*  ಬೆಂಗ್ಳೂರಿನ ಬಿಟಿಎಂ ಲೇಔಟ್‌ನಲ್ಲಿ ಅವಘಡ*  ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರು ಇಲ್ಲದ ಕಾರಣ ತಪ್ಪಿದ ಭಾರೀ ಅನಾಹುತ*  ಈ ಘಟನೆಯಿಂದ ಕಾಮಗಾರಿ ತುಸು ವಿಳಂಬವಾಗಬಹುದು  

ಬೆಂಗಳೂರು(ಅ.25): ಬೆಂಗಳೂರು(Bengaluru) ಮೆಟ್ರೋ(Metro) ನಿಗಮದ ಹಂತ-2ರ ಕಾಮಗಾರಿ ನಡೆಯುತ್ತಿರುವ ಬಿಟಿಎಂ ಲೇಔಟ್‌ನ ಉಡುಪಿ ಗಾರ್ಡನ್‌ ಸಿಗ್ನಲ್‌ ಬಳಿ ಲಾಚಿಂಗ್‌ ಗಾರ್ಡರ್‌(Crane) ಒಂದು 40 ಅಡಿ ಎತ್ತರದಿಂದ ಕುಸಿದು ಬಿದ್ದಿದ್ದು ಭಾರಿ ಅವಘಡವೊಂದು ಕೂದಲೆಳೆಯಿಂದ ತಪ್ಪಿದೆ.

ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಮೆಟ್ರೋ ಕಾರ್ಮಿಕರು(Workers) ಇಲ್ಲದ್ದು ಮತ್ತು ಮುಂಜಾನೆಯ ಅವಧಿ ಮತ್ತು ಭಾನುವಾರವಾಗಿದ್ದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿದ್ದರಿಂದ ಸಂಭಾವ್ಯ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಬೆಳಗ್ಗೆ 6.15ರ ಹೊತ್ತಿಗೆ ಆರ್‌ವಿ ರೋಡ್‌-ಬೊಮ್ಮಸಂದ್ರ (ಹಳದಿ ಮಾರ್ಗ)ದ ಕಾಮಗಾರಿ ವೇಳೆ ಮೆಟ್ರೋ ಹಳಿಗಳ ಕೆಳಗೆ ಬರುವ ಸೆಗ್ಮೆಂಟ್‌ಗಳನ್ನು ಜೋಡಿಸುವ 260 ಟನ್‌ ಭಾರದ ಲಾಚಿಂಗ್‌ ಗಾರ್ಡರ್‌ ತುಂಡಾಗಿ ಬಿದ್ದಿದೆ. ಲಾಂಚಿಂಗ್‌ ಗಾರ್ಡರ್‌ ತುಂಡಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಕಾಮಗಾರಿ ತುಸು ವಿಳಂಬವಾಗಲಿದೆ.

2011ರಲ್ಲಿ ಹಳಿಗೆ ಇಳಿದ ನಮ್ಮ ಮೆಟ್ರೋಗೆ ದಶಕದ ಸಂಭ್ರಮ

ಯಾಂತ್ರಿಕ ವೈಫಲ್ಯ:

ಸ್ಥಳಕ್ಕೆ ಮೆಟ್ರೋದ ಇಂಜಿನಿಯರ್‌ಗಳು ಭೇಟಿ ನೀಡಿ ಪ್ರಾಥಮಿಕ ವರದಿ ನೀಡಿದ್ದು ಯಾಂತ್ರಿಕ ವೈಫಲ್ಯದಿಂದ(Mechanical Failure) ಈ ದುರ್ಘಟನೆ ನಡೆದಿದೆ ಎಂದು ವರದಿ(Report) ನೀಡಿದ್ದಾರೆ. ಈ ಯಂತ್ರವನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇತ್ತಿಚೆಗೆ ವೆಂಕಟೇಶಪುರ-ಟ್ಯಾನರಿ ರಸ್ತೆ ನಿಲ್ದಾಣ ಮಾರ್ಗದಲ್ಲಿ ಸುರಂಗ ಕೊರೆಯುತ್ತಿದ್ದಾಗ ಬಾವಿ ಪತ್ತೆಯಾಗಿ ಅಲ್ಲಿ ಕಟ್ಟಡವೊಂದು ಕುಸಿದು ಮನೆಯೊಂದು ಕುಸಿಯುವ ಭೀತಿ ನಿರ್ಮಾಣವಾಗಿತ್ತು. ಆ ಕಟ್ಟಡದಲ್ಲಿ ವಾಸಿಸುತ್ತಿದ್ದವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

ಅನಿರೀಕ್ಷಿತ ಘಟನೆ: ಫರ್ವೆಜ್‌

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೆಜ್‌, ಇದೊಂದು ಅನಿರೀಕ್ಷಿತ ಘಟನೆ. ಹಂತ ಎರಡರ ಕಾಮಗಾರಿಯಲ್ಲಿ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ. ನಾಲ್ಕು ಲಾಂಚರ್‌ಗಳ ಮೂಲಕ ಕಾಮಗಾರಿ ನಡೆಯುತ್ತಿತ್ತು. ಈಗ ಒಂದು ಲಾಂಚರ್‌(Launcher) ಮುರಿದಿದ್ದು ಇದನ್ನು ಸರಿಪಡಿಸಲು ಸಾಧ್ಯವಿಲ್ಲ. ಲಾಂಚಿಂಗ್‌ ಗಾರ್ಡರ್‌ ಅನ್ನು ರಿಮೋಟ್‌ ಕಂಟ್ರೋಲ್‌ ನಿಂದ ನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಕಾರ್ಮಿಕರು ಯಂತ್ರದ ಸಮೀಪ ಇರಲಿಲ್ಲ. ಈ ಘಟನೆಯಿಂದ ಕಾಮಗಾರಿ ತುಸು ವಿಳಂಬವಾಗಬಹುದು ಎಂದು ಹೇಳಿದ್ದಾರೆ.