ಹಾನಗಲ್ ಉಪಚುನಾವಣೆ  ಗೆದ್ದಿದ್ದ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಮಾನೆಗೆ ಬಿಜೆಪಿ ಟಕ್ಕರ್ ಕೊಟ್ಟಿದೆ. 15 ಕೋಟಿ ರೂಪಾಯಿ ಅನುದಾನಕ್ಕೆ ಬ್ರೇಕ್ ಹಾಕಿದ ಸಿಎಂ ಬಸವರಾಜ ಬೊಮ್ಮಾಯಿ.

ಹಾವೇರಿ ( ಸೆ.13): ರಾಜಕಾರಣದಲ್ಲಿ ಸೋತವರಿಗೆ ತಿರುಗಿ ಗೆಲ್ಲೋ ಆಸೆ. ಗೆದ್ದವರನ್ನು ಸೋಲಿಸೋ ಆಸೆ ಇನ್ನು ಕೆಲವರಿಗೆ. ರಾಜಕಾರಣವೂ ಗೆಲುವು- ಸೋಲಿನ ಆಟವೇ.. ಇಡೀ ಬಿಜೆಪಿ ಸರ್ಕಾರವನ್ನೇ ಎದುರಿಸಿ ಹಾನಗಲ್ ಉಪಚುನಾವಣೆ ಗೆದ್ದಿದ್ದ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಮಾನೆಗೆ ಬಿಜೆಪಿ ಟಕ್ಕರ್ ಕೊಟ್ಟಿದೆ. ದಿವಂಗತ ಮಾಜಿ ಸಚಿವ ಸಿಎಂ ಉದಾಸಿ ಅಕಾಲಿಕ ನಿಧನದಿಂದ ತೆರವಾಗಿದ್ದ ಹಾನಗಲ್ ಕ್ಷೇತ್ರಕ್ಕೆ ಎದುರಾದ ಉಪ ಚುನಾವಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ದೊಡ್ಡ ಪ್ರತಿಷ್ಠೆಯೇ ಆಗಿತ್ತು. ಇಡೀ ಆಡಳಿತ ಯಂತ್ರದೊಂದಿಗೆ ಫೀಲ್ಡಿಗಳಿದಿದ್ದ ಬಸವರಾಜ ಬೊಮ್ಮಾಯಿಗೆ ಹಾನಗಲ್ ಮತದಾರ ಶಾಕ್ ಕೊಟ್ಟಿದ್ದ. ಬಿಜೆಪಿಯಿಂದ ಸ್ಪರ್ದಿಸಿದ್ದ ಶಿವರಾಜ ಸಜ್ಜನರ ಸೋತಿದ್ದು ಈಗ ಇತಿಹಾಸ. ಆದರೆ ಮತ್ತೆ ಈಗ 2023 ರ ಸಾವತ್ರಿಕ ಚುನಾವಣೆ ಸನಿಹದಲ್ಲೇ ಇದೆ. ಶಿವರಾಜ್ ಸಜ್ಜನರ ಈ ಬಾರಿಯೂ ನಾನೇ ಹಾನಗಲ್ ಬಿಜೆಪಿ ಅಭ್ಯರ್ಥಿ ಅಂತ ಜೋರಾಗೇ ಓಡಾಡ್ತಿದ್ದಾರೆ. ಚುನಾವಣೆ ಹತ್ರ ಇರೋ ಸಂದರ್ಭದಲ್ಲಿಯೇ ಈಗ ಅನುದಾನದ ವಿಚಾರದಲ್ಲಿ ಮತ್ತೆ ಕಾಂಗ್ರೆಸ್ - ಬಿಜೆಪಿ ನಡುವೆ ವಾರ್ ಶುರುವಾಗಿದೆ. ಉಪ ಚುನಾವಣೆ ಸೋತ ಜಾಗದಲ್ಲೇ ಸೆಡ್ಡು ಹೊಡೆಯಲು ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಪ್ಲ್ಯಾನ್ ಮಾಡಿದ್ದಾರೆ. ಅದರ ಭಾಗವಾಗೇ ಹಾನಗಲ್ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಮಾನೆ ವೇಗಕ್ಕೆ ಬ್ರೇಕ್ ಹಾಕೋ ಪ್ರಯತ್ನ ನಡೆದಿದೆ‌.

