ಬೆಂಗಳೂರು[ಮೇ.31]: ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಫ್ಲಾಟ್‌ ನಂಬರ್‌ 1ರಲ್ಲಿ ಅನುಮಾನಸ್ಪದ ವಸ್ತು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಗ್ರೆನೇಡ್ ಮಾದರಿಯ ವಸ್ತುವಿನಂತೆ ಇದು ಕಂಡು ಬಂದಿದ್ದು, ಭಯಭೀತರಾಗಿರುವ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

"

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಪ್ಲಾಟ್‌ ನಂಬರ್‌ 1 ರಿಂದ ಬಿಹಾರದ ಕಡೆಗೆ ಹೋಗುವ ಸಂಘಮಿತ್ರ ರೈಲು ಇಂದು ಬೆಳಗ್ಗೆ ಒಂಬತ್ತು ಗಂಟೆಗೆ ಹೊರಡಬೇಕಾಗಿತ್ತು. ಆದರೆ ಈ ಸಂದರ್ಭದಲ್ಲಿ ಹಳಿ ಪಕ್ಕದಲ್ಲಿ ಗ್ರೆನೇಡ್ ಮಾದರಿ ವಸ್ತು ಬಿದ್ದಿರುವುದು ಬಗ್ಗೆ ರೈಲ್ವೆ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಕೂಡಲೇ ಕೂಡಲೇ ಸ್ಥಳವನ್ನು ತಮ್ಮ ವಶಕ್ಕೆ ತೆಗೆದುಕೊಂಡ ಆರ್‌ಎಎಫ್ ಮತ್ತು ಪೊಲೀಸರು, ಬಾಂಬ್‌ ನಿಷ್ಕ್ರೀಯ ದಳಕ್ಕೆ ಮಾಹಿತಿ ರವಾನಿಸಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು ಅನುಮಾನಸ್ಪದ ವಸ್ತು ಬಾಂಬ್ ಎಂದು ಭಾವಿಸಿದ ಜನರು ದಿಕ್ಕಾಪಾಲಾಗಿ ಸ್ಥಳದಿಂದ ಓಡಿಹೋಗಿದ್ದಾರೆ. ಸ್ಥಳದಲ್ಲಿ ಆತಂಕದ ವಾತವಾರಣ ನಿರ್ಮಾಣವಾಗಿದ್ದು, ರೈಲುಗಳ ಸಂಚಾರ ಕೆಲ ಸಮಯ ಸ್ಥಗಿತಗೊಳಿಸಲಾಗಿದೆ. ಪ್ರಾಥಮಿಕ ಮಾಹಿತಿಯನ್ವಯ ಈ ವಸ್ತು ಗ್ರೆನೇಡ್‌ ಮಾದರಿಯದ್ದು ಅಂತ ಹೇಳಲಾಗುತ್ತಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.