ಚಿಕ್ಕಮಗಳೂರು(ಜೂ.12): ಜಿಲ್ಲೆಯ ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬನಿಗೆ ಗುರುವಾರ ಕೊರೋನಾ ಸೋಂಕು ದೃಢಪಟ್ಟಿದ್ದು, ತೀವ್ರ ಆತಂಕ ಮೂಡಿಸಿದೆ. ಜೂ.24ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ ಎನ್ನುವಾಗಲೇ ವಿದ್ಯಾರ್ಥಿಯೊಬ್ಬನಲ್ಲಿ ಸೋಂಕು ಪತ್ತೆಯಾಗಿರುವುದು ಉಳಿದ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.

ಮನೆಯಲ್ಲಿದ್ದ: 

ಕೊರೋನಾ ಉಲ್ಬಣಗೊಂಡ ಸಂದರ್ಭದಲ್ಲಿ ವಸತಿ ನಿಲಯದಲ್ಲಿದ್ದ ಈ ವಿದ್ಯಾರ್ಥಿ ನಂತರ ಮನೆಗೆ ಬಂದು ಓದು ಮುಂದುವರಿಸಿದ್ದ. ಆತನಲ್ಲಿ ಸೋಂಕಿನ ಲಕ್ಷಣ ಕಂಡುಬಂದಿದ್ದರಿಂದ ಪರೀಕ್ಷೆ ನಡೆಸಿ ಇದೀಗ ಜಿಲ್ಲಾ ಕೋವಿಡ್‌-19 ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. 

SSLC ಪರೀಕ್ಷೆ; ಎಲ್ಲ ವಿದ್ಯಾರ್ಥಿಗಳ ಕಾಳಜಿ ವಹಿಸಿ

ಸದ್ಯ ಬಾಲಕನ ಸಂಪರ್ಕದಲ್ಲಿದ್ದ 55 ಮಂದಿ ಗಂಟಲ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಅವರೆಲ್ಲರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಗಂಗಾವತಿ ಮೌಲ್ವಿ, ಶಿವಮೊಗ್ಗ ಸ್ವಾಮೀಜಿಗೆ ಕೊರೋನಾ ಸೋಂಕು

ಕೊಪ್ಪಳದ ಗಂಗಾವತಿಯ ಮೌಲ್ವಿ ಮತ್ತು ಶಿವಮೊಗ್ಗದ ಸ್ವಾಮೀಜಿಯೊಬ್ಬರಿಗೆ ಕೊರೋನಾ ಸೋಂಕು ತಗಲಿರುವುದು ಆತಂಕಕ್ಕೆ ಕಾರಣವಾಗಿದೆ. 32 ವರ್ಷದ ಮೌಲ್ವಿ ಜೂ.8ರಂದು ಆಂಧ್ರಪ್ರದೇಶದ ಆದೋನಿಯಿಂದ ಗಂಗಾವತಿ ನಗರಕ್ಕೆ ಬೈಕ್‌ನಲ್ಲಿ ಆಗಮಿಸಿದ್ದರು. ಮಸೀದಿಯಲ್ಲಿ ಅವರು ಜೂ.9, 10ರಂದು ಪ್ರಾರ್ಥನೆ ಮಾಡಿದ್ದು, ಹತ್ತಿರದ ಮಾರ್ಕೆಟಿನಲ್ಲಿ ಹಣ್ಣು ತರಕಾರಿ ಖರೀದಿಸಿದ್ದರು. ಬಳಿಕ ಅನಾರೋಗ್ಯದಿಂದ ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಾ್ಯಬ್‌ ಟೆಸ್ವ್‌ ಮಾಡಿಸಿಕೊಂಡಿದ್ದು ಸೋಂಕು ದೃಢಪಟ್ಟಿದೆ. ಆ ಪ್ರದೇಶವನ್ನು ಈಗ ಸೀಲ್‌ಡೌನ್‌ ಮಾಡಲಾಗಿದೆ. ಇದೇ ವೇಳೆ ಶಿವಮೊಗ್ಗ ಜಿಲ್ಲೆಯೊಂದರ ಆಶ್ರಮದ ಸ್ವಾಮೀಜಿಯೊಬ್ಬರಿಗೂ ಸೋಂಕು ತಗುಲಿದೆ ಎನ್ನಲಾಗಿದ್ದು, ಆಶ್ರಮಕ್ಕೆ ಭಕ್ತರ ಪ್ರವೇಶವನ್ನು ಇದೀಗ ನಿರ್ಬಂಧಿ ಸೀಲ್‌ಡೌನ್‌ ಮಾಡಲಾಗಿದೆ.

ಕ್ವಾರಂಟೈನ್‌ ನಿರ್ಲಕ್ಷಿಸಿದ ಯೋಧನಿಗೆ ಕೊರೋನಾ

ದೆಹಲಿಯಿಂದ ಬಂದರೂ ಕ್ವಾರಂಟೈನ್‌ ಆಗದೆ ಊರೆಲ್ಲ ಸುತ್ತಾಡಿದ್ದ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಅಮೃತೇಶ್ವರ ನಗರದ ಸಿಆರ್‌ಪಿಎಫ್‌ ಯೋಧನೊಬ್ಬನಿಗೆ ಸೋಂಕು ತಗುಲಿದ್ದು, ಇದೀಗ ತೀವ್ರ ಆತಂಕ ಮೂಡಿಸಿದೆ. ಸಿಯಾಚಿನ್‌ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ರಜೆ ಮೇರೆಗೆ ಊರಿಗೆ ಬಂದಿದ್ದರು. ದೆಹಲಿಯಲ್ಲಿ ಇವರ ಗಂಟಲು ದ್ರವ ಪರೀಕ್ಷೆ ಮಾಡಿದಾಗ ನೆಗೆಟಿವ್‌ ಬಂದಿತ್ತು. ಅಲ್ಲಿಂದ ಜೂ.8 ರಂದು ಹುಬ್ಬಳ್ಳಿಗೆ ಬಂದು ಅಲ್ಲೂ ಗಂಟಲು ದ್ರವ ನೀಡಿ ಹೋಂ ಕ್ವಾರಂಟೈನ್‌ ಆಗಿದ್ದರು. ಜೂ.10ರಂದು ಪರೀಕ್ಷಾ ವರದಿ ಬಂದಿದೆ. ದೆಹಲಿಯಲ್ಲಿ ನೆಗೆಟಿವ್‌ ವರದಿ ಬಂದಿದ್ದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಕ್ವಾರಂಟೈನ್‌ ಅವಧಿಯನ್ನು ನಿರ್ಲಕ್ಷಿಸಿ ಊರಲ್ಲಿ ಸುತ್ತಾಡಿದ್ದರು ಎನ್ನಲಾಗಿದೆ.

2 ದಿನದಲ್ಲಿ ಹಸೆಮಣೆ ಏರ​ಬೇ​ಕಿದ್ದ ಎಸೈಗೆ ಕೊರೋನಾ

2 ದಿನದಲ್ಲಿ ಹಸಮಣೆಯೇರಬೇಕಿದ್ದ ಬೆಂಗಳೂರು ಶಂಕರಪುರಂ ಠಾಣೆ ಪಿಎಸ್‌ಐಗೆ ಕೊರೋನಾ ದೃಢಪಟ್ಟಿದ್ದು, ಇಲ್ಲಿನ ಕಿಮ್ಸ್‌ಗೆ ಬುಧವಾರ ದಾಖಲಾಗಿದೆ. ಅಥಣಿ ತಾಲೂಕಿನವರಾದ ಪಿಎಸ್‌ಐ ಇನ್ನೆರಡು ದಿನದಲ್ಲಿ ನಡೆಯಬೇಕಿದ್ದ ಮದುವೆಗೆ ಒಂದು ತಿಂಗಳು ರಜೆ ಪಡೆದು ಊರಿಗೆ ಹೊರಟ್ಟಿದ್ದಾಗ 2 ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಗಂಟಲು ದ್ರವ ನೀಡಿ ಅಲ್ಲಿಂದ ಇಬ್ಬರು ಸಿಬ್ಬಂದಿಯೊಂದಿಗೆ ಬೆಳಗಾವಿಗೆ ಹೊರಟ್ಟಿದ್ದರು. ದಾರಿ ಮಧ್ಯೆ ಧಾರವಾಡ ಠಾಣೆ ಪಿಎಸ್‌ಐಗೆ ಆಮಂತ್ರಣ ಪತ್ರ ನೀಡಿ ಹೊರಡಬೇಕೆನ್ನುವಷ್ಟರಲ್ಲಿ ಆಸ್ಪತ್ರೆಯಿಂದ ಕರೆ ಮಾಡಿ ಕೊರೋನಾ ಇರುವುದನ್ನು ತಿಳಿಸಿದ್ದು, ಇಲ್ಲಿನ ಕಿಮ್ಸ್‌ಗೆ ದಾಖಲಾಗಿದ್ದಾರೆ. ಮದುವೆ ಮುಂದೂಡಲಾಗಿದೆ ಎನ್ನಲಾಗಿದೆ. ಇವರಿಂದ ಆಮಂತ್ರಣ ಪಡೆದಿದ್ದ ಪಿಎಸ್‌ಐ ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿದ್ದು, ಹೋಂ ಕ್ವಾರಂಟೈನ್‌ನಲ್ಲಿರಿಸಲಾಗಿದೆ.