ಹಾನಗಲ್ ತಾಲೂಕಿನಲ್ಲಿ ಆದ ಮಳೆ ಹಾನಿಯಿಂದ ಹದಗೆಟ್ಟ ರಸ್ತೆಗಳ ರಿಪೇರಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ 15 ಕೋಟಿ ವಿಶೇಷ ಅನುದಾನ ಹಂಚಿಕೆ ಮಾಡಲಾಗಿತ್ತು. ಅತಿವೃಷ್ಠಿಯಿಂದ ಹಾನಿಯಾದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುದಾನ ಹಂಚಿಕೆ ಮಾಡಲಾಗಿತ್ತು. 293 ಕಾಮಗಾರಿಗಳಿಗೆ 15 ಕೋಟಿ ಅನುದಾನ ಹಂಚಿಕೆ ಮಾಡಿ ಆದೇಶ ಮಾಡಲಾಗಿತ್ತು. ಆದರೆ ಕಾಮಗಾರಿಗಳಿಗೆ ಟೆಂಡರ್ ಕರೆಯದೇ ಶಾಸಕ ಮಾನೆ ತಮಗೆ ಬೇಕಾದ ಗುತ್ತಿಗೆದಾರರಿಗೆ ತುಂಡು ಗುತ್ತಿಗೆ ನೀಡ್ತಿದ್ದಾರೆ.ಇದರಲ್ಲಿ ಅವ್ಯವಹಾರ ಆಗೋ ಸಾದ್ಯತೆ ಇದೆ ಎಂದು ಮಾಜಿ ಶಾಸಕ ಶಿವರಾಜ್ ಸಜ್ಜನರ ಸಿಎಂ ಗಮನಕ್ಕೆ ತಂದಿದ್ದಾರೆ.ಹೀಗಾಗಿ ಸಿಎಂ ಹಾನಗಲ್ ತಾಲೂಕಿನ ಅಭಿವೃದ್ಧಿ ಅನುದಾನಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿಸಿದ್ದಾರೆ.

ಶಿವರಾಜ್ ಸಜ್ಜನರ ಮನವಿ ಹಿನ್ನೆಲೆ ಹಾನಗಲ್ ಕ್ಷೇತ್ರದ ಅನುದಾನಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.ಕಾಮಗಾರಿಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಜಿಲ್ಲಾ ಪಂಚಾಯತ್ ಸಿಇಒ ಮಹಮದ್ ರೋಷನ್ ಆದೇಶ ಹೊರಡಿಸಿದ್ದಾರೆ. ಇದರಿಂದ ಅನುದಾನ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ವಾರ್ ಶುರುವಾದಂತಾಗಿದೆ.ತುಂಡು ಗುತ್ತಿಗೆ ನೀಡುವ ಮೂಲಕ ಮಾನೆ ಭ್ರಷ್ಟಾಚಾರ ಮಾಡ್ತಿದ್ದಾರೆ ಎಂದು ಮಾಜಿ ಶಾಸಕ ಶಿವರಾಜ್ ಸಜ್ಜನ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಮಾನೆ ತುಂಡು ಗುತ್ತಿಗೆ ಸರದಾರ ಎಂದ ಶಿವರಾಜ್ ಸಜ್ಜನರ: 
ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಹಾನಗಲ್ ಕ್ಷೇತ್ರದ ಆಪದ್ಬಾಂಧವ ಎಂದೇ ಪ್ರಸಿದ್ದಿ ಪಡೆದಿದ್ದಾರೆ. ಉಪಚುನಾವಣೆಯಲ್ಲೂ ಹಾನಗಲ್ ಕ್ಷೇತ್ರದ ಆಪದ್ಭಾಂಧವ ಅಂತಾನೇ ಮನೆಮಾತಾಗಿ ಗೆದ್ದಿದ್ರು. ಆದರೆ ಆಪದ್ಭಾಂಧವ ಬಿರುದಿಗೆ ತಿರುಗೇಟು ನೀಡಿರುವ ಬಿಜೆಪಿ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಮಾನೆ ತುಂಡು ಗುತ್ತಿಗೆ ಸರದಾರ ಎಂದು ಕರೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಶುರು ಮಾಡಿದೆ.

ಗುತ್ತಿಗೆದಾರರು ಪ್ರಧಾನಿಗೆ ಬರೆದ ಪತ್ರದಲ್ಲಿ ಹಾನಗಲ್ ತುಂಡು ಗುತ್ತಿಗೆ ಬಗ್ಗೆ ಪ್ತಸ್ತಾಪ ಮಾಡಿದ್ದಾರಾ? ಬಿಜೆಪಿಗೆ ಮಾನೆ ತಿರುಗೇಟು:
ಇತ್ತ ಈ ಕುರಿತು ಮಾತನಾಡಿರೋ ಶ್ರೀನಿವಾಸ್ ಮಾನೆ , ಶಿವರಾಜ್ ಸಜ್ಜನರ್ ಕ್ಷೇತ್ರದ ಅಭಿವೃದ್ಧಿಗೆ ಬಿಡುತ್ತಿಲ್ಲ. ಉದ್ದೇಶಪೂರ್ವಕವಾಗಿ ಅನುದಾನ ತಡೆಹಿಡಿದಿದ್ದಾರೆ. ಜಿಲ್ಲಾ ಪಂಚಾಯತಿ ಸಿ.ಇ.ಒ ಮಾಡಿರೋ ಆದೇಶದಲ್ಲಿ ಯಾವುದೇ ಅರ್ಥ ಇಲ್ಲ ಎಂದು ಕಿಡಿ ಕಾರಿದ್ದಾರೆ. ಸಂವಿಧಾನಾತ್ಮಕವಾಗಿ ಕಾರ್ಯಕ್ರಮಗಳಿಗೆ ಪ್ತಸ್ತಾವನೆ ಸಲ್ಲಿಸೋ ಅಧಿಕಾರ ಶಾಸಕರಿಗಿದೆ. ಜನರಿಂದ ಚುನಾಯಿತರಾಗಿ ಶಾಸಕರಿಗೆ ಅಧಿಕಾರ ಸಿಕ್ಕ ಮೇಲೆ ಯಾವುದೇ ಸರ್ಕಾರ ಇದ್ರೂ ಅಡ್ಡಿ ಹಾಕಬಾರದು.

ಶಾಸಕರಿಗೆ ಅಭಿವೃದ್ಧಿ ಕಾರ್ಯಗಳಲ್ಲಿ ಇನ್ನೊಬ್ರು ಹಸ್ತಕ್ಷೇಪ ಮಾಡಿರೋದು ನಾವು ಕಂಡಿಲ್ಲ. ಇಲಾಖೆಯವರು ಬಹಳಷ್ಟು ಮಳೆ ಆಗಿದೆ. ಬಹಳಷ್ಟು ರಸ್ತೆಗಳು ಹಾಳಾಗಿದೆ. ಅದಕ್ಕಾಗಿ ಅನುದಾನ ಸ್ಥಗಿತಗೊಳಿಸಿರೋದಾಗಿ ಆದೇಶ ಮಾಡಿದ್ದಾರೆ. ಈ ಆದೇಶ ನೋಡಿ ನನಗೆ ಆಶ್ಚರ್ಯ ಆಗಿದೆ.ಅದು ಸಿಎಂ ವಿಶೇಷ ಅನುದಾನ ಆಗಿದೆ. ಅದು ಸಿಎಂ ಅಧಿಕಾರವೂ ಹೌದು. ಆದರೆ ಇಡೀ ರಾಜ್ಯಕ್ಕೆ ಸರಾಸರಿಯಾಗಿ ಹಂಚಿಕೆ ಮಾಡಲಾಗಿದೆ. ಒಂದು ಕ್ಷೇತ್ರಕ್ಕೆ ಅನುದಾನ ಕೊಟ್ಟ ಮೇಲೆ ಅದಕ್ಕೆ ಹಕ್ಕು ಚ್ಯುತಿ ಬರಬಾರದು ಎಂಬ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಹೇಳಿದ್ದೇನೆ

ಈ ರಾಜ್ಯದ ಗುತ್ತಿಗೆದಾರರ ಸಂಘದ ಅದ್ಯಕ್ಷರು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಹಾನಗಲ್ ಗೆ ಸಂಬಂಧಿಸಿದ ತುಂಡು ಗುತ್ತಿಗೆ ವಿಷಯ ಏನಾದರೂ ಇದೆಯಾ? ಸಜ್ಜನರ ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ. ಇರುವಂತ ಅಲ್ಪಾವಧಿ ಸಮಯದಲ್ಲಿ ನಾವು ಅಭಿವೃದ್ಧಿ ಮಾಡಬೇಕು. ಆದರೆ ಇದಕ್ಕೆ ಬಿಜೆಪಿ ಅಭ್ಯರ್ಥಿ ಅಡ್ಡಗಾಲು ಹಾಕ್ತಿದ್ದಾರೆ.

ಕಳೆದೆರಡು ವರ್ಷಗಳಿಂದ ಭೀಕರ ಮಳೆ ಆಗಿದೆ. ನಮ್ಮ ಜಿಲ್ಲೆಯ 5 ಕ್ಷೇತ್ರಗಳಿಗೆ ಸಿಎಂ ವಿಶೇಷ ಅನುದಾನದಲ್ಲಿ ಅಲ್ಲಿನ ಶಾಸಕರು ಪ್ರಸ್ತಾವನೆ ಸಲ್ಲಿಸಿದಂತೆ 50 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದಾರೆ. ನಮ್ಮ ಕ್ಷೇತ್ರಕ್ಕೆ 15 ಕೋಟಿ ರೂ ಕೊಟ್ಟಿದ್ದಾರೆ ಎಂದು ಕಿಡಿ ಕಾರಿದರು. ಸದ್ಯ ಹಾನಗಲ್ ಕ್ಷೇತ್ರದಲ್ಲಿ ಪೊಲಿಟಿಕಲ್ ವಾರ್ ಮುಂದುವರೆದಿದ್ದು, ಅಭಿವೃದ್ಧಿ ಕೆಲಸಕ್ಕೆ ಮಾತ್ರ ಹಿನ್ನಡೆಯಾಗಿದೆ.