಣ್ಣೆಯನ್ನು ಔಷಧಿಗಳ ತಯಾರಿಕೆಗೆ ಬಳಸಲಾಗುತ್ತದೆ.

ಕರ್ನಾಟಕ ಕರಾವಳಿಯಲ್ಲಿ ಸಿಗುವ ಮೀನುಗಳಿಗೆ ಕೇರಳ (Kerala) ದಲ್ಲಿ ಅಪಾರ ಬೇಡಿಕೆಯಿದ್ದು, ಉತ್ತಮ ಬೆಲೆಗೆ ಕೇರಳಕ್ಕೆ ಈ ಮೀನುಗಳನ್ನು ಮಾರಾಟ ಮಾಡಲಾಗುತ್ತದೆ. ಕಡಲು ಪ್ರಕ್ಷುಬ್ಧಗೊಂಡಿದ್ದು ಸಮುದ್ರಕ್ಕೆ ಆಳಸಮುದ್ರ ಬೋಟುಗಳು ಹೋಗುತ್ತಿಲ್ಲ. ತೀರ ಪ್ರದೇಶಗಳಲ್ಲಿ ಮೀನುಗಾರಿಕೆ ನಡೆಸುವ ನಾಡದೋಣಿಗಳಿಗೆ ಸದ್ಯ ಬಂಪರ್ ಮೀನುಗಾರಿಕೆ ನಡೆಯುತ್ತಿದೆ‌.

Latest Videos
Follow Us:
Download App:
  • android
  • ios