ವಿರಾಜಪೇಟೆ [ಆ.15]:  ಮಹಾಮಳೆಯಿಂದುಂಟಾಗಿರುವ ಪ್ರವಾಹ ಹಾಗೂ ಭೂಕುಸಿತಗಳಿಂದ ಚೇತರಿಸಿಕೊಳ್ಳುವ ಮುನ್ನವೇ ಕೊಡಗು ಜಿಲ್ಲೆಗೆ ಮತ್ತೊಂದು ದೊಡ್ಡ ಕುಸಿತದ ಆತಂಕ ಎದುರಾಗಿದೆ. ಜಿಲ್ಲೆಯ ವಿರಾಜಪೇಟೆ ಪಟ್ಟಣಕ್ಕೆ ತಾಗಿಕೊಂಡೇ ಇರುವ ಅಯ್ಯಪ್ಪ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಒಂದು ವೇಳೆ ಬಿದ್ದದ್ದೇ ಆದಲ್ಲಿ ಅರ್ಧ ಪಟ್ಟಣಕ್ಕೇ ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಸುಮಾರು 700 ಅಡಿ ಎತ್ತರವಿರುವ ಇಲ್ಲಿನ ಬೃಹದಾಕಾರದ ಬೆಟ್ಟದಲ್ಲಿ ನಡುವಿನಲ್ಲಿ ಸುಮಾರು ನಾಲ್ಕು ಅಡಿ ಆಳ, 20 ಮೀಟರ್‌ ಉದ್ದಕ್ಕೆ ಬಿರುಕು ಕಾಣಿಸಿಕೊಂಡು ಬೆಟ್ಟದ ತಪ್ಪಲಲ್ಲಿ ವಾಸಿಸುವ ನಾಗರಿಕರಲ್ಲಿ ಆತಂಕ ಮೂಡಿಸಿತ್ತು. ಬೆಟ್ಟಬಿರುಕು ಬಿಟ್ಟಸ್ಥಳಕ್ಕೆ ಭೇಟಿ ನೀಡಿದ್ದ ಭೂ ವಿಜ್ಞಾನ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಮಳೆ ಮುಂದುವರಿದಲ್ಲಿ ಬೆಟ್ಟಕುಸಿಯುವುದು ಖಚಿತ ಎಂದು ವರದಿ ನೀಡಿದ್ದಾರೆ. ಜೊತೆಗೆ ಬೆಟ್ಟದ ಬಿರುಕಿಗೆ ನೀರು ಸೇರದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಮಾತ್ರವಲ್ಲ ಅತಿಯಾದ ಮಳೆ ಬಂದಲ್ಲಿ ಸುರಕ್ಷಿತೆಯ ದೃಷ್ಟಿಯಿಂದ ಬೆಟ್ಟದ ಕೆಳಗಿರುವ ಹಾಗೂ ಅಕ್ಕಪಕ್ಕದ ಜನರನ್ನು ಸ್ಥಳಾಂತರ ಮಾಡುವುದು ಒಳಿತು ಎಂದು ಸೂಚಿಸಿದ್ದಾರೆ.

ಅರ್ಧಕ್ಕರ್ಧ ಪಟ್ಟಣಕ್ಕೆ ಹಾನಿ ಸಾಧ್ಯತೆ : ಅಯ್ಯಪ್ಪ ಬೆಟ್ಟದ ತಪ್ಪಲಲ್ಲೇ ಇರುವ ವಿರಾಜಪೇಟೆ ಸುಮಾರು 8.26 ಚದರ ಕಿ.ಮೀ. ವ್ಯಾಪ್ತಿಯಲ್ಲಿ ವ್ಯಾಪಿಸಿಕೊಂಡಿದೆ. ಬೆಟ್ಟಕುಸಿದಲ್ಲಿ ಅರ್ಧಕ್ಕರ್ಧ ಪಟ್ಟಣಕ್ಕೆ ಹಾನಿಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಪಟ್ಟಣದ ತೆಲಗರ ಬೀದಿ, ತಿಮ್ಮಯ್ಯ ಲೇಔಟ್‌, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಪ್ರದೇಶದವರೆಗೂ ಆತಂಕ ತಪ್ಪಿದ್ದಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಕರ್ನಾಟಕ ಪ್ರವಾಃದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

268 ಮಂದಿ ಸ್ಥಳಾಂತರ: ಬುಧವಾರ ಹಾಗೂ ಗುರುವಾರಗಳಂದು ಕೊಡಗಿನಲ್ಲಿ ಸತತ ಮಳೆಯಾಗುವ ಮುನ್ಸೂಚನೆಯಿದೆ. ಹೀಗಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಬುಧವಾರ ಬೆಳಗ್ಗಿನ ಜಾವವೇ ಬಿರುಕಿರುವ ಜಾಗದ ಸಮೀಪ ವಾಸಿಸುತ್ತಿದ್ದ ಮೂರು ಕುಟುಂಬಗಳ ಏಳು ಮಂದಿಯನ್ನು ಪಟ್ಟಣದಲ್ಲಿ ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಯಿತು. ಆ ಬಳಿಕ ಆ ಭಾಗದಲ್ಲಿ ವಾಸಿಸುತ್ತಿದ್ದ 268 ನಿವಾಸಿಗಳೂ ಸ್ವಯಂಪ್ರೇರಣೆಯಿಂದ ವಿರಾಜಪೇಟೆಯ ಬಾಲಕಿಯರ ಪ್ರೌಢಶಾಲೆಯಲ್ಲಿರುವ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದಾರೆ. ಬುಧವಾರ ಇಡೀ ದಿನ ವಿರಾಜಪೇಟೆಯಲ್ಲಿ ಧಾರಾಕಾರ ಮಳೆಯಾಗಿದ್ದು ಬೆಟ್ಟದ ತಪ್ಪಲಲ್ಲಿ ವಾಸಿಸುವ ಜನರಲ್ಲೂ ಆತಂಕ ಹುಟ್ಟಿಕೊಂಡಿದೆ