ಹಾಲಿ, ಮಾಜಿ ಶಾಸಕರಿಗೆ ಆತಂಕ ಎದುರಾಗಿದೆ : ಜೆಡಿಎಸ್ ಮುಖಂಡ
ಕ್ಷೇತ್ರದಲ್ಲಿ ನನಗೆ ಸಿಗುತ್ತಿರುವ ಬೆಂಬಲದಿಂದ ಹಾಲಿ, ಮಾಜಿ ಶಾಸಕರುಗಳಿಗೆ ಆತಂಕ ಎದುರಾಗಿದೆ. ಇದರಿಂದ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಆರೋಪಿಸಿದರು.
ಮಂಡ್ಯ : ಕ್ಷೇತ್ರದಲ್ಲಿ ನನಗೆ ಸಿಗುತ್ತಿರುವ ಬೆಂಬಲದಿಂದ ಹಾಲಿ, ಮಾಜಿ ಶಾಸಕರುಗಳಿಗೆ ಆತಂಕ ಎದುರಾಗಿದೆ. ಇದರಿಂದ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಆರೋಪಿಸಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಪ್ರಚಾರ ನಡೆಸಿದ ವೇಳೆ ಮಾತನಾಡಿದ ಅವರು, ನನಗೆ ಸಿಗುತ್ತಿರುವ ಜನಬೆಂಬಲದಿಂದ ಈ ಬಾರಿ ಕ್ಷೇತ್ರದಲ್ಲಿ ಚರ್ತುಷ್ಕೋನ ಸ್ಪರ್ಧೆ ಎದುರಾಗಲಿದೆ. ಅಂತಿಮವಾಗಿ ಅಚ್ಚರಿ ಫಲಿತಾಂಶವನ್ನು ನಿರೀಕ್ಷಿಸಬಹುದು ಎಂದರು.
35 ವರ್ಷಗಳ ಕಾಲ ಜೆಡಿಎಸ್ ಸಾಮಾನ್ಯ ಕಾರ್ಯಕರ್ತನಾಗಿ ದುಡಿದಿದ್ದೇನೆ. ನಮ್ಮದು ರಾಜಕಾರಣದ ಕುಟುಂಬವಲ್ಲ. ನಾನೊಬ್ಬ ಸಾಮಾನ್ಯ ರೈತನ ಮಗ. ನಾನು ಸಾರ್ವಜನಿಕ ಹೋರಾಟ ಹಾಗೂ ಚಳವಳಿಗಳ ಮೂಲಕ ರಾಜಕಾರಣ ಪ್ರವೇಶ ಮಾಡಿದ್ದೇನೆ. ವಿಧಾನ ಪರಿಷತ್, ವಿಧಾನಸಭೆ ಸೇರಿದಂತೆ ಹಲವು ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಟಿಕೆಚ್ ವಂಚಿತನಾಗಿದ್ದೇನೆ ಎಂದು ತಿಳಿಸಿದರು.
ನನ್ನ ಮೇಲೆ ಅನುಕಂಪದ ಅಲೆ ಇದೆ. ಕ್ಷೇತ್ರದಲ್ಲಿ ರೈತಸಂಘ, ಕನ್ನಡಪರ ಸಂಘಟನೆಗಳು ಸೇರಿದಂತೆ ಕಾಂಗ್ರೆಸ್ , ಬಿಜೆಪಿ, ಜೆಡಿಎಸ್ ಪಕ್ಷಗಳ ಸ್ಥಳೀಯ ಮುಖಂಡರು ನನಗೆ ಬೆಂಬಲ ನೀಡುತ್ತಿದ್ದಾರೆ. ಬಹಿರಂಗವಾಗಿ ಕಾಣಿಸಿಕೊಳ್ಳದಿದ್ದರೂ ಒಳಗಿನಿಂದ ತೆರೆಮರೆಯಲ್ಲಿ ಬೆಂಬಲ ನೀಡುತ್ತಿದ್ದಾರೆ ಎಂದರು.
ನನಗೆ ಸಿಗುತ್ತಿರುವ ಬೆಂಬಲ ನೋಡಿ ಹಾಲಿ, ಮಾಜಿ ಶಾಸಕರು ಪರೋಕ್ಷವಾಗಿ ನನ್ನನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವರು ಆಮಿಷಗಳನ್ನು ನೀಡಿ ಸ್ಪರ್ಧೆ ಮಾಡದಂತೆ ಒತ್ತಡ ಹಾಕುತ್ತಿದ್ದಾರೆ. ಆದರೆ, ಕ್ಷೇತ್ರದ ಮತದಾರರು, ರಾಜಕೀಯ ಪಕ್ಷಗಳ ಮೂಲದ ನೊಂದ ಮುಖಂಡರು ನೀವು ಸ್ಪರ್ಧಿಸಬೇಕು. ಎಷ್ಟೆಖರ್ಚಾದರೂ ನಾವು ಚುನಾವಣಾ ವೆಚ್ಚ ಭರಿಸುವುದಾಗಿ ಹೇಳುತ್ತಿದ್ದಾರೆ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ನಮ್ಮ ನಾಯಕರು. ಆದರೆ, ನನ್ನ ಬಗ್ಗೆ ಅವರಿಗೆ ಇಲ್ಲಸಲ್ಲದ ತಪ್ಪು ಮಾಹಿತಿ ನೀಡಿ ನನ್ನನ್ನು ಭಯಪಡಿಸಲು ನೋಟಿಸ್ ಜಾರಿಯಾಗುವಂತೆ ಮಾಡಿದ್ದಾರೆ. ಸಾಮಾನ್ಯ ಕಾರ್ಯಕರ್ತರನ್ನು ಜೆಡಿಎಸ್ ವರಿಷ್ಠರ ಬಳಿ ಕರೆದುಕೊಂಡು ಹೋಗಿ ಅವರ ಸಮಸ್ಯೆಯನ್ನು ಬಗೆಹರಿಸುತ್ತಿದ್ದ ರೀತಿಯನ್ನು ಕಂಡು ಈಗಲೂ ವರಿಷ್ಠರು ನನ್ನ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ ಎಂದು ಹೇಳಿದರು.
ಜೆಡಿಎಸ್ ವರಿಷ್ಠರ ಬಳಿ ಇದ್ದ ನನ್ನ ಒಡನಾಟವನ್ನು ಸಹಿಸದ ಕೆಲವರು ಭವಿಷ್ಯದಲ್ಲಿ ನಮ್ಮ ರಾಜಕೀಯ ಬೆಳವಣಿಗೆಯಲ್ಲಿ ಪೈಪೋಟಿ ನೀಡುತ್ತಾನೆ ಎಂಬ ಉದ್ದೇಶದಿಂದ ಜೆಡಿಎಸ್‌ನಿಂದ ಉಚ್ಛಾಟನೆ ಮಾಡಿಸಲು ಪ್ರಯತ್ನ ಪಟ್ಟಿದ್ದಾರೆ. ಚುನಾವಣೆ ಮುಗಿದ ಒಂದು ತಿಂಗಳ ಒಳಗಾಗಿ ತಗ್ಗಹಳ್ಳಿ ವೆಂಕಟೇಶ್ ಯಾರೆಂಬುದು ವಿರೋಧಿಗಳಿಗೆ ತಿಳಿಯುತ್ತದೆ ಎಂದು ಎಚ್ಚರಿಕೆ ನೀಡಿದರು.
ಆಕಸ್ಮಿಕವಾಗಿ ಪಕ್ಷಕ್ಕೆ ಬಂದವರು ಮೂಲ ಜೆಡಿಎಸ್ ಕಾರ್ಯಕರ್ತರಿಗೆ ಮನ್ನಣೆ ನೀಡದೆ ಬೆರಳೆಣಿಕೆಯ ತಮ್ಮ ಬೆಂಬಲಿಗರಿಗೆ ಮನ್ನಣೆ ನೀಡಿ ನಾವೇ ಜೆಡಿಎಸ್ ಪಕ್ಷವನ್ನು ಸಂಘಟನೆ ಮಾಡಿದ್ದೇವೆ ಎಂಬಂತೆ ತೋರ್ಪಡಿಸಿಕೊಳ್ಳುತ್ತಿದ್ದಾರೆ. ನಿಜವಾದ ಜೆಡಿಎಸ್ ಕಾರ್ಯಕರ್ತರು ಯಾರೆಂಬುದು ಕೆಲವೇ ದಿನಗಳಲ್ಲಿ ತಿಳಿಯುತ್ತದೆ ಎಂದು ಹೇಳಿದರು.
ಜೆಡಿಎಸ್ ನೀಡಿರುವ ನೋಟಿಸ್‌ಗೆ ಎರಡು ಮೂರು ದಿನಗಳಲ್ಲಿ ಉತ್ತರ ನೀಡುತ್ತೇನೆ. ಕ್ಷೇತ್ರ ಜನತೆ ಎರಡು ಕುಟುಂಬಗಳಿಗೆ ಸಾಕಷ್ಟುಅವಕಾಶ ನೀಡಿದ್ದೀರಿ. ಸಾಮಾನ್ಯ ರೈತನ ಮಗನಾದ ನನಗೊಂದು ಅವಕಾಶ ಕೊಡಿ ಕ್ಷೇತ್ರದ ಅಭಿವೃದ್ಧಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ಬೆಳಗೊಳ, ಕೆ.ಶೆಟ್ಟಹಳ್ಳಿ ಹೋಬಳಿಗಳು, ಕೆಆರ್‌ಎಸ್ ವ್ಯಾಪ್ತಿ, ಗೆಂಡೆಹೊಸಹಳ್ಳಿ, ಟಿ.ಎಂ.ಹೊಸೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ವೆಂಕಟೇಶ್ ಪ್ರಚಾರ ನಡೆಸಿದರು. ನೂರಾರು ಬೆಂಬಲಿಗರು ಹಾಜರಿದ್ದರು.