ಬೈಯ್ಯಪ್ಪನಹಳ್ಳಿ-ಕೆ.ಆರ್‌.ಪುರ ಸ್ಟೀಲ್‌ ಗರ್ಡರ್‌ ನಿರ್ಮಾಣ ವಿಳಂಬದಿಂದ ಸಮಸ್ಯೆ

ಬೆಂಗಳೂರು(ನ.30):  ವೈಟ್‌ಫೀಲ್ಡ್‌-ಕೆ.ಆರ್‌.ಪುರ ಮಧ್ಯೆಯ 13 ಕಿಮೀ ಮಾರ್ಗದಲ್ಲಿನ ‘ನಮ್ಮ ಮೆಟ್ರೋ’ದ ವಾಣಿಜ್ಯ ಸಂಚಾರ ಮುಂದಿನ ವರ್ಷದ ಮಾರ್ಚ್‌ ತಿಂಗಳಾಂತ್ಯದೊಳಗೆ ಆರಂಭಗೊಳ್ಳುವುದು ಬಹುತೇಕ ಖಚಿತವಾಗಿದ್ದರೂ ಬೈಯ್ಯಪ್ಪನಹಳ್ಳಿ-ಕೆ.ಆರ್‌.ಪುರ ಮಧ್ಯೆಯ ಎರಡೂವರೆ ಕಿ.ಮೀ. ಸಂಚಾರಕ್ಕೆ ಇನ್ನಷ್ಟು ಸಮಯ ಕಾಯುವುದು ಅನಿವಾರ್ಯವಾಗಿದೆ. ಸದ್ಯ ಕೆಂಗೇರಿಯಿಂದ ಬೈಯ್ಯಪ್ಪನಹಳ್ಳಿಯವರೆಗೆ ಸಾಗುವ ನೇರಳೆ ಮಾರ್ಗದ ವಿಸ್ತರಣೆ ಇದಾಗಿದೆ. ಆದರೆ ಬೈಯ್ಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ ತನಕದ 15.5 ಕಿಮೀ ಮಾರ್ಗವನ್ನು ಒಂದೇ ಹಂತದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬ ಮೆಟ್ರೋ ನಿಗಮದ ಗುರಿ ಸಾಕಾರವಾಗುವ ಲಕ್ಷಣ ಕಾಣಿಸುತ್ತಿಲ್ಲ. ಆದ್ದರಿಂದ ಈ ಮಾರ್ಗ ಎರಡು ಹಂತದಲ್ಲಿ ಸಂಚಾರಕ್ಕೆ ತೆರವಾಗುವ ಸಾಧ್ಯತೆಯಿದೆ.

ಬೈಯ್ಯಪ್ಪನಹಳ್ಳಿ ಡಿಪೋದ ಬಳಿ ರೈಲ್ವೇ ಕ್ರಾಸಿಂಗ್‌ಗೆ ಬಳಸಬೇಕಾದ ಸ್ಟೀಲ್‌ ಗರ್ಡರ್‌ನ ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭಗೊಂಡಿಲ್ಲ. ಈ ಸ್ಟೀಲ್‌ ಗರ್ಡರ್‌ ನಿರ್ಮಾಣಗೊಂಡು, ಅಳವಡಿಕೆ ಪ್ರಕ್ರಿಯ ಪೂರ್ಣಗೊಳ್ಳಲು ಮುಂದಿನ ವರ್ಷದ ದ್ವಿತೀಯಾರ್ಧದ ತನಕ ಕಾಯಬೇಕಾಗಬಹುದು ಎಂದು ಮೆಟ್ರೋದ ಅಧಿಕಾರಿಗಳು ಹೇಳುತ್ತಾರೆ. ಆದ್ದರಿಂದ ಇನ್ನೂ ಕಾಮಗಾರಿ ಪೂರ್ಣಗೊಳ್ಳದ ಈ 2.5 ಕಿಮೀ ಮಾರ್ಗ ವೈಟ್‌ಫೀಲ್ಡ್‌-ಕೆಂಗೇರಿ ಮಾರ್ಗದ ಸರಾಗ ಸಂಚಾರಕ್ಕೆ ತಾತ್ಕಾಲಿಕ ಅಡ್ಡಿಯಾಗಿದೆ.

Namma Metro phase-3: ಮೆಟ್ರೋ ಮೂರನೇ ಹಂತಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್

ಮಹಾದೇವಪುರ, ಗರುಡಾಚಾರ್‌ಪಾಳ್ಯ, ಹೂಡಿ ಜಂಕ್ಷನ್‌, ಸೀತಾರಾಮಪಾಳ್ಯ, ಕುಂದಲಹಳ್ಳಿ, ನಲ್ಲೂರಹಳ್ಳಿ, ಸೀತಾರಾಮಪಾಳ್ಯ, ಶ್ರೀ ಸತ್ಯ ಸಾಯಿ ಹಾಸ್ಟಿಟಲ್‌, ಪಟ್ಟಂದೂರು ಅಗ್ರಹಾರ, ಕಾಡುಗೋಡಿ, ಚನ್ನಸಂದ್ರ ಮತ್ತು ವೈಟ್‌ಫೀಲ್ಡ್‌ ನಿಲ್ದಾಣಗಳ ಪ್ರಯಾಣಿಕರಿಗೆ ಇನ್ನು ಮೂರ್ನಾಲ್ಕು ತಿಂಗಳಲ್ಲಿ ಮೆಟ್ರೋ ಸೇವೆ ಲಭ್ಯವಾಗಲಿದೆ. ಸದ್ಯ ಹಳಿಗಳ ಕಾಮಗಾರಿ, ವಿದ್ಯುದ್ದೀಕರಣ, ಮೆಟ್ರೋದ ಚಲನೆಯ ಪರೀಕ್ಷೆಗಳು ನಡೆಯುತ್ತಿದೆ. ಮೆಟ್ರೋ ನಿಲ್ದಾಣಗಳ ಒಳಾಂಗಣ ವಿನ್ಯಾಸದ ಕಾಮಗಾರಿಗಳು ಚಾಲ್ತಿಯಲ್ಲಿವೆ.

ವೈಟ್‌ಫೀಲ್ಡ್‌-ಗರುಡಾಚಾರ್‌ಪಾಳ್ಯದ ಮಾರ್ಗದಲ್ಲಿ ಪ್ರಯೋಗಾರ್ಥ ಮೆಟ್ರೋ ಸಂಚಾರ ನಿಗದಿಯಂತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇದು ಕೆ. ಆರ್‌. ಪುರದ ತನಕ ವಿಸ್ತರಣೆಗೊಳ್ಳಲಿದೆ. ಸದ್ಯ ಪ್ರಯೋಗಾರ್ಥ ಸಂಚಾರದಲ್ಲಿ ಸಮಸ್ಯೆಗಳು ಕಂಡುಬಂದಿಲ್ಲ. ಫೆಬ್ರವರಿಯಲ್ಲಿ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಪರೀಕ್ಷಾರ್ಥ ಸಂಚಾರದ ಪರಿಶೀಲನೆ ನಡೆಸಲಿದ್ದಾರೆ. ಅವರು ಹಸಿರು ನಿಶಾನೆ ತೋರಿದ ನಂತರ ಜನಸಾಮಾನ್ಯರಿಗೆ ಮೆಟ್ರೋ ಬಳಕೆ ಲಭ್ಯವಾಗಲಿದೆ ಎಂದು ಮೆಟ್ರೋದ ಅಧಿಕಾರಿಗಳು ತಿಳಿಸುತ್ತಾರೆ.

ಇದೇ ವೇಳೆ ಈ ಮಾರ್ಗದ ಇನ್ನೊಂದು ತುದಿ ಕೆಂಗೇರಿಯಿಂದ ಚಲ್ಲಘಟ್ಟದ 1.8 ಕಿಮೀ ಮಾರ್ಗದ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು ಮುಂದಿನ ಏಪ್ರಿಲ್‌ ಹೊತ್ತಿಗೆ ಸಾರ್ವಜನಿಕರ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ.