ಯಲ್ಲಾಪುರ [ಡಿ.08]: ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಗಳಲ್ಲಿ ಫಲಿತಾಂಶದ ಬಗ್ಗೆ ಚಡಪಡಿಕೆ ಆರಂಭವಾಗಿದ್ದರೆ, ಮತದಾರು ತೀವ್ರ  ಕುತೂಹಲದಿಂದ ಫಲಿತಾಂಶ ಎದುರು ನೋಡುತ್ತಿದ್ದಾರೆ.

ಚುನಾವಣೆ ಡಿ. 5 ರಂದು ಮುಗಿದಿದೆ. ಸೋಮವಾರ ಡಿಸೆಂಬರ್ 9 ರಂದು ಫಲಿತಾಂಶ ಬರಲಿದೆ. ಚುನಾವಣೆ ಮುಗಿದ ಮರುದಿನ ಅಭ್ಯರ್ಥಿಗಳು ರಿಲ್ಯಾಕ್ಸ್ ಮಾಡಿದರು. ಈಗ ಫಲಿತಾಂಶ ಹತ್ತಿರ ಬರುತ್ತಿದ್ದಂತೆ ಚಡಪಟಿಕೆ ಶುರುವಾಗಿದೆ.

ಕ್ಷೇತ್ರದಲ್ಲಿ 7 ಅಭ್ಯರ್ಥಿಗಳು ಇದ್ದರೂ, ಸ್ಪರ್ಧೆ ಇರುವುದು ಬಿಜೆಪಿಯ ಶಿವರಾಮ ಹೆಬ್ಬಾರ್ ಹಾಗೂ ಕಾಂಗ್ರೆಸ್‌ನ ಭೀಮಣ್ಣ ನಾಯ್ಕ ಅವರಲ್ಲಿ ಮಾತ್ರ. ಇದರಿಂದ ಈ ಇಬ್ಬರು ಅಭ್ಯರ್ಥಿಗಳು ಫಲಿತಾಂಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಅದರಲ್ಲೂ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದೆ ಎಂದು ಪ್ರಕಟವಾಗಿರುವುದು ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರಲ್ಲಿ ಸ್ವಲ್ಪ ಗಲಿಬಿಲಿ ಮೂಡಿಸಿದೆ. ಈ ಸಮೀಕ್ಷೆ ತಮ್ಮ ಪರವಾಗಿ ಬಂದಿರುವುದು ಹೆಬ್ಬಾರ್ ಅವರಿಗೆ ಸಮಾಧಾನ ತಂದರೂ ಫಲಿತಾಂಶ ಬರುವ ತನಕ ತಣ್ಣನೆಯ ಆತಂಕ ಇರುವುದು ಸಹಜ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಯಲ್ಲಾಪುರ ಕ್ಷೇತ್ರದ ಮತದಾರರಷ್ಟೇ ಅಲ್ಲ, ಇಡಿ ಜಿಲ್ಲೆಯ ಜನತೆ ಯಲ್ಲಾಪುರ ಕದನದ ಬಗ್ಗೆ ತೀವ್ರ ಕುತೂಹಲದಿಂದ ಇದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಹೋರಾಟ ನಡೆದಿದೆ. ಇಡಿ ರಾಜ್ಯದ ಗಮನವನ್ನೂ ಈ ಚುನಾವಣೆ ಸೆಳೆದಿದೆ. ಮತ ಎಣಿಕೆ ಶಿರಸಿಯಲ್ಲಿ ನಡೆಯಲಿದ್ದು, ಎಲ್ಲವೂ ಸಜ್ಜಾಗಿದೆ. ಎಲ್ಲರ ಮುಖವೂ ಈಗ ಶಿರಸಿಯತ್ತ ಹೊರಳಿದೆ. ಫಲಿತಾಂಶದ ಪ್ರತಿಕ್ಷಣದ ಮಾಹಿತಿ ಪಡೆಯಲು ವಿವಿಧ ಪಕ್ಷಗಳ ಕಾರ್ಯಕರ್ತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.