ಚಿಕ್ಕಬಳ್ಳಾಪುರ: ಪ್ರೀತಿಸಿ ಸಪ್ತಪದಿ ತುಳಿದ ಪ್ರೇಮಿಗಳು, ಠಾಣೆ ಬಳಿ ಹೈಡ್ರಾಮಾ
ಪೊಲೀಸ್ ಠಾಣೆಗೆ ಬಂದ ಮಗಳನ್ನು ಮತ್ತೊಂದು ಕಾರಲ್ಲಿ ಕರೆದೊಯ್ದ ಪೋಷಕರು
ಚಿಕ್ಕಬಳ್ಳಾಪುರ(ಅ.22): ಬಾಲ್ಯದಿಂದಲೇ ಪ್ರೀತಿ, ಪ್ರೇಮದ ಬಲೆಯಲ್ಲಿ ಬಿದ್ದಿದ್ದ ಯುವ ಪ್ರೇಮಿಗಳು ವಯಸ್ಸಿಗೆ ಬಂದ ಬಳಿಕ ಪೋಷಕರ ವಿರೋಧದ ನಡುವೆಯು ಓಡಿ ಹೋಗಿ ಸಪ್ತಪದಿ ತುಳಿದಿದ್ದಾರೆ. ಆದರೆ ಪೊಲೀಸ್ ಠಾಣೆಗೆ ಕಾರಿನಲ್ಲಿ ಬರುವ ಸುಳಿವು ಅರಿತ ಯುವತಿ ಪೋಷಕರು ಕಾರನ್ನು ಅಡ್ಡಗಟ್ಟಿ ಆಕೆಯನ್ನು ವರನಿಂದ ತಪ್ಪಿಸಿ ಕರೆದೊಯ್ದ ಪ್ರಸಂಗ ಶುಕ್ರವಾರ ನಗರ ಠಾಣೆ ಬಳಿ ನಡೆಯಿತು.
ಏನಿದು ಪ್ರಕರಣ:
ಪ್ರೀತಿಸಿ ಮದುವೆಯಾದ ರಾಮು (22) ಹಾಗೂ ಮಧು(20)(ಹೆಸರು ಬದಲಾಯಿಸಲಾಗಿದೆ) ಚಿಕ್ಕಬಳ್ಳಾಪರ ನಗರವಾಸಿಗಳಾಗಿದ್ದು, ಒಂದೇ ಸಮುದಾಯಕ್ಕೆ ಸೇರಿದ್ದಾರೆ. ಶಾಲಾ, ಕಾಲೇಜ್ ಹಂತದಲ್ಲಿ ಪರಸ್ಪರ ಪ್ರೀತಿಸಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ ಮದುವೆಗೆ ಯುವತಿ ಕಡೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಇಬ್ಬರು ಓಡಿ ಹೋಗಿ ಮದುವೆ ಆಗಿದ್ದಾರೆ.
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಗೆ ಚಿಂತನೆ: ಸಚಿವ ಎಂಟಿಬಿ ನಾಗರಾಜ್
ಠಾಣೆ ಬಳಿ ಹೈಡ್ರಾಮಾ:
ಮಧು ಪೋಷಕರು ತಮ್ಮ ಮಗಳು ಕಾಣೆ ಆಗಿದ್ದಾಳೆಂದು ಹೇಳಿ ಚಿಕ್ಕಬಳ್ಳಾಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಧು, ರಾಮು ಜೊತೆ ಸಪ್ತಪದಿ ತುಳಿದು ಆತನೊಂದಿಗೆ ಸಂಸಾರದ ನೊಗ ಹೊರಲು ಸಿದ್ದಳಾಗಿದ್ದಳು. ಕಾಣೆ ಆಗಿದ್ದರ ಕುರಿತು ಠಾಣೆಯಲ್ಲಿ ತಂದೆ ದೂರು ದಾಖಲಿಸಿದ್ದರ ಮೇರೆಗೆ ಪ್ರಿಯಕರನೊಂದಿಗೆ ಮದುವೆ ಆಗಿದ್ದ ಮಧು , ತನ್ನ ಪತಿ ರಾಮು ಜೊತೆ ಕಾರಿನಲ್ಲಿ ಪೊಲೀಸ್ ಠಾಣೆಗೆ ಆಗಮಿಸುತ್ತಿದ್ದರು. ಈ ವೇಳೆ ನಗರ ಠಾಣೆ ಮುಂದೆ ಮಧು ಪೋಷಕರು ಮೊದಲೇ ಜಮಾಯಿಸಿ ಠಾಣೆ ಒಳಗೆ ಕಾರು ತೆರಳದಂತೆ ಬ್ಯಾರಿಕೇಡ್‌ಗಳ ಬೇಲಿ ನಿರ್ಮಿಸಿ ರಾಮು, ಮಧು ದಂಪತಿ ತೆರಳುವ ಕಾರನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ ಕಾರಿನಲ್ಲಿದ್ದ ಮಧುರನ್ನು ಪೋಷಕರು ಮತ್ತೊಂದು ಕಾರಿನಲ್ಲಿ ಎತ್ತಾಕಿಕೊಂಡು ಹೋಗಿದ್ದಾರೆ. ಮಹಿಳಾ ಠಾಣೆ ಮುಂದೆ ಭಾರೀ ಹೈಡ್ರಾಮಾ ನಡೆದು ಹೋಗಿದೆ. ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿ ಕುತೂಹಲದಿಂದ ವೀಕ್ಷಿಸುತ್ತಿದ್ದರು.