ಹಾಸನ [ಮಾ.02]:  6 ತಿಂಗಳಾದರೂ ಪಕ್ಷದ ರಾಜ್ಯಾಧ್ಯಕ್ಷರನ್ನು ಮಾಡಲು ಯೋಗ್ಯತೆ ಇಲ್ಲದ ಕಾಂಗ್ರೆಸ್‌ ವೈಚಾರಿಕವಾಗಿ ಬೌದ್ಧಿಕವಾಗಿ ದಿವಾಳಿಯಾಗಿದ್ದರೇ, ಜೆಡಿಎಸ್‌ ತಮ್ಮ ವಂಶಪರಾಂಪರ್ಯ ಆಡಳಿತಕ್ಕೆ ತೊಂದರೆ ಆಗುತ್ತದೆ ಎಂಬ ಭಯದಿಂದ ಚಿಲ್ಲರೆ ರಾಜಕೀಯ ಮಾಡುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವಾಗ್ದಾಳಿ ನಡೆಸಿದರು.

ಭಾನುವಾರ ನಗರದಲ್ಲಿ ನಡೆದ ಜಿಲ್ಲಾ ಬಿಜೆಪಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಭಾಷಣದೂದ್ದಕ್ಕೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ವಿರುದ್ಧ ವಾಕ್ಸಮರ ನಡೆಸಿ, ಕಾಂಗ್ರೆಸ್‌ ಮುಕ್ತ ಭಾರತ ಮತ್ತು ಜೆಡಿಎಸ್‌ ಮುಕ್ತ ಕರ್ನಾಟಕ ಮಾಡಲು ಕಾರ್ಯಕರ್ತರು ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು.

ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ವಿಚಾರದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಸ್ವಾರ್ಥಕ್ಕಾಗಿ ಓಟಿನ ರಾಜಕಾರಣ ಮಾಡುತ್ತಿವೆ. ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಕಾಂಗ್ರೆಸ್‌ ನೀಡಿದ್ದ ಕುಮ್ಮಕ್ಕೇ ಕಾರಣ. ಬಿಜೆಪಿ ರಾಷ್ಟ್ರದ ಅಭಿವೃದ್ಧಿಗಾಗಿ ರಾಜಕಾರಣ ಮಾಡುತ್ತದೆ ಹೊರತು ಕುಟುಂಬ ರಾಜಕಾರಣ ಮಾಡುತ್ತಿಲ್ಲ. ಅಮಿತ್‌ ಶಾ ಅವರು 3 ವರ್ಷದ ನಂತರ ನಡ್ಡಾ ಅವರಿಗೆ ರಾಷ್ಟ್ರಾಧ್ಯಕ್ಷರ ಸ್ಥಾನ ವಹಿಸಿಕೊಟ್ಟರು. ಆದರೆ ಕಾಂಗ್ರೆಸ್‌ನಲ್ಲಿ ಇಂದಿರಾ, ರಾಜೀವ್‌ ಗಾಂಧಿ, ಸೋನಿಯಾಗಾಂಧಿ ಅಧ್ಯಕ್ಷರಾಗುತ್ತಿದ್ದರೇ, ಜೆಡಿಎಸ್‌ನಲ್ಲಿ ದೇವೇಗೌಡ, ಕುಮಾರಸ್ವಾಮಿ ಬಿಟ್ಟರೇ ಇನ್ನಾರು ಆಗುತ್ತಿಲ್ಲ ಎಂದು ಟೀಕಿಸಿದರು.

ಒಬ್ಬಿಬ್ಬರು ಹೋದರೆ ಪಕ್ಷಕ್ಕೆ ನಷ್ಟವಿಲ್ಲ ಅಂದ ಗೌಡ್ರು : ಯಾರಿದ್ದಾರೆ JDS ಲಿಸ್ಟ್ ನಲ್ಲಿ?.

ಹಿಂದೆ ಮೋದಿ ಅವರನ್ನು ಗೋದ್ರಾ ರೈಲು ದುರಂತ ವಿಚಾರದಲ್ಲಿ ಚಿಂತಕರು, ವಿಚಾರಣವಾದಿಗಳು, ಕಮ್ಯೂನಿಷ್ಟರು ಹಾಕಿದರು. ನಂತರದಲ್ಲಿ ಮೋದಿ ಅವರಿಗೆ ಅಮೆರಿಕಾ ಹೋಗಲು ವೀಸಾ ನಿರಾಕರಿಸಲಾಯಿತು. ಈಗ ಅಮೆರಿಕಾದ ಅಧ್ಯಕ್ಷರೇ ಗುಜರಾತ್‌ಗೆ ಬಂದು, ಮೋದಿ ನನ್ನ ಸಹೋದರ ಇದ್ದಂತೆ ಎಂದು ಹೇಳಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಆರ್‌ಎಸ್‌ಎಸ್‌ ನವರು ಚಡ್ಡಿ ಹಾಕಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಲಘುವಾಗಿ ಮಾತನಾಡಿದ್ದಾರೆ. ಆರ್‌ಎಸ್‌ಎಸ್‌ ರಾಜಕಾರಣ ಮಾಡುತ್ತಿಲ್ಲ. ರಾಷ್ಟ್ರ ನಿರ್ಮಾಣ ಮಾಡುತ್ತಿದೆ. ತಾಜ್‌ ಹೊಟೇಲ್‌ನಲ್ಲಿ ಕುಳಿತು ಆಡಳಿತ ಮಾಡಿದ್ದರಿಂದ ಬೇಸತ್ತು ಕಾಂಗ್ರೆಸ್‌, ಜೆಡಿಎಸ್‌ ಶಾಸಕರು ತಮ್ಮ ಪಕ್ಷಕ್ಕೆ ಸೇರಿದರು ಎಂದು ತಿರುಗೇಟು ನೀಡಿದರು.

ಹಾಸನದಲ್ಲಿ ಹೊಸ ರಾಜಕೀಯ ಪರ್ವ:

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾತನಾಡಿ, ಹಾಸನದಲ್ಲಿ ಹೊಸ ರಾಜಕೀಯ ಪರ್ವ ಆರಂಭವಾಗಿದೆ. ಕುಟುಂಬ ರಾಜಕಾರಣದಿಂದ ಪ್ರಜಾಪ್ರಭುತ್ವದ ಕಡೆಗೆ ಹೋಗುವ ರಾಜಕೀಯ ಪರ್ವ ಆರಂಭವಾಗಿದೆ. ಪಾಳೇಗಾರಿಕೆಯ ಬುಡವನ್ನು ಬೇರು ಸಮೇತ ಕಿತ್ತು ಹಾಕಲಾಗುವುದು ಎಂದು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಶಾಸಕ ಪ್ರೀತಂಗೌಡರು ಮಾತನಾಡಿ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಉತ್ತಮ ರೀತಿಯಲ್ಲಿ ಸಂಘಟಿಸಿದರೇ ಮಾತ್ರ ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯದಲ್ಲಿ ಯಾವುದೇ ಸಮಸ್ಯೆಗಳು ಇಲ್ಲದೇ ಅಧಿಕಾರ ಹಿಡಿಯಲಿಕ್ಕೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಅಧಿಕಾರ ಹಸ್ತಾಂತರ:

ಇದೇ ವೇಳೆ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ತಮ್ಮ ಸಮ್ಮುಖದಲ್ಲಿ ಪಕ್ಷದ ಬಾವುಟವನ್ನು ಹಿಂದಿನ ಅಧ್ಯಕ್ಷ ನವಿಲೆ ಅಣ್ಣಪ್ಪನವರಿಂದ ನೂತನ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್‌ ಅವರಿಗೆ ಹಸ್ತಾಂತರ ಮಾಡಿಸಿದರು.

ಜೆಡಿಎಸ್‌ ಮುಖಂಡರಾದ ಜಿಪಂ ಮಾಜಿ ಉಪಾಧ್ಯಕ್ಷ ಎ.ಇ.ಚಂದ್ರಶೇಖರ್‌, ಟಿಎಪಿಸಿಎಂಎಸ್‌ ಮಾಜಿ ನಿರ್ದೇಶಕ ಅನಂದ್‌ ಕುಮಾರ್‌, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಹೆಚ್‌.ಎಸ್‌.ಶ್ರೀಕಂಠಪ್ಪ, ಪುರಸಭಾ ಮಾಜಿ ಸದಸ್ಯ ರವೀಶ್‌, ಜಾವಗಲ್‌ನ ತಮ್ಮಯ್ಯಣ್ಣ ಅವರು ರಾಜಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

ಕಾರ್ಯಕ್ರಮಕ್ಕೆ ಮಾಜಿ ಸಚಿವ ಎ.ಮಂಜು ಗೈರಾಗಿದ್ದರು. ವೇದಿಕೆಯಲ್ಲಿ ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌, ಮಾಜಿ ಶಾಸಕರಾದ ಎ.ಎಸ್‌.ಬಸವರಾಜು, ಬಿ.ಆರ್‌.ಗುರುದೇವ್‌, ಎಚ್‌.ಎಂ.ವಿಶ್ವನಾಥ್‌, ಮೈಸೂರು ವಿಭಾಗದ ಪ್ರಭಾರ ಮೈ.ವಿ. ರವಿಶಂಕರ್‌, ಮುಖಂಡರಾದ ಶಿವನಂಜೇಗೌಡ, ಮರಿಸ್ವಾಮಿ, ನಾರ್ವೆ ಸೋಮಶೇಖರ್‌, ರೇಣುಕುಮಾರ್‌, ಶ್ವೇತಾ ಪ್ರಸನ್ನ, ಅಡಗೂರು ಮಂಜು ಮತ್ತಿತರರು ಇದ್ದರು.

ನಿದ್ದೆ ಮಾಡುತ್ತಿದ್ದ ಸರ್ಕಾರ ಹೋಗಿದೆ

ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 24 ಮಂದಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆ ನಡೆಯಿತು. ಮರಳು ಮತ್ತು ಭೂಗಳ್ಳರ ಸರ್ಕಾರ ಸಿದ್ದರಾಮಯ್ಯ ಸರ್ಕಾರವಾಗಿತ್ತು. ಅದೊಂದು ನರಹಂತಕ ಸರ್ಕಾರವೇ ಆಗಿತ್ತು. ನಿದ್ರೆ ಮಾಡುವ ಸಿದ್ದರಾಮಯ್ಯ ಸರ್ಕಾರ ಹೋಗಿ, ಕುಮಾರಸ್ವಾಮಿ ಅವರ ತಾಜ್‌ಹೊಟೇಲ್‌ ಸರ್ಕಾರ ಹೋಗಿ ಈಗ ದಿನಕ್ಕೆ 20 ಗಂಟೆ ಕೆಲಸ ಮಾಡುವ ಬಿ.ಎಸ್‌.ಯಡಿಯೂರಪ್ಪ ಸರ್ಕಾರ ಬಂದಿದೆ. ಹಾಸನದಲ್ಲಿ ಜೆಡಿಎಸ್‌ ಕಚೇರಿ ಖಾಲಿಯಾಗಿ, ಬಿಜೆಪಿ ಕಚೇರಿ ತಂಬುತ್ತಿದೆ. ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸಲಹೆ ನೀಡಿದರು.