ಉಡುಪಿ(ಜೂ.04): ಜಿಲ್ಲೆಯಲ್ಲಿ ಕೊರೋನಾ ‘ಮಹಾ ಸೋಂಕು’ ಸ್ಫೋಟ ಮುಂದುವರಿದಿದೆ. ಬುಧವಾರ 62 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಅವರೆಲ್ಲರೂ ಮಹಾರಾಷ್ಟ್ರದಿಂದ ಹಿಂದಕ್ಕೆ ಬಂದವರಾಗಿದ್ದಾರೆ.

ಜಿಲ್ಲೆಯಲ್ಲೀಗ ಒಟ್ಟು ಸೋಂಕಿತರ ಸಂಖ್ಯೆ 472ಕ್ಕೆ ಏರಿದೆ. ಅವರಲ್ಲಿ 433 ಸೋಂಕಿತರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಬುಧವಾರ ಪತ್ತೆಯಾದ ಸೋಂಕಿತರಲ್ಲಿ 15 ಮಂದಿ ಮಹಿಳೆಯರು ಮತ್ತು 43 ಮಂದಿ ಪುರುಷರು ಮತ್ತು 10 ವರ್ಷದೊಳಗಿನ 4 ಮಂದಿ ಮಕ್ಕಳಿದ್ದಾರೆ. 4 ಮಂದಿ 60 ವರ್ಷ ಮೇಲಿನವರಾಗಿದ್ದಾರೆ.

ಖಾಸಗಿ ಬಸ್‌ ಪ್ರಯಾಣದಲ್ಲಿ ಅಂತರ ಇಲ್ಲದೆ ಸೋಂಕಿಗೆ ಆಹ್ವಾನ!

ಅವರೆಲ್ಲರೂ 7 ದಿನಗಳ ಸರ್ಕಾರಿ ಕ್ವಾರಂಟೈನ್‌ ಮುಗಿಸಿ ಮನೆಗೆ ಹಿಂದಕ್ಕೆ ಹೋಗಿದ್ದರು. ಮನೆಗೆ ಹೋದ ಮೇಲೆ ಅವರಿಗೆ ಸೋಂಕಿರುವುದಾಗಿ ವರದಿ ಬಂದಿದ್ದು, ಅದರಂತೆ ಅವರನ್ನು ಮನೆಯಿಂದ ಕೋವಿಡ್‌ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರಲ್ಲಿ 20 ಮಂದಿ ಗುಣಮುಖರಾಗಿ ಬುಧವಾರ ಬಿಡುಗಡೆಗೊಂಡಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 84 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಂತಾಗಿದೆ. ಒಬ್ಬರು ಮೃತರಾಗಿದ್ದಾರೆ. ಪ್ರಸ್ತುತ ಒಟ್ಟು 388 ಮಂದಿ ಸಕ್ರಿಯ ಸೋಂಕಿತರಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಇನ್ನಷ್ಟುಕಂಟೈನ್ಮೆಂಟ್‌ ವಲಯಗಳು

ಬುಧವಾರದವರೆಗೆ ಜಿಲ್ಲೆಯಲ್ಲಿ 63 ಕಡೆಗಳಲ್ಲಿ ಕೊರೋನಾ ಸೋಂಕಿತರ ಮನೆಗಳ ಪ್ರದೇಶಗಳನ್ನು ಕಂಟೈನ್ಮೆಂಟ್‌ ವಲಯ ಎಂದು ಘೋಷಿಸಿ, ಅಲ್ಲಿ ಜನಸಂಚಾರವನ್ನು ನಿರ್ಬಂಧಿಸಿದೆ. ಈಗ ಮತ್ತೇ 62 ಸೋಂಕಿತರು ಹೊಸದಾಗಿ ಪತ್ತೆಯಾಗಿರುವುದರಿಂದ ಇನ್ನಷ್ಟುಕಂಟೈನ್ಮೆಂಟ್‌ ವಲಯಗಳು ಸೃಷ್ಟಿಯಾಗಲಿವೆ. ಜಿಲ್ಲೆಯಲ್ಲಿ ಒಟ್ಟು ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ ನೂರು ದಾಟಲಿದೆ